Advertisement

140 ಸ್ಥಾನ ಗೆಲ್ಲುವ ವಿಶ್ವಾಸ; ಇಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ

02:21 AM Mar 28, 2022 | Team Udayavani |

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ರಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಸೋಮವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮ್ಮ ಜವಾಬ್ದಾರಿ, ಪಕ್ಷದ ಚುನಾವಣ ಕಾರ್ಯತಂತ್ರ, ಬಿಜೆಪಿಯ ಭಾವನಾತ್ಮಕ ಅಜೆಂಡಾಗಳಿಗೆ ಪಕ್ಷದ ಪ್ರತಿತಂತ್ರ, ಕಾಂಗ್ರೆಸ್‌ನ ಭಿನ್ನಾಭಿಪ್ರಾಯ ಕುರಿತು “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ.

Advertisement

ಸಂಕಷ್ಟದ ಸಂದರ್ಭದಲ್ಲಿ ಪಕ್ಷವು ಚುನಾವಣ ಪ್ರಚಾರ ಸಮಿತಿ ಜವಾಬ್ದಾರಿ ವಹಿಸಿದೆ. ಹೇಗೆ ನಿಭಾಯಿಸುತ್ತೀರಿ?
ಈ ಜವಾಬ್ದಾರಿಯನ್ನು ಸೋನಿಯಾ ಗಾಂಧಿಯವರು ಕೊಟ್ಟಿದ್ದಾರೆ. ಪಂಚ ರಾಜ್ಯ ಚುನಾವಣೆ ಫ‌ಲಿತಾಂಶದ ಬಳಿಕ ಪಕ್ಷ ಸಂಕಷ್ಟದಲ್ಲಿದೆ ಎಂಬ ಭಾವನೆ ಜನರಲ್ಲಿದೆ. ಆದರೆ ರಾಜ್ಯದಲ್ಲಿ ಅಂಥ ವಾತಾವರಣ ಇಲ್ಲ. 2023ರ ಚುನಾವಣೆಯಲ್ಲಿ 130-140 ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಸಿದ್ದರಾಮಯ್ಯ ಅವಧಿಯಲ್ಲಿ ಮಾಡಿದ ಕೆಲಸ, 3 ವರ್ಷಗಳಲ್ಲಿ ಬಿಜೆಪಿಯ ವೈಫ‌ಲ್ಯವೇ ನಮಗೆ ಶ್ರೀರಕ್ಷೆ. ರಾಜ್ಯ ಸರಕಾರದ ಶೇ.40 ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಅಸೋಸಿಯೇಶನ್‌ ಪ್ರಧಾನಿಗೆ ಪತ್ರ ಬರೆದಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೇರಲು ನಾವು ತಂಡ ಕಟ್ಟಿಕೊಂಡು ಜನರ ಬಳಿಗೆ ಹೋಗುತ್ತೇವೆ.

ಚುನಾವಣೆಗೆ ನಿಮ್ಮ ಪ್ರಚಾರ ಕಾರ್ಯತಂತ್ರಗಳೇನು?
ನೆಹರೂ ಅವಧಿಯಲ್ಲಿ ಮಾಡಿರುವ ಸಾಧನೆಗಳು, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಪಿ.ವಿ. ನರಸಿಂಹ ರಾವ್‌, ಮನಮೋಹನ್‌ ಸಿಂಗ್‌ ವರೆಗೂ 70 ವರ್ಷದಲ್ಲಿ ಕಾಂಗ್ರೆಸ್‌ ಸರಕಾರಗಳು ರೈತರ ಪರ ಯೋಜನೆ, ಕ್ಷೀರ ಕ್ರಾಂತಿ, ಹಸಿರು ಕ್ರಾಂತಿ, ಬ್ಯಾಂಕ್‌ ರಾಷ್ಟ್ರೀಕರಣ, ವಸತಿ ಯೋಜನೆ ನಮಗೆ ಆಧಾರ. ಕಾಂಗ್ರೆಸ್‌ ದೇಶಕ್ಕೆ ಏನು ಕೊಡುಗೆ ಕೊಟ್ಟಿದೆ ಹಾಗೂ ಬಿಜೆಪಿ ಅಧಿಕಾರದ 8 ವರ್ಷಗಳಲ್ಲಿ ದೇಶದ ಸ್ಥಿತಿಗತಿ ಹೇಗಿದೆ ಎನ್ನು ವುದನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ರಾಜ್ಯದಲ್ಲೂ ಕೆ.ಸಿ. ರೆಡ್ಡಿಯಿಂದ ಸಿದ್ದರಾಮಯ್ಯರ ವರೆಗೂ ಕಾಂಗ್ರೆಸ್‌ ಸಾಧನೆಗಳು, ಬಿಜೆಪಿಯ ವೈಫ‌ಲ್ಯಗಳನ್ನು ತಿಳಿಸುತ್ತೇವೆ.

