Advertisement
1980ರ ದಶಕದಲ್ಲಿ ಕೈಗಾ ಅಣುಸ್ಥಾವರದ ಬಗ್ಗೆ ತೀವ್ರ ಚರ್ಚೆಯಾಗುತ್ತಿತ್ತು. ಇಡೀ ಉತ್ತರ ಕನ್ನಡ ಜಿಲ್ಲೆ ಪರಿಸರದ ಪ್ರಶ್ನೆ ಮುಂದಿಟ್ಟುಕೊಂಡು ಹೋರಾಟದ ಕಣಕ್ಕಿಳಿದಿತ್ತು. ಡಾ| ಕುಸುಮಾ ಸೊರಬರಂತಹ ವ್ಯಕ್ತಿಗಳ ನೇತೃತ್ವದಲ್ಲಿ ಬುಡಕಟ್ಟು ಜನಾಂಗ ಸಿಡಿದೆದ್ದಿತ್ತು. ಅಂತಹ ಸಂದರ್ಭ ಕಾರಂತರು ಸರಕಾರಕ್ಕೆ ಬುದ್ಧಿ ಹೇಳಿದ್ದರು. ಜತೆಯಲ್ಲಿ ಕೈಗಾ ಅಣು ಸ್ಥಾವರದಿಂದ ಜನಜೀವನದ ಮೇಲಾಗಲಿರುವ ಪರಿಣಾಮಗಳ ಕುರಿತು ಹಲವು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಅಂದಿನ ಕೇಂದ್ರ ಸರಕಾರ ಅಣುಸ್ಥಾವರದಿಂದ ಯಾವುದೇ ಬಾಧಕ ವಿಲ್ಲವೆಂದು ಖ್ಯಾತ ಅಣುವಿಜ್ಞಾನಿ ಡಾ| ರಾಜಾರಾಮಣ್ಣ ಮೂಲಕ ಹೇಳಿಕೆ ಕೊಟ್ಟು ಬಿಟ್ಟಿತು. ಇದರಿಂದ ತೃಪ್ತರಾಗದ ಕಾರಂತರು, ತನಗಿರುವ ಸಂದೇಹಗಳನ್ನು ಸರಕಾರ ನಿವಾರಿಸಬೇಕು. ಅದನ್ನು ಬಿಟ್ಟು ಹೇಳಿಕೆಯ ಮೂಲಕ ಹೋರಾಟ ನಿಯಂತ್ರಿಸಲು ವಿಜ್ಞಾನಕ್ಕೊಬ್ಬನೇ ರಾಜಾರಾಮಣ್ಣ ಅಲ್ಲ ಎಂದು ಗುಡು ಗಿದ್ದರು. ಕಾರಂತರ ಒಂದೇ ಒಂದು ಹೇಳಿಕೆಯಿಂದ ಮೌನಕ್ಕೆ ಶರಣಾಗಿದ್ದ ಕೈಗಾ ವಿರೋಧಿ ಹೋರಾಟ ಮತ್ತೆ ಮರುಜೀವ ಪಡೆದುಕೊಂಡಿತು.
Related Articles
Advertisement
ಕಂಡದ್ದು ಕಂಡಂತೆ ಹೇಳುವ ಕಾರಂತರ ಶೈಲಿ ಅವರ ಕಾದಂಬರಿಗಳಲ್ಲೂ ಎದ್ದು ಕಾಣುತ್ತದೆ. ಬದುಕಲ್ಲಿ ತುಂಡು ಭೂಮಿಗಾಗಿ ಹಪಹಪಿಸುವ ಚೋಮನ ಬದುಕು ಇಂದೂ ಜನಮಾನಸದಲ್ಲಿ ಹಸುರಾಗಿದೆ. ಚೋಮನ ದೈವನಂಬಿಕೆ, ಮಗಳು ಬೆಳ್ಳಿಯ ಬದುಕಿನ ಬಗ್ಗೆ ಮರುಕ, ಮಗ ಗುರುವನ ದುಡುಕು, ಚೋಮನ ಸಾಲ, ಚೋಮನ ಬದುಕಿನ ಬಿರುಕುಗಳೆಲ್ಲ ಕಾರಂತರ ಅಸಾಧ್ಯ ಅನುಭವಗಳನ್ನು ಬಿಚ್ಚಿಕೊಳ್ಳುತ್ತವೆ. ಮೂಕಜ್ಜಿಯ ಕನಸುಗಳನ್ನು ಕಾರಂತರು ಹೆಣೆದಿರುವ ರೀತಿಯೇ ಕುತೂಹಲಕಾರಿ. ಕಾದಂಬರಿಯಲ್ಲಿ ಬರುವ ಮೂಕಜ್ಜಿಗೆ ಅತೀಂದ್ರಿಯ ಅನ್ನುವುದಕ್ಕಿಂತ ಒಂದು ಅಚ್ಚರಿಯ ಶಕ್ತಿ ಇರುತ್ತದೆ. ಯಾವುದೇ ವಸ್ತು ಅಥವಾ ಮನುಷ್ಯನನ್ನು ಕಂಡರೆ ಅದರ ಅಥವಾ ಅವರ ಬಗ್ಗೆ ಮನದಲ್ಲಿ ಕನಸುಗಳು ಮೂಡುತ್ತವೆ. ಅದು ನಿದ್ದೆಯ ಕನಸಲ್ಲ, ಜ್ಞಾನಪೀಠ ಪಡೆದ ಕಾದಂಬರಿ. ಮೂಕಜ್ಜಿಯ ಕನಸುಗಳನ್ನು ಕಾರಂತರು ತೆರೆದಿಟ್ಟ ರೀತಿಯೇ ಅದ್ಭುತ.
