Advertisement
ಜ.30, 1948ದಿಲ್ಲಿಯ ಬಿರ್ಲಾ ಹೌಸ್‌ನಲ್ಲಿ ಸಂಜೆಯ ಸುಮಾರು 5 ಗಂಟೆಯ ವೇಳೆ ಗಾಂಧೀಜಿ ಎಂದಿನಂತೆ ತಮ್ಮ ನಿತ್ಯದ ಪ್ರಾರ್ಥನೆಗೆ ಬರುತ್ತಿರುವಾಗ ಗುಂಡನ್ನು ಹಾರಿಸುವುದರ ಮೂಲಕ ಅವರನ್ನು ಹತ್ಯೆಗೆಯ್ಯಲಾಯಿತು. ಗಾಂಧೀಯವರ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿತ್ತು. ಗುಂಡೇಟಿಗೆ ಅಲ್ಲೇ ಕುಸಿದ ಗಾಂಧೀ ತಮ್ಮ ಎರಡೂ ಕೈಗಳನ್ನು ಜೋಡಿಸಿ “ಹೇ ರಾಮ್’ ಎಂದು ಎರಡು ಬಾರಿ ಹೇಳುವುದರೊಂದಿಗೆ ಕೊನೆಯುಸಿರೆಳೆದಿದ್ದರು. ಕೆಲವೊಂದು ಉಲ್ಲೇಖಗಳ ಪ್ರಕಾರ ಘಟನೆ ನಡೆದ ಸ್ಥಳದಲ್ಲಿ ಏನಾಯಿತೆಂದು ಎಲ್ಲರೂ ಅರಿತುಕೊಳ್ಳುವ ಸಮಯದಲ್ಲಿ ಪ್ರಾರ್ಥನೆಗೆ ಬಂದಿದ್ದ ದಿಲ್ಲಿಯಲ್ಲಿದ್ದ ಅಮೆರಿಕ ರಾಯಭಾರ ಕಚೇರಿಯ ಹರ್ಬ್ರ್ಟ್ ರೈನೇರ್ ಗಾಂಧೀಯನ್ನು ಹತ್ಯೆಮಾಡಿದ ನಾತುರಾಮ್ ಗೋಡ್ಸೆಯನ್ನು ಮೊದಲು ವಶಪಡಿಸಿಕೊಂಡಿದ್ದರು.
ಗಾಂಧೀ ಹತ್ಯೆಯಾದ ಕೆಲವು ನಿಮಿಷಗಳ ಬಳಿಕ ಸಂಜೆ ಸುಮಾರು 6 ಗಂಟೆಯ ವೇಳೆಗೆ ಆಲ್ ಇಂಡಿಯಾ ರೇಡಿಯೋದಲ್ಲಿ ಸುದ್ದಿಯನ್ನು ದೇಶಾದ್ಯಂತ ಪ್ರಸಾರ ಮಾಡಲಾಯಿತು. ಸುದ್ದಿ ಕೇವಲ ದೇಶದ ಜನರನ್ನು ಮಾತ್ರವಲ್ಲದೇ ಇಡೀ ಪ್ರಪಂಚಕ್ಕೆ ಆಘಾತವನ್ನು ನೀಡಿತ್ತು. ದೇಶದ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಹತ್ಯೆಯ ಬಳಿಕ ರೇಡಿಯೋ ಮೂಲಕ ಇಡೀ ದೇಶವನ್ನು ಉದ್ದೇಶಿಸಿ “ನಮ್ಮ ಬದುಕಿನಿಂದ ಬೆಳಕು ಆರಿಹೋಗಿದೆ. ಎಲ್ಲೆಲ್ಲೂ ಬರೀ ಕತ್ತಲೆಯೇ ತುಂಬಿದೆ. ಈ ವಿಷಯವನ್ನು ಹೇಗೆ ಹೇಳಬೇಕು, ಏನು ಹೇಳಬೇಕು ಎನ್ನುವುದು ನನಗೆ ತಿಳಿಯುತ್ತಿಲ್ಲ. ನಾವೆಲ್ಲರೂ ಬಾಪೂ ಎಂದು ಕರೆಯುತ್ತಿದ್ದ, ದೇಶದ ಪಿತಾಮಹ ಇನ್ನಿಲ್ಲ. ನಾವಿನ್ನು ಅವರನ್ನು ನೋಡಲು ಸಾಧ್ಯವಿಲ್ಲ…ಸಲಹೆ ಪಡೆಯಲು ಅವರ ಬಳಿ ತೆರಳಲಾಗುವುದಿಲ್ಲ…ಕೇವಲ ನನಗೆ ಮಾತ್ರವಲ್ಲ ದೇಶದ ಸಾವಿರಾರು ಜನರಿಗೆ ಇದು ಬಹಳ ಆಘಾತಕಾರಿ ವಿಷಯ…’ ಎಂದು ಮಾತನಾಡಿದ್ದರು.
