Advertisement
ಮೂಡಣದಲ್ಲಿ ಸೂರ್ಯನ ತೇಜೋ ಕಿರಣಗಳು ಮನೆಯ ಅಂಗಳಕ್ಕೆ ಬೀಳುವ ಸಮಯ. ಹಿತ್ತಲಲ್ಲಿ ಹೂಗಳು ಸುವಾಸನೆ ಬೀರುವ ಹೊತ್ತು. ಅಮ್ಮ ಮಾಡಿದ ಕಾಫಿಯ ಘಮಲು ಬೆಳಗನ್ನು ನಿಚ್ಚಳಗೊಳಿಸುತ್ತಿದೆ. ಮನೆಯ ಒಂದು ಮೂಲೆಯಲ್ಲಿ ತಾತ ತನ್ನ ಹಳೆಯ ಕಾಲದ ಚೇರ್‌ನಲ್ಲಿ ಕಾಫಿಯನ್ನು ಹೀರುತ್ತಾ, ಪೇಪರ್ ಓದುತ್ತಿದ್ದಾರೆ. ಅವರು ತನ್ನ ಮಗ್ಗುYಲಲ್ಲಿರುವ ರೇಡಿಯೋವನ್ನು ಆನ್ ಮಾಡಿದಾಗ ಇದು ಆಕಾಶವಾಣಿ ಎಂಬ ಧ್ವನಿ ಕೇಳಿದಾಗಲೇ ಆಡು-ಕಂದಮ್ಮಗಳಿಗೆ ಬೆಳಗ್ಗಿನ ಶುಭ ಸಂದೇಶ. ಅಲ್ಲೇ ದೂರದಲ್ಲಿರುವ ಅಜ್ಜಿಯಿಂದ “ಸ್ವಲ್ಪ ಸೌಂಡ್ ಜೋರಾಗಿಡಿ, ನಾವೂ ಸುದ್ದಿ ಕೇಳುತ್ತೇವೆ’ ಎಂಬ ಒತ್ತಾಯ. ವಾರ್ತೆ, ಬಳಿಕ ಉದಯರಾಗ, ತದನಂತರ ಚಿತ್ರಗೀತೆಗಳು… ಹೀಗೆ ದಿನದ ಆರಂಭದಿಂದ ಕೊನೆ ಘಳಿಗೆಯವರೆಗೂ ರೇಡಿಯೋ ಜೀವನದಲ್ಲಿ ಹಾಸುಹೊಕ್ಕು.
Related Articles
2010ರ ಸೆ. 20ರಂದು ಸ್ಪೇಯ್ನನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ಯುನೆಸ್ಕೋದ ಮುಂದೆ ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬೇಡಿಕೆಯನ್ನು ಮಂಡಿಸಿತು. 2010ರ ಸೆ. 29ರಂದು ವಿಶ್ವ ರೇಡಿಯೋ ದಿನದ ಆಚರಣೆಯನ್ನು ಘೋಷಿಸಲಾಯಿತು. 2012ರ ಡಿಸೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇದನ್ನು ಅನುಮೋದಿಸಿತು. ವಿಶ್ವ ರೇಡಿಯೋ ದಿನವನ್ನು ಆಚರಿಸುವ ಸಂಪ್ರದಾಯ 2012ರ ಫೆ. 13ರಿಂದ ಪ್ರಾರಂಭವಾಯಿತು.ರೇಡಿಯೋ ಜನರಿಗೆ ಶಿಕ್ಷಣ, ಕೃಷಿ ಮತ್ತಿತರ ಕ್ಷೇತ್ರಗಳ ಮಾಹಿತಿ ಮತ್ತು ಸುದ್ದಿಗಳನ್ನು ಒದಗಿಸುವ ಮಾಧ್ಯಮವಾಗಿದೆ ಮಾತ್ರವಲ್ಲದೆ, ಅವರು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಒಂದು ವೇದಿಕೆಯೂ ಆಗಿದೆ. ಇಟಲಿಯ ಮಾರ್ಕೊನಿ ರೇಡಿಯೋದ ಪಿತಾಮಹ. ಆರಂಭದಲ್ಲಿ ರೇಡಿಯೋವನ್ನು ವೈರ್‌ಲೆಸ್ ಟೆಲಿಗ್ರಾಫ್ ಎಂದು ಕರೆಯಲಾಗುತ್ತಿತ್ತು.
Advertisement
ಆಲ್ ಇಂಡಿಯಾ ರೇಡಿಯೋ (ಎಐಆರ್)
ಆಲ್ ಇಂಡಿಯಾ ರೇಡಿಯೋ (ಎಐಆರ್) ವಿಶ್ವದ ಅತಿದೊಡ್ಡ ರೇಡಿಯೋ ನೆಟ್‌ವರ್ಕ್ ಎಂಬ ಖ್ಯಾತಿಯನ್ನು ಹೊಂದಿದೆ. 1936ರ ಜೂನ್ 8ರಂದು ಆಲ್ ಇಂಡಿಯಾ ರೇಡಿಯೋ ಸ್ಥಾಪನೆಯಾಯಿತು. ಇದು ದೇಶದ ಜನಸಂಖ್ಯೆಯ ಶೇ. 99.19ರಷ್ಟು ಜನರನ್ನು ತಲುಪುತ್ತಿದೆ. 23 ಭಾಷೆಗಳಲ್ಲಿ ಆಲ್ ಇಂಡಿಯಾ ರೇಡಿಯೋ ಪ್ರಸಾರವಾಗುತ್ತದೆ. ಕುಗ್ರಾಮಗಳನ್ನು ಕೂಡ ತಲುಪಿರುವ ಮಾಧ್ಯಮ ಇದಾಗಿದೆ. ವೈವಿಧ್ಯದ ಸಂದೇಶ
“ರೇಡಿಯೋ ಮತ್ತು ವೈವಿಧ್ಯ’ ಎಂಬ ಥೀಮ್ ಇರಿಸಿಕೊಂಡು ಈ ಬಾರಿ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಗುತ್ತಿದೆ. ನ್ಯೂಸ್ ರೂಮ್ ಮತ್ತು ಏರ್ ವೇಯಲ್ಲಿ ವೈವಿಧ್ಯ ಕಾಪಾಡಿಕೊಳ್ಳುವುದು ಮತ್ತು ಕೇಳುಗರ ಸದಭಿರುಚಿಗೆ ಅನುಗುಣವಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವುದು, ಸಮುದಾಯಗಳ ಕಾರ್ಯಕ್ರಮದಲ್ಲಿ ವೈವಿಧ್ಯವನ್ನು ತರುವುದು ಆಚರಣೆಯ ಉದ್ದೇಶ. ವಿಶ್ವ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ 44 ಸಹಸ್ರ ರೇಡಿಯೋ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. – ಧನ್ಯಶ್ರೀ ಬೋಳಿಯಾರ್