Advertisement

ರಾಜ್ಯಾದ್ಯಂತ ಇಂದು ರಂಜಾನ್‌ ಹಬ್ಬ ;ಗಣ್ಯರ ಶುಭಾಶಯಗಳು

03:45 AM Jun 26, 2017 | Team Udayavani |

ಬೆಂಗಳೂರು: ಇಸ್ಲಾಮಿಕ್‌ ಕ್ಯಾಲೆಂಡರ್‌ನ ಶವ್ವಾಲ್‌ ತಿಂಗಳ ಮೊದಲ ದಿನದ ಚಂದ್ರದರ್ಶನ ಭಾನುವಾರ ಸಂಜೆ ಆಗಿದ್ದು, ಅದರಂತೆ ಸೋಮವಾರ (ಜೂ.26) ಕರಾವಳಿ ಜಿಲ್ಲೆಗಳು ಹೊರತುಪಡಿಸಿ ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ಈದ್‌ ಉಲ್‌ ಫಿತ್ರ (ರಂಜಾನ್‌ ಹಬ್ಬ) ಆಚರಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಚಂದ್ರದರ್ಶನ ಸಮಿತಿ ಪ್ರಕಟಿಸಿದೆ.

Advertisement

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾನುವಾರವೇ ಈದ್‌ ಉಲ್‌ ಫಿತ್ರ ಆಚರಿಸಲಾಯಿತು. ಸೋಮವಾರ ರಾಜ್ಯದ ಉಳಿದ ಎಲ್ಲ ಭಾಗಗಳಲ್ಲಿ ಈದ್‌ ಆಚರಿಸಲಾಗುವುದು ