Advertisement

ಸತತ ಸೋಲಿನಿಂದ ಕಂಗೆಟ್ಟಿರುವ ಕೋಲ್ಕತ; ಇಂದು ರಾಜಸ್ಥಾನ್‌ ರಾಯಲ್ಸ್‌ ಎದುರಾಳಿ

11:21 PM Apr 17, 2022 | Team Udayavani |

ಮುಂಬೈ: ಆರರಲ್ಲಿ ಮೂರು ಸೋಲು, ಇದರಲ್ಲಿ ಸತತ ಎರಡು ಸೋಲು… ಕಳೆದ ಸಲದ ರನ್ನರ್ ಅಪ್‌ ಕೋಲ್ಕತ ನೈಟ್‌ರೈಡರ್ಸ್‌ನ ಸದ್ಯದ ಸ್ಥಿತಿ ಇದು. ಇನ್ನೊಂದೆಡೆ ಐದರಲ್ಲಿ ಮೂರನ್ನು ಗೆದ್ದಿರುವ ರಾಜಸ್ಥಾನ್‌ ರಾಯಲ್ಸ್‌. ಈ ತಂಡಗಳೆರಡು ಸೋಮವಾರ ಮುಖಾಮುಖಿ ಆಗಲಿವೆ. ಸೋಲಿನ ಸುಳಿಯಿಂದ ಹೇಗೆ ಹೊರಗೆ ಬರುವುದು ಎಂಬ ಚಿಂತೆ ಶ್ರೇಯಸ್‌ ಐಯ್ಯರ್‌ ಪಡೆಯದ್ದು.

Advertisement

ಕೋಲ್ಕತ ಹಿಂದಿನೆರಡು ಪಂದ್ಯಗಳಲ್ಲಿ ಡೆಲ್ಲಿ ಮತ್ತು ಹೈದರಾಬಾದ್‌ ಕೈಯಲ್ಲಿ 44 ರನ್‌ ಹಾಗೂ 7 ವಿಕೆಟ್‌ಗಳ ಸೋಲಿಗೆ ತುತ್ತಾಗಿತ್ತು. ಇದಕ್ಕೂ ಮೊದಲು ಆರ್‌ಸಿಬಿಗೆ ಶರಣಾಗಿತ್ತು. ಭರವಸೆಯಿಂದಲೇ ಪ್ರಸಕ್ತ ಋತುವನ್ನು ಆರಂಭಿಸಿದ ಕೆಕೆಆರ್‌ ಮರಳಿ ಗೆಲುವಿನ ಹಳಿ ಏರಬೇಕಾದ ಒತ್ತಡದಲ್ಲಿದೆ.

ಏರಾನ್‌ ಫಿಂಚ್‌ ಬಂದರೂ ಕೋಲ್ಕತದ ಆರಂಭಿಕ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ವೆಂಕಟೇಶ್‌ ಅಯ್ಯರ್‌ ಸಿಡಿದು ನಿಲ್ಲಲು ವಿಫ‌ಲರಾಗುತ್ತಿದ್ದಾರೆ. ನಾಯಕ ಶ್ರೇಯಸ್‌ ಐಯ್ಯರ್‌ ಅವರದು ಸರಾಸರಿ ಬ್ಯಾಟಿಂಗ್‌ (151 ರನ್‌). ಆ್ಯಂಡ್ರೆ ರಸೆಲ್‌ ಓಕೆ. ಅವರೇ ಈಗ ತಂಡದ ಗರಿಷ್ಠ ಸ್ಕೋರರ್‌ (179). ಜತೆಗೆ 5 ವಿಕೆಟ್‌ ಕೂಡ ಕಬಳಿಸಿದ್ದಾರೆ. ನಿತೀಶ್‌ ರಾಣಾ ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಲಯ ಕಂಡುಕೊಂಡಂತಿದೆ. ಆದರೆ ಸ್ಯಾಮ್‌ ಬಿಲ್ಲಿಂಗ್ಸ್‌ ಪರದಾಡುತ್ತಿದ್ದಾರೆ. ಒಟ್ಟಾರೆ, ಇಡೀ ಬ್ಯಾಟಿಂಗ್‌ ಯೂನಿಟ್‌ ಅಸ್ಥಿರಗೊಂಡಿದೆ. ಇಲ್ಲಿ ಪರಿಹಾರ ಕಾಣದೆ ಮುನ್ನಡೆ ಸುಲಭವಲ್ಲ.

