Advertisement

World Cancer Day: ಕ್ಯಾನ್ಸರ್‌: ಕಲಬುರಗಿಯಲ್ಲಿ ಅಧಿಕ, ಯಾದಗಿರಿ, ಉಡುಪಿಯಲ್ಲಿ ಕಡಿಮೆ

11:25 PM Feb 03, 2024 | Team Udayavani |

ಬೆಂಗಳೂರು: ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾದ “ಕ್ಯಾನ್ಸರ್‌ ಸ್ಕ್ರೀನಿಂಗ್‌’ ಸೇವೆಯಿಂದ ಪ್ರಾರಂಭಿಕ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 4,403 ಮಹಿಳೆಯರನ್ನು ಗುರುತಿಸಿ, ಅಗತ್ಯವಿರುವ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಿದೆ.

Advertisement

ಕ್ಯಾನ್ಸರ್‌ ಶೇ.50ರಷ್ಟು ಉಲ್ಬಣಗೊಂಡ ಬಳಿಕವಷ್ಟೇ ರೋಗಿಗಳು ವೈದ್ಯರನ್ನು ಸಂಪರ್ಕಿಸುತ್ತಾರೆ. ಇದರಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತು ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ, ತಾಲೂಕು, ಪ್ರಾಥಮಿಕ ಹಾಗೂ ಕೆಳಹಂತದಲ್ಲಿರುವ ಕ್ಷೇಮಾ ಕೇಂದ್ರಗಳಲ್ಲಿ 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕ್ಯಾನ್ಸರ್‌ ಸ್ಕ್ರೀನಿಂಗ್‌ ಪ್ರಾರಂಭಿಸಲಾಗಿದೆ. ತಪಾಸಣೆಯ ವೇಳೆ ಕ್ಯಾನ್ಸರ್‌(ಹುಣ್ಣು ರೋಗ) ಲಕ್ಷಣಗಳಿದ್ದರೆ ಸ್ತ್ರೀ ರೋಗ ತಜ್ಞರು ಇಲ್ಲವೇ ಮೂರನೇ ಹಂತದ ಚಿಕಿತ್ಸೆಗೆ ಅಗತ್ಯವಿರುವ ಆಸ್ಪತ್ರೆಗಳಿಗೆ ರೆಫ‌ರ್‌ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್‌ ಹರಡುವಿಕೆಗೆ ಚಿಕಿತ್ಸೆಯ ಮೂಲಕ ಕಡಿವಾಣ ಹಾಕಲಾಗುತ್ತಿದೆ.

78 ಲಕ್ಷ ಮಹಿಳೆಯರ ಸ್ಕ್ರೀನಿಂಗ್‌
ಆರೋಗ್ಯ ಇಲಾಖೆ ರಾಜ್ಯದಲ್ಲಿ 30 ವರ್ಷ ಮೇಲ್ಪಟ್ಟr 1.12 ಕೋಟಿ ಮಹಿಳೆಯರನ್ನು ಪರೀಕ್ಷೆ ಒಳಪಡಿಸಲು ಮುಂದಾಗಿದೆ. ಇದುವರೆಗೆ 78 ಲಕ್ಷ ಮಹಿಳೆಯರನ್ನು ಕ್ಯಾನ್ಸರ್‌ ಸ್ಕ್ರೀನಿಂಗ್‌ ಒಳಪಡಿಸಲಾಗಿದೆ. ಈ ವೇಳೆ ಪ್ರಾರಂಭಿಕ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 4,403 ಮಂದಿಯನ್ನು ಪತ್ತೆ ಮಾಡಿದ್ದು, ಅವರನ್ನು ಹೆಚ್ಚುವರಿ ಚಿಕಿತ್ಸೆಗೆ ಮೂರನೇ ಹಂತದ ಆಸ್ಪತ್ರೆಗಳಿಗೆ ರೆಫ‌ರ್‌ ಮಾಡಲಾಗಿದೆ.