ಜನರಿಗೆ ಯಾವ ಭರವಸೆ ನೀಡುತ್ತೀರಿ?
ಪ್ರಮುಖವಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ ಮತ್ತು ಅಭಿವೃದ್ಧಿ ಎಂಬುದು ನಮ್ಮ ಪಂಚ ಮಂತ್ರಗಳು, ಸಾಮರಸ್ಯ ಮತ್ತು ಸಮಾಜದ ನೆಮ್ಮದಿಗೆ ಮತ್ತೆ ಕಾಂಗ್ರೆಸ್‌ ಎನ್ನುವುದು ನಮ್ಮ ಚುನಾವಣ ಮಂತ್ರವಾಗಲಿದೆ. ರೈತರು, ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ನೀಡುವ ಬಗ್ಗೆ ಜನರ ಮುಂದಿಡುತ್ತೇವೆ. ಅಲ್ಪಸಂಖ್ಯಾಕರು, ದಲಿತರು, ಹಿಂದುಳಿದ ಸಣ್ಣ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ನೀಡುವ ಕುರಿತು ಜನರಿಗೆ ತಿಳಿಸುತ್ತೇವೆ.

ಬಿಜೆಪಿಯ ಭಾವನಾತ್ಮಕ ಅಜೆಂಡಾಕ್ಕೆ ನಿಮ್ಮ ಪ್ರತಿತಂತ್ರ?
– ಬಿಜೆಪಿಯವರು ಭಾವನೆಗಳನ್ನು ಕೆದಕುವ ಕೆಲಸ ಮಾಡುತ್ತಾರೆ. ನಾವು ಬದುಕು ಕಟ್ಟುವ ಕೆಲಸ ಮಾಡುತ್ತೇವೆ. ನಾವೂ ಹಿಂದೂಗಳೇ, ಎಲ್ಲ ಸಮುದಾಯಗಳನ್ನು ಒಳಗೊಂಡ ಸಕಾರಾತ್ಮಕ ಅಭಿವೃದ್ಧಿಯೇ ನಮ್ಮ ಕಾರ್ಯತಂತ್ರ.

Advertisement

 ಹಿಜಾಬ್‌ ವಿಚಾರ ಕಾಂಗ್ರೆಸ್‌ಗೆ ನೆಗೆಟಿವ್‌ ಆಗಲಿಲ್ವಾ?
– ಹಿಜಾಬ್‌ ವಿಚಾರದಲ್ಲಿ ಹೈಕೋರ್ಟ್‌ ತೀರ್ಪು ನೀಡಿದೆ. ಅದನ್ನು ಮುಸ್ಲಿಮರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಬಿಜೆಪಿಯ ಈ ರೀತಿಯ ಎಮೋಷನಲ್‌ ಅಜೆಂಡಾ ಬಹಳ ದಿನ ನಡೆಯುವುದಿಲ್ಲ. ಇನ್ನಾರು ತಿಂಗಳಲ್ಲಿ ಇದ್ಯಾವುದೂ ನಿಲ್ಲುವುದಿಲ್ಲ. ಜನರು ಬಿಜೆಪಿ ವಿರುದ್ಧ ತಿರುಗಿ ಬೀಳುತ್ತಾರೆ.

ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ನಡುವಿನ ಸಂಘರ್ಷವನ್ನು ಹೇಗೆ ಸರಿಪಡಿಸುತ್ತೀರಿ?
– ನಾಯಕರ ನಡುವೆ ಯಾವುದೇ ಗುಂಪು ಇಲ್ಲ. ಮಾಧ್ಯಮಗಳಲ್ಲಿ ಆ ರೀತಿಯ ಭಾವನೆ ಮೂಡಿಸಲಾಗುತ್ತಿದೆ. ಸಿದ್ದರಾಮಯ್ಯ, ಶಿವಕುಮಾರ್‌, ಖರ್ಗೆ ಸಹಿತ ಎಲ್ಲರೂ ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ.