ಸುದ್ದಿ ಪ್ರಸಾರವಾಗುತ್ತಿದ್ದಂತೆ ದೇಶದ ವಿವಿಧ ಭಾಗಗಳಲ್ಲಿ ಜನರು ಧಂಗೆ ಎದ್ದಿದ್ದರು. ಮುಂಬಯಿಯಲ್ಲಿ ನೆಡದ ಗಲಾಟೆ, ಧಂಗೆಯಲ್ಲಿ 15 ಜನ ಸಾವನ್ನಪ್ಪಿದ್ದರು, ವಿವಿಧೆಡೆ ಹಲವಾರು ಮಂದಿಗೆ ತೀವ್ರ ಗಾಯಗಳು ಆಗಿದ್ದವು. ವಿಶ್ವಸಂಸ್ಥೆ ಗೌರವ
ಗಾಂಧೀಯವರ ಸಾವಿಗೆ ಅಮೆರಿಕದಲ್ಲಿ ವಿಶ್ವಸಂಸ್ಥೆ ತನ್ನ ಕಚೇರಿಯಲ್ಲಿನ ವಿಶ್ವಸಂಸ್ಥೆಯ ಧ್ವಜ ವನ್ನು ಅರ್ಧಕ್ಕೆ ಇಳಿಸಿ ಹಾರಿಸುವುದರ ಮೂಲಕ ಗೌರವವನ್ನು ಸೂಚಿಸಿತ್ತು. ಅಲ್ಲದೇ ಆಗ ಇದ್ದ ವಿಶ್ವಸಂಸ್ಥೆಯ ಸುಮಾರು 50 ಸದಸ್ಯ ರಾಷ್ಟ್ರಗಳು ಮೌನ ಪ್ರಾರ್ಥನೆ ಸಲ್ಲಿಸಿ ಸಂತಾಪ ಸೂಚಿಸಿದ್ದರು.
Related Articles
ಜ.31ರಂದು ಗಾಂಧೀಜಿಯ ಮೃತದೇಹ ವನ್ನು ಮೆರವಣಿಗೆ ಮಾಡಲಾಯಿತು. ಕುಟುಂಬದವರೊಂದಿಗೆ ಸಾವಿರಾರು ಮಂದಿ ಇದರಲ್ಲಿ ಭಾಗಿಯಾಗಿದ್ದರು. ರಾಜ್ ಘಾಟ್‌ನ ಯಮುನಾ ನದಿಯ ದಡದಲ್ಲಿ ಗಾಂಧೀಯವರ ಮೃತದೇಹವನ್ನು ಅಗ್ನಿಗೆ ಅರ್ಪಿಸಲಾಯಿತು. ಗಾಂಧೀಯವರ ಚಿತಾಭಸ್ಮವನ್ನು ಸಂಗ್ರಹಿಸಲೆಂದೇ ನೂರಾರು ಮಂದಿ ನೆರೆದಿದ್ದರು. ಫೆ.12ರಂದು ಗಾಂಧೀಯವರ ಚಿತಾಭಸ್ಮವನ್ನು ರೈಲಿನ ಮೂಲಕ ಅಲಹಾಬಾದ್‌ಗೆ ಕೊಂಡೊಯ್ಯಲಾಯಿತು. ರೈಲು ಸಂಚರಿಸಿದ ವಿವಿಧ ನಿಲ್ದಾಣಗಳಲ್ಲಿ ಈ ವೇಳೆ ಅಸ್ಥಿಗಾಗಿ ಸಾವಿರಾರು ಮಂದಿ ಕಾಯುತ್ತಿದ್ದರಂತೆ. ಅನಂತರ ಸರಕಾರ ಗಾಂಧೀಯವರ ಚಿತಾಭಸ್ಮವನ್ನು ಎಲ್ಲ ರಾಜ್ಯಗಳಿಗೂ ಹಂಚುವ ನಿರ್ಧಾರ ಮಾಡಿತು.
Advertisement