Advertisement
ಸ್ವಿಟ್ಸರ್‌ಲ್ಯಾಂಡ್ ರಾಜಧಾನಿ ಬರ್ನ್ನಲ್ಲಿ 1874ರಲ್ಲಿ ಯೂನಿವರ್ಸಲ್ ಪೋಸ್ಟಲ್ ಯೂನಿಯನ್(ಯುಪಿಯು) ಸ್ಥಾಪನೆಯಾಯಿತು. 1969ರಲ್ಲಿ ಜಪಾನ್‌ನ ಟೋಕಿಯೊದಲ್ಲಿ ನಡೆದ ಯುಪಿಯು ಕಾಂಗ್ರೆಸ್‌ನಲ್ಲಿ ಮೊದಲ ಬಾರಿಗೆ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು. ಆ ಬಳಿಕ ವರ್ಷಂಪ್ರತಿ ಅಂಚೆ ಸೇವೆಗಳ ಮಹತ್ವವನ್ನು ಸಾರುವ ಉದ್ದೇಶದಿಂದ ವಿಶ್ವಾದ್ಯಂತ ಅಕ್ಟೋಬರ್ 9ರಂದು ವಿಶ್ವ ಅಂಚೆ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತದಲ್ಲಿ ಅಂಚೆ ಸೇವೆಯು ಇಂದಿಗೂ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆ ಯನ್ನು ನೀಡುತ್ತಿದೆ. ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಜಾಲವನ್ನು ಹೊಂದಿರುವ ಅಂಚೆ ವ್ಯವಸ್ಥೆಯು ದೇಶದಲ್ಲಿ ಮುಖ್ಯ, ಉಪ, ಶಾಖಾ ಅಂಚೆ ಕಚೇರಿಗಳ ಸಹಿತ ಒಟ್ಟಾರೆ 1,56,641 ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ 4,44,266 ಅಂಚೆ ಡಬ್ಬಗಳನ್ನು ಹೊಂದಿದೆ. ಕೇವಲ ಪತ್ರ, ಪಾರ್ಸೆಲ್ ಸೇವೆಗಳಿಗೆ ಅಂಚೆ ಕಚೇರಿಗಳು ಸೀಮಿತವಾಗದೆ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತಿವೆ.
Related Articles
Advertisement
ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್ ಮಾದರಿಯಲ್ಲಿ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಜನರು ಇಂದಿಗೂ ತಮ್ಮ ಹಣಕಾಸು ವ್ಯವಹಾರಗಳಿಗೆ ಅಂಚೆ ಕಚೇರಿಯನ್ನೇ ಅವಲಂಬಿಸಿದ್ದಾರೆ. ಉಳಿತಾಯದ ನೆನಪು ಬಂದಾಗಲೆಲ್ಲ ನಮಗೆಲ್ಲರಿಗೂ ಮೊದಲು ನೆನಪಾಗುವುದು ಅಂಚೆ ಕಚೇರಿಯೇ. ಇಲ್ಲಿನ ಉಳಿತಾಯ ಯೋಜನೆಗಳ ಬಗೆಗೆ ಜನರಿಗೆ ಎಲ್ಲಿಲ್ಲದ ವಿಶ್ವಾಸ ಮತ್ತು ನಂಬಿಕೆ. ಇದರಿಂದಾಗಿಯೇ ಅಂಚೆಯಣ್ಣನಿಂದ ಹಿಡಿದು ಕಚೇರಿಗಳಲ್ಲಿರುವ ಅಧಿಕಾರಿಗಳು ಮತ್ತು ಸಿಬಂದಿಯ ಬಗೆಗೆ ಜನತೆಗೆ ಒಂದು ರೀತಿಯ ಗೌರವದ ಭಾವನೆ. ಈ ಕಾರಣದಿಂದಾಗಿಯೇ ಅಂಚೆ ಇಲಾಖೆ ಮತ್ತದರ ಸೇವೆಗಳು ಜನಜೀವನದಲ್ಲಿ ಹಾಸುಹೊಕ್ಕಾಗಿವೆ.
ಡಿಜಿಟಲ್ಸ್ನೇಹಿಕೇಂದ್ರ ಸರಕಾರದ ವಿವಿಧ ಸೇವಾ ಯೋಜನೆಗಳ ಕೆಲಸಕಾರ್ಯಗಳನ್ನೂ ಅಂಚೆ ಕಚೇರಿಗಳು ನಿರ್ವಹಿಸುತ್ತಿವೆ. ಅಂಚೆ ಇಲಾಖೆ ಕೂಡ ಡಿಜಿಟಲ್‌ಸ್ನೇಹಿಯಾಗಿ ಪರಿವರ್ತನೆಯಾಗಿದೆ. ಬ್ಯಾಂಕ್‌ಗಳ ಮಾದರಿಯಲ್ಲಿ ಅಂಚೆ ಕಚೇರಿಗಳೂ ಕೂಡ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಆರಂಭಿಸಿವೆ. ಈ ಮೂಲಕ ಅಂಚೆ ಕಚೇರಿ ಯುವ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದೆ.