ಬೆಂಗಳೂರು: ನಗರದಲ್ಲಿ ಬಿಬಿಎಂಪಿ ಹಾಗೂ ನಗರೋತ್ಥಾನದಡಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪರಿಶೀಲನೆಗೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಲಿದ್ದಾರೆ.
ಕಳೆದೊಂದು ವರ್ಷದ ಬಳಿಕ ನಗರದಲ್ಲಿ ನಡೆಯುತ್ತಿರುವ ಹಲವಾರು ಕಾಮಗಾರಿಗಳ ವೀಕ್ಷಣೆಗೆ ಹೆಚ್ಚಿನ ಸಮಯವನ್ನು ಮೀಸರಿಸಿದ್ದಾರೆ. ಈ ಹಿಂದೆ ಕೆಲವು ಬಾರಿ ನಗರ ಪ್ರದಕ್ಷಿಣೆ ನಡೆಸಿದರಾದರೂ, ಎರಡು ಮೂರು ಕಾಮಗಾರಿಗಳ ವೀಕ್ಷಣೆಗೆ ಸೀಮಿತವಾಗಿದ್ದವು. ಇದೀಗ ಮತ್ತೆ ನಗರದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಗೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿಯಿಂದ ಬೆಳಗ್ಗೆ 10 ನಗರ ಪ್ರದಕ್ಷಿಣೆ ಆರಂಭಿಸಲಿರುವ ಮುಖ್ಯಮಂತ್ರಿಗಳು ಎಂ.ಜಿ.ರಸ್ತೆಯಲ್ಲಿ ನಡೆಸಲಾಗುತ್ತಿರುವ ಪಾದಚಾರಿ ಮೇಲ್ದರ್ಜೆ, ಚರ್ಚ್‌ಸ್ಟ್ರೀಟ್‌ನಲ್ಲಿ ನಡೆಸಲಾಗುತ್ತಿರುವ ಟೆಂಡರ್‌ಶ್ಯೂರ್ ಕಾಮಗಾರಿ, ಹೊಸೂರು ರಸ್ತೆಯಲ್ಲಿ ನಿರ್ಮಿಸುತ್ತಿರುವ ವಿಸ್ತರಿತ ಮೇಲ್ಸೇತುವೆ, ಕೋರಮಂಗಲದ ರಾಜೇಂದ್ರನಗರದ ಕೊಳೆಗೇರಿಯಲ್ಲಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ.
ಬಿಬಿಎಂಪಿ ವತಿಯಿಂದ ನಡೆಸಲಾಗುತ್ತಿರುವ ಮೇಸಿಪಾಳ್ಯ ಕೆರೆ ಉದ್ಯಾನ ಅಭಿವೃದ್ಧಿ ಕಾಮಗಾರಿ ವೀಕಕ್ಷಿಸಲಿರುವ ಮುಖ್ಯಮಂತ್ರಿಗಳು, ನಂತರದಲ್ಲಿ ಜೇಡಿಮರ ಜಂಕ್ಷನ್ ಮೂಲಕ ದಾಲಿಯಾ ಜಂಕ್ಷನ್ ಬಳಿ ನಿರ್ಮಿಲಸಾಗುತ್ತಿರುವ ಮೇಲ್ಸೇತುವೆ ಹಾಗೂ ಮಳೆನೀರುಗಾಲುವೆ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ. ಇದರೊಂದಿಗೆ ಪದ್ಮನಾಭನಗರದ ಬಳಿ ನಡೆಯುತ್ತಿರುವ ಮಳೆ ನೀರುಗಾಲುವೆ ಕಾಮಗಾರಿ ಪರಿಶೀಲಿಸಲಿರುವ ಅವರು ಆನಂತರದಲ್ಲಿ ಕನಕನ ಪಾಳ್ಯದಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್ ಪರಿಶೀಲನೆ ನಡೆಸಲಿದ್ದಾರೆ.
ನಗರ ಪ್ರದಕ್ಷಿಣೆ ವೇಳೆ ಮುಖ್ಯಮಂತ್ರಿಗಳೊಂದಿಗೆ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸೇರಿದಂತೆ ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬಿಡಿಎ, ಜಲಮಂಡಳಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇರಲಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ನಗರೋತ್ಥಾನದಡಿಯಲ್ಲಿ 7300 ಕೋಟಿ ರೂಪಾಯಿ ಅನುದಾನ ರಸ್ತೆ, ಅಂಡರ್‌ಪಾಸ್, ಮಳೆನೀರುಗಾಲುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು ಎಲ್ಲಾ ಕಾಮಗಾರಿಗಳನ್ನು ಡಿಸೆಂಬರ್ ಒಳಗೆ ಮುಗಿಸುವುದಕ್ಕೆ ಈಗಾಗಲೇ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡುವುದಕ್ಕೆ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.