ಕಲಬುರಗಿ ಪ್ರಥಮ
ಸ್ಕ್ರೀನಿಂಗ್‌ ಒಳಪಡಿಸಿದ ಸಂದರ್ಭದಲ್ಲಿ ಅತ್ಯಧಿಕ ಕ್ಯಾನ್ಸರ್‌ ಪ್ರಕರಣಗಳು ವರದಿಯಾದ ಜಿಲ್ಲಾವಾರು ಪಟ್ಟಿಯಲ್ಲಿ ಕಲಬುರಗಿ ಅಗ್ರಸ್ಥಾನ ಪಡೆದುಕೊಂಡಿದೆ. ಇಲ್ಲಿ ಮೊದಲ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 2,320 ಮಹಿಳೆಯರನ್ನು ಗುರುತಿಸಲಾಗಿದೆ. ಅನಂತರದ ಸ್ಥಾನವನ್ನು ಚಿಕ್ಕಮಗಳೂರು, ಹಾಸನ, ತುಮಕೂರು ಜಿಲ್ಲೆ ಪಡೆದುಕೊಂಡಿದೆ. ಕೊನೆಯ ಸ್ಥಾನವನ್ನು ಯಾದಗಿರಿ ಹಾಗೂ ಉಡುಪಿ ಜಿಲ್ಲೆ ಪಡೆದುಕೊಂಡಿದೆ.

ಕಾರಣವೇನು?
ಆಧುನಿಕ ಜೀವನ ಶೈಲಿಯಿಂದಾಗಿ ಮಹಿಳೆಯರಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಹಾರ್ಮೋನ್‌ನಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಕೊಬ್ಬಿನ ಕೋಶದಲ್ಲಿ ಈಸ್ಟ್ರೋಜೆನ್‌ ಉತ್ಪಾದನೆಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಹಾಗೂ ಮಗುವಿಗೆ ಹಾಲು ಕುಡಿಸದೇ ಇರುವುದು, ಹಾರ್ಮೋನ್‌ ಮಾತ್ರೆ ಸೇವನೆಯಿಂದ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್‌ ಬರುತ್ತಿರುವುದಾಗಿ ಅಧ್ಯಯನಗಳು ತಿಳಿಸಿವೆ.

Advertisement

ಒಂದೇ ವರ್ಷದಲ್ಲಿ 87,400 ಕ್ಯಾನ್ಸರ್‌ ದೃಢ
ರಾಜ್ಯದಲ್ಲಿ ಕ್ಷೇಮಾ ಕೇಂದ್ರಗಳನ್ನು ಹೊರತುಪಡಿಸಿದರೆ, ಕಳೆದೊಂದು ವರ್ಷದಲ್ಲಿ ಒಟ್ಟಾರೆ 87,400 ಮಂದಿಯಲ್ಲಿ ಕ್ಯಾನ್ಸರ್‌ ದೃಢವಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಕ್ಯಾನ್ಸರ್‌ ಪೀಡಿತರ ಸಂಖ್ಯೆ 2.4 ಲಕ್ಷಕ್ಕೆ ಏರಿಕೆ ಯಾಗಿದೆ. ವರದಿಯಾಗಿರುವ ಒಟ್ಟು ಕ್ಯಾನ್ಸರ್‌ ಪ್ರಕರಣಗಳಲ್ಲಿ 22,000 ಪ್ರಕರಣಗಳು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಾಗಿದೆ. ಕಿದ್ವಾಯಿ ಸಂಸ್ಥೆ ಯಲ್ಲಿ 6,380 ಪುರುಷ ಹಾಗೂ 8,350 ಮಹಿಳಾ ಕ್ಯಾನ್ಸರ್‌ ರೋಗಿಗಳಾಗಿದ್ದಾರೆ. ಪುರುಷರಲ್ಲಿ ಶೇ. 14ರಷ್ಟು ಶ್ವಾಸಕೋಶ ಹಾಗೂ ಮಹಿಳೆಯರಲ್ಲಿ ಶೇ. 30.7 ಸ್ತನ ಕ್ಯಾನ್ಸರ್‌ ವರದಿಯಾಗಿದೆ.

ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ್‌ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಎನ್‌ಸಿಡಿ(ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗ) ವಿಶೇಷವಾಗಿ ಆರೋಗ್ಯ ಇಲಾಖೆ 30 ವರ್ಷ ಮೇಲ್ಪಟ್ಟ ಮಹಿಳೆಯರನ್ನು ಗುರುತಿಸಿ ಕ್ಯಾನ್ಸರ್‌ ಸ್ಕ್ರೀನಿಂಗ್‌ ಹಾಗೂ ಉಚಿತ ಚಿಕಿತ್ಸೆ ರೆಫ‌ರ್‌ ಮಾಡಲಾಗುತ್ತಿದೆ.
-ಡಾ| ಶ್ರೀನಿವಾಸ, ಉಪನಿರ್ದೇಶಕ, ಎನ್‌ಸಿಡಿ ಆರೋಗ್ಯ ಇಲಾಖೆ

 ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next