Advertisement
ಆಸ್ಟ್ರೇಲಿಯ ಈಗಾಗಲೇ ಅಫ್ಘಾನಿಸ್ಥಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಚಾಂಪಿಯನ್ನರ ಆಟವಾಡಿ ಗೆದ್ದು ಬಂದಿದೆ. ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಹೀಗಾಗಿ ಭಾರತ, ಆಸ್ಟ್ರೇಲಿಯ ತಂಡಗಳ ನೈಜ ಸಾಮರ್ಥ್ಯ ಅನಾವರಣಗೊಳ್ಳಲು ಓವಲ್ ಒಂದು ವೇದಿಕೆಯಾಗಲಿದೆ.
ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತದ ದಾಖಲೆ ಅತ್ಯಂತ ಕಳಪೆ. 11ರಲ್ಲಿ ಮೂರನ್ನಷ್ಟೇ ಜಯಿಸಿದೆ. ಆಸೀಸ್ ಎಂಟರಲ್ಲಿ ಗೆದ್ದಿದೆ. ಆದರೆ ಎಲ್ಲ ಸಲವೂ ಇತಿಹಾಸವೇ ಮಾನದಂಡವಾಗದು. ವಿಶ್ವ ಚಾಂಪಿಯನ್ ತಂಡವೊಂದನ್ನು ಎದುರಿಸುವಾಗ ಪ್ರತ್ಯೇಕ ರಣತಂತ್ರವನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಆಡಳಿತ ಮಂಡಳಿ ಸೇರಿಕೊಂಡು ಕಾಂಗರೂಗಳನ್ನು ಹಣಿಯಲು ರೂಪಿಸಿದ ಕಾರ್ಯತಂತ್ರ ಸದ್ಯಕ್ಕೆ ಸಸ್ಪೆನ್ಸ್! ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪ್ರದರ್ಶನ ಒಟ್ಟಾರೆಯಾಗಿ ಉತ್ತಮ ಮಟ್ಟದಲ್ಲಿತ್ತು. ಆದರೆ ಎಲ್ಲರೂ ಹರಿಣಗಳನ್ನು ಬೇಟೆಯಾಡುತ್ತಿರುವುದರಿಂದ ಭಾರತದ ಈ ಸಾಧನೆಯನ್ನು ಅಮೋಘ ಎಂದು ಬಣ್ಣಿಸುವುದು ತರವಲ್ಲ. ಅಂದಮಾತ್ರಕ್ಕೆ ಆಸ್ಟ್ರೇಲಿಯವನ್ನು ಹೊಡೆದುರುಳಿಸುವ ಸಾಮರ್ಥ್ಯ ಟೀಮ್ ಇಂಡಿಯಾ ಹೊಂದಿಲ್ಲ ಎಂದು ತೀರ್ಮಾನಿಸುವುದೂ ತಪ್ಪಾಗುತ್ತದೆ.