ಕಾರಂತರಿಗೆ 90 ವರ್ಷ ತುಂಬಿದಾಗ ಅವರು ಹುಟ್ಟೂರಾದ ಕೋಟದ ವಿವೇಕ ಕಾಲೇಜಿನಲ್ಲಿ “ಕಾರಂತ ಕೊಂಗಾಟ’ ಎಂಬ ಹೆಸರಿನ ಕಾರ್ಯಕ್ರಮವಿತ್ತು. 90 ತುಂಬಿದ ಕಾರಂತರು ಸಮ್ಮಾನ ಸ್ವೀಕರಿಸಿ ಅಭಿಮಾನಿಗಳ ಆಗ್ರಹಕ್ಕೆ ಮಣಿದು ಕಾಲಿಗೆ ಗೆಜ್ಜೆ ಕಟ್ಟಿ ಸೊಂಟಕ್ಕೆ ದಟ್ಟಿ ಬಿಗಿದು ಬಿಟ್ಟ ಮೈಯಲ್ಲಿ ಕುಣಿಯಲು ಬಂದಿದ್ದರು. ಕಾರಂತರು ಶೃಂಗಾರ, ರೌದ್ರ, ಭೀಭತ್ಸ ರಸವೂ ಸೇರಿದಂತೆ ವಿವಿಧ ಭಾವಾಭಿನಯದೊಂದಿಗೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದಾಗ ಇಡೀ ಸಭೆ ನಿಬ್ಬೆರಗಾಗಿತ್ತು. ಕಾರಂತರ ಕುಣಿತದ ಭಂಗಿಗೆ ಎದ್ದು ನಿಂತು ಕೈ ಮುಗಿದು ಕಾರಂತರಿಗೆ ಅಭಿನಂದನೆ ಹೇಳಿತ್ತು. 90 ತುಂಬಿದ ಕಾರಂತರ ಕುಣಿತವನ್ನು ಕಂಡು ಅವರ ಜೀವನೋತ್ಸಾಹಕ್ಕೆ ಸರ್ವರೂ ಮಾರುಹೋಗಿದ್ದರು.
ವಿದ್ಯಾಭೂಷಣರಿಗೆ ಪ್ರಶಸ್ತಿಶಿವರಾಮ ಕಾರಂತರ ಹುಟ್ಟೂರಾದ ಕೋಟತಟ್ಟು ಗ್ರಾಮ ಪಂಚಾಯತ್ 19ನೇ ವರ್ಷದ ಕಾರಂತೋತ್ಸವವನ್ನು ಆಚರಿಸುತ್ತಿದೆ. ಈ ಬಾರಿ “ಕಾರಂತ ಹುಟ್ಟೂರ ಪ್ರಶಸ್ತಿ’ಯನ್ನು ಸಂಗೀತ ಮಾಂತ್ರಿಕ ಡಾ| ವಿದ್ಯಾಭೂಷಣ ಅವರಿಗೆ ಪ್ರದಾನ ಮಾಡುತ್ತಿದೆ. ಒಂದು ಗ್ರಾಮ ಪಂಚಾಯತ್ ಕೊಡುವ ಪ್ರಶಸ್ತಿಯನ್ನು ರಾಜ್ಯದ ರಾಜ್ಯಪಾಲರು ಪ್ರದಾನ ಮಾಡುತ್ತಿರುವುದೇ ಪಂಚಾಯತ್‌ರಾಜ್ ವ್ಯವಸ್ಥೆಗೆ ಬಲುದೊಡ್ಡ ಗೌರವ. ತನ್ಮೂಲಕ ಹುಟ್ಟೂರ ಜನತೆ ಶಿವರಾಮ ಕಾರಂತರನ್ನು ಗೌರವಾದರಗಳೊಂದಿಗೆ ಸ್ಮರಿಸಿಕೊಳ್ಳುತ್ತಿದೆ. -ಕೋಟ ಶ್ರೀನಿವಾಸ ಪೂಜಾರಿ