ಕೆಕೆಆರ್‌ ಬೌಲಿಂಗ್‌ ವಿಭಾಗ ಆರಂಭದಲ್ಲಿ ಘಾತಕವಾಗಿ ಪರಿಣಮಿಸಿದ್ದು ನಿಜ. ಬಳಿಕ ಉಮೇಶ್‌ ಯಾದವ್‌ ಹೊರತುಪಡಿಸಿ ಉಳಿದವರೆಲ್ಲ ಮಂಕಾದರು. ಉಮೇಶ್‌ 10 ವಿಕೆಟ್‌ ಕೆಡವಿ ಅಗ್ರಸ್ಥಾನದಲ್ಲಿದ್ದಾರೆ. ಸ್ಪಿನ್ನರ್‌ಗಾದ ವರುಣ್‌ ಚಕ್ರವರ್ತಿ ಮತ್ತು ಸುನೀಲ್‌ ನಾರಾಯಣ್‌ ಪರದಾಡುತ್ತಿರುವುದು ಕೆಕೆಆರ್‌ಗೆ ಎದುರಾಗಿರುವ ದೊಡ್ಡ ಹಿನ್ನಡೆ. ಕಳೆದ ಸಲ ಅತ್ಯಧಿಕ ವಿಕೆಟ್‌ ಕೆಡವಿದ ಚಕ್ರವರ್ತಿ ಈ ಬಾರಿ ಉರುಳಿಸಿದ್ದು 4 ವಿಕೆಟ್‌ ಮಾತ್ರ. ಸುನೀಲ್‌ ನಾರಾಯಣ್‌ ಗಳಿಕೆಯೂ ಇಷ್ಟೇ. ಆಸ್ಟ್ರೇಲಿಯದ ಟೆಸ್ಟ್‌ ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌ ಒಮ್ಮೆ ಬ್ಯಾಟಿಂಗ್‌ ಅಬ್ಬರ ತೋರಿಸಿ ತಣ್ಣಗಾಗಿದ್ದಾರೆ. ವಿಕೆಟ್‌ಗಳು ಉದುರುತ್ತಿಲ್ಲ!

ಮಂಕಾಗಿದೆ ರಾಜಸ್ಥಾನ್‌
ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ರಾಜಸ್ಥಾನ್‌ ಕೂಡ ಕಳೆದ 3 ಪಂದ್ಯಗಳಲ್ಲಿ ಮಂಕಾಗಿದೆ. ಕೊನೆಯ ಮಖಾಮುಖೀಯಲ್ಲಿ ನೂತನ ತಂಡ ಗುಜರಾತ್‌ಗೆ 37 ರನ್ನುಗಳಿಂದ ಶರಣಾಗಿದೆ. ಲಕ್ನೋ ವಿರುದ್ಧ 3 ರನ್ನುಗಳ ಅಲ್ಪ ಅಂತರದ ಜಯ ಗಳಿಸಿತ್ತು. ಇದಕ್ಕೂ ಮೊದಲು ಆರ್‌ಸಿಬಿ ವಿರುದ್ಧ ಮುಗ್ಗರಿಸಿತ್ತು.

Advertisement

ತಂಡದ ಬ್ಯಾಟಿಂಗ್‌ ವಿಭಾಗ ಜಾಸ್‌ ಬಟ್ಲರ್‌ ಅವರನ್ನೇ ಹೆಚ್ಚು ನಂಬಿಕೊಂಡಿದೆ. ಅವರು 5 ಪಂದ್ಯಗಳಿಂದ ಈಗಾಗಲೇ 272 ರನ್‌ ಬಾರಿಸಿದ್ದಾರೆ. ಆದರೆ ಪಡಿಕ್ಕಲ್‌ ವಿಫ‌ಲರಾಗುತ್ತಿದ್ದಾರೆ (114 ರನ್‌). ಸ್ಯಾಮ್ಸನ್‌ ಪ್ರಯತ್ನ ಸಾಲದು (117 ರನ್‌). ಡುಸೆನ್‌, ಹೆಟ್‌ಮೈರ್‌ ಬಿರುಸುಗೊಳ್ಳಬೇಕಿದೆ.

ರಾಜಸ್ಥಾನ್‌ ಬೌಲಿಂಗ್‌ ಟ್ರೆಂಟ್‌ ಬೌಲ್ಟ್ ಪುನರಾಗಮನದಿಂದ ಬಲಿಷ್ಠಗೊಂಡಿದೆ. ಆದರೆ ಆರ್‌. ಅಶ್ವಿ‌ನ್‌ ಸ್ಥಾನ ಕಂಪಿಸುತ್ತಿದೆ. 143 ರನ್‌ ವೆಚ್ಚದಲ್ಲಿ ಅವರು ಉರುಳಿಸಿದ್ದು ಒಂದೇ ವಿಕೆಟ್‌. ಆದರೆ ಚಹಲ್‌ ಓಕೆ (12 ವಿಕೆಟ್‌).

Advertisement

Udayavani is now on Telegram. Click here to join our channel and stay updated with the latest news.

Next