ಸಿದ್ದರಾಮಯ್ಯ, ಡಿಕೆಶಿಯಿಂದ ಜಂಟಿ ಪ್ರಚಾರ ಮಾಡಿಸುತ್ತೀರಾ?
– ಆಗಿನ ಸಂದರ್ಭಕ್ಕೆ ತಕ್ಕಂತೆ ಯೋಜನೆ ಹಾಕಿಕೊಳ್ಳುತ್ತೇವೆ. ಹಿಂದೆ ಎಸ್‌.ಎಂ. ಕೃಷ್ಣ ಅವಧಿಯಲ್ಲಿ ಪಾಂಚಜನ್ಯ ಮೊಳಗಿಸಿದ್ದೇವೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕರ್ನಾಟಕದಿಂದಲೇ ಕಾಂಗ್ರೆಸ್‌ಗೆ ಮರು ಹುಟ್ಟು ನೀಡುತ್ತೇವೆ. ಗುಜರಾತಿನಲ್ಲಿಯೂ ಉತ್ತಮ ಸಾಧನೆ ಮಾಡಲಿದ್ದೇವೆ.

ಕಾಂಗ್ರೆಸ್‌ ಮುಳುಗುವ ಹಡಗು ಎನ್ನುತ್ತಾರಲ್ಲ?
– ಕರ್ನಾಟಕದಲ್ಲಿ ಕಾಂಗ್ರೆಸ್‌ ಯಾವತ್ತೂ ಮುಳುಗುವುದಿಲ್ಲ. ನಾವು ಫೀನಿಕ್ಸ್‌ ಪಕ್ಷಿಯಂತೆ ಪುಟಿದೆದ್ದು ಬರುತ್ತೇವೆ. ಇಂದಿರಾ ಗಾಂಧಿಗೆ ಚಿಕ್ಕಮಗಳೂರಿನಿಂದ ರಾಜಕೀಯ ಮರು ಜನ್ಮ ನೀಡಿದಂತೆ ಈಗಲೂ ಕರ್ನಾಟಕದಿಂದಲೇ ಪಕ್ಷ ಪುನಃಶ್ಚೇತನಗೊಳ್ಳುತ್ತದೆ.

 ನಿಮ್ಮ ಪ್ರಚಾರ ಪ್ರವಾಸ ಯಾವಾಗಿನಿಂದ ಆರಂಭವಾಗುತ್ತದೆ ?
– ನಾವು ಈ ಬಾರಿ ಪ್ರಾದೇಶಿಕ ಮತ್ತು ಜಿಲ್ಲಾವಾರು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪ್ರಚಾರ ಕಾರ್ಯವನ್ನು ನಡೆಸುತ್ತೇವೆ. ನಾನು ಅಧಿಕಾರ ಸ್ವೀಕರಿಸಿದ ಬಳಿಕ ಪಕ್ಷದ ಹಿರಿಯ ನಾಯಕರು ಹಾಗೂ ಯುವ ಮುಖಂಡರ ಜತೆ ಪ್ರತ್ಯೇಕ ಸಭೆ ನಡೆಸಿ, ಪ್ರಚಾರ ಕಾರ್ಯತಂತ್ರ ಯಾವ ರೀತಿ ಇರಬೇಕು ಎನ್ನುವ ಪ್ಲ್ರಾನ್‌ ಆಫ್ ಆಕ್ಷನ್‌ ಸಿದ್ಧಪಡಿಸುತ್ತೇವೆ.

ಅವಧಿ ಪೂರ್ವ ಚುನಾವಣೆಗೆ ಸಿದ್ಧರಿದ್ದೀರಾ?
ಅವಧಿಪೂರ್ವ ಚುನಾವಣೆ ಬಂದರೂ ಎದುರಿಸಿ ಗೆಲ್ಲುವ ಶಕ್ತಿ ಕಾಂಗ್ರೆಸ್‌ಗಿದೆ. ಎಪ್ರಿಲ್‌ 15ರ ಬಳಿಕ ಎಐಸಿಸಿ ಪ್ರಧಾನ ಕಾರ್ಯ ದರ್ಶಿಯನ್ನು ಭೇಟಿ ಮಾಡಿ, ಅನಂತರ ರಾಜ್ಯದ ಎಲ್ಲ ಧರ್ಮ, ಜಾತಿಗಳ ಮಠಗಳು, ಚರ್ಚ್‌, ಮಸೀದಿ, ದೇಗುಲಗಳಿಗೂ ತೆರಳಿ ಎಲ್ಲರ ಆಶೀರ್ವಾದ ಪಡೆದು ಪ್ರವಾಸ ಆರಂಭಿಸುತ್ತೇನೆ.

- ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next