Related Articles
Advertisement
ಪವರ್ ಪ್ಲೇಯಲ್ಲಿ ರನ್ ಕೊರತೆಭಾರತದ ಬ್ಯಾಟಿಂಗ್ ಆರಂಭದಲ್ಲಿ ಬಹಳ ನಿಧಾನಗತಿಯಿಂದ ಕೂಡಿತ್ತು. ಧವನ್, ಕೊಹ್ಲಿ ಬೇಗನೇ ನಿರ್ಗಮಿಸಿದ್ದರು. ಪವರ್ ಪ್ಲೇ ಅವಧಿಯ ಭರಪೂರ ಲಾಭವೆತ್ತಲು ಆರಂಭಿಕರು ಪ್ರಯತ್ನಿಸಬೇಕಿದೆ. ರೋಹಿತ್ ಶರ್ಮ ಶತಕ ಭಾರತದ ಸರದಿಯ ಆಕರ್ಷಣೆ ಆಗಿತ್ತು. ರಾಹುಲ್ 4ನೇ ಕ್ರಮಾಂಕದ ಕೊರತೆ ನೀಗಿಸುವ ಭರವಸೆ ಮೂಡಿಸಿದ್ದಾರೆ. ಅನಂತರ ಧೋನಿ, ಜಾಧವ್, ಪಾಂಡ್ಯ ಕ್ರೀಸ್ ಆಕ್ರಮಿಸಿಕೊಂಡರೆ ಭಾರತದ ಬ್ಯಾಟಿಂಗ್ ಮೇಲೆ ಹೆಚ್ಚಿನ ನಂಬಿಕೆ ಇಡಬಹುದು. ಏನೇ ಆದರೂ ಆಸ್ಟ್ರೇಲಿಯದಂಥ ಚಾಂಪಿಯನ್ ತಂಡದೆದುರು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅತ್ಯಗತ್ಯ. ಇದು ಚಾಂಪಿಯನ್ನರ ಆಟ…
ತಂಡವೊಂದು ಆರಂಭಿಕ ಕುಸಿತಕ್ಕೆ ಸಿಲುಕಿದಾಗ ಹೇಗೆ ಇನ್ನಿಂಗ್ಸ್ ಬೆಳೆಸಬೇಕು ಎಂಬುದನ್ನು ವಿಂಡೀಸ್ ವಿರುದ್ಧ ಆಸ್ಟ್ರೇಲಿಯ ತೋರಿಸಿ ಕೊಟ್ಟಿದೆ. ಸ್ಮಿತ್ ಹಾಗೂ ಎಂದೂ ಆಡದ ಕೋಲ್ಟರ್ ನೈಲ್ ಸೇರಿಕೊಂಡು ಬ್ಯಾಟಿಂಗ್ ವಿಸ್ತರಿಸಿದ ಪರಿ ಎಲ್ಲರಿಗೂ ಒಂದು ಪಾಠದಂತಿದೆ. ಇದಕ್ಕೇ ಹೇಳುವುದು “ಚಾಂಪಿಯನ್ನರ ಆಟ’ಎಂದು.
ಭಾರತ ಪ್ರವಾಸದ ವೇಳೆ ತವರಲ್ಲೇ ಎಡವಿದ ಆಸ್ಟ್ರೇಲಿಯ ಈಗ ಹಿಂದಿನಂತಿಲ್ಲ. ಭಾರತಕ್ಕೆ ಆಗಮಿಸಿ ಸರಣಿ ಗೆದ್ದ ಬಳಿಕ ಭಾರೀ ಪ್ರಗತಿ ಸಾಧಿಸಿದೆ. ತಂಡದಲ್ಲಿ ಎಷ್ಟೇ ಗೊಂದಲ, ಸಮಸ್ಯೆಗಳಿದ್ದರೂ ವಿಶ್ವಕಪ್ ಹೊತ್ತಿಗೆ ಸರಿಯಾಗಿ ಇದನ್ನೆಲ್ಲ ನಿವಾರಿಸಿಕೊಂಡು ಮುನ್ನುಗ್ಗುವ ಛಾತಿ ಕಾಂಗರೂ ತಂಡದ್ದಾಗಿದೆ.
ಇಂಥ ತಂಡವನ್ನು ಓವಲ್‌ನಲ್ಲಿ ಕೆಡವಿದರೆ ಅದು ಭಾರತದ ಪಾಲಿನ ಅಮೋಘ ಸಾಧನೆಯಾಗಲಿದೆ. ಕೋಲ್ಟರ್ ನೈಲ್‌ಗೆ ಜಾಗವಿಲ್ಲ?
ಆಸ್ಟ್ರೇಲಿಯ ವಿರುದ್ಧ ಯಾವತ್ತೂ ಅಮೋಘ ಬ್ಯಾಟಿಂಗ್ ಪ್ರದಶೀಸಿದ ವೆಸ್ಟ್ ಇಂಡೀಸ್ ವಿರುದ್ಧ ಅಮೋಘ 92 ರನ್ ಬಾರಿಸಿ ಆಸ್ಟ್ರೇಲಿಯ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಬೌಲಿಂಗ್ ಆಲ್‌ರೌಂಡರ್ ನಥನ್ ಕೋಲ್ಟರ್ ನೈಲ್ ಭಾರತದ ವಿರುದ್ಧ ಸ್ಥಾನ ಸಂಪಾದಿಸುವುದು ಅನುಮಾನ ಎನ್ನಲಾಗಿದೆ. ಕೋಚ್ ಜಸ್ಟಿನ್ ಲ್ಯಾಂಗರ್ ಪ್ರಕಾರ ದ್ವಿತೀಯ ಸ್ಪಿನ್ನರ್ ಆಗಿ ನಥನ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಭಾರತದೆದುರು ಲಿಯೋನ್ ಸಾಧನೆ ಉತ್ತಮ ಮಟ್ಟದಲ್ಲಿರುವುದೇ ಇದಕ್ಕೆ ಕಾರಣ. ಹಾಗೆಯೇ ತ್ರಿವಳಿ ವೇಗಿಗಳನ್ನು ಕಣಕ್ಕಿಳಿಸುವ ಯೋಜನೆಯೂ ಆಸ್ಟ್ರೇಲಿಯ ಮುಂದಿದೆ. ಆಗ ಬೆಹೆಡಾಫ್ì ಅಥವಾ ಕೇನ್ ವಿಲಿಯಮ್ಸನ್ ಅವಕಾಶ ಪಡೆಯಬಹುದು. ಸಚಿನ್ ದಾಖಲೆ ಮುರಿಯುವರೇ ಕೊಹ್ಲಿ?
ಆಸ್ಟ್ರೇಲಿಯ ವಿರುದ್ಧ ಯಾವತ್ತೂ ಅಮೋಘ ಬ್ಯಾಟಿಂಗ್ ಪ್ರದರ್ಶಿ ಸುವ ಕೊಹ್ಲಿ ಮುಂದೆ ಸಚಿನ್ ತೆಂಡುಲ್ಕರ್ ಅವರ ದಾಖಲೆಯೊಂದನ್ನು ಮುರಿಯುವ ಅವಕಾಶವಿದೆ. ಇವರಿಬ್ಬರೂ ಆಸೀಸ್ ವಿರುದ್ಧ ಈಗಾಗಲೇ ಅತ್ಯಧಿಕ 9 ಶತಕ ಬಾರಿಸಿ ಜಂಟಿ ದಾಖಲೆ ಸ್ಥಾಪಿಸಿದ್ದಾರೆ. ಕೊಹ್ಲಿ ಇದನ್ನು 10ಕ್ಕೆ ಏರಿಸಿ ನೂತನ ದಾಖಲೆ ನಿರ್ಮಿಸುವರೇ ಎಂಬುದೊಂದು ಕುತೂಹಲ. ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಶತಕದ ದಾಖಲೆ ನಿರ್ಮಿಸುವ ಅವಕಾಶ ಕೊಹ್ಲಿ ಮುಂದಿತ್ತು. ಆದರೆ ದ.ಆಫ್ರಿಕಾ ವಿರುದ್ಧ ಇದು ಸಾಧ್ಯವಾಗಲಿಲ್ಲ. 2011,2015ರ ವಿಶ್ವಕಪ್ ಕೂಟಗಳಲ್ಲಿ, ಭಾರತದ ಮೊದಲ ಪಂದ್ಯದಲ್ಲೇ ಕೊಹ್ಲಿ ಸೆಂಚುರಿ ಬಾರಿಸಿದ್ದರು. ಸಂಭಾವ್ಯ ತಂಡಗಳು
ಭಾರತ:
ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್, ಕೇದಾರ್ ಜಾಧವ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್/ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಜಸ್‌ಪ್ರೀತ್ ಬುಮ್ರಾ. ಆಸ್ಟ್ರೇಲಿಯ:
ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ, ನಥನ್ ಕೋಲ್ಟರ್ ನೈಲ್/ನಥನ್ ಲಿಯೋನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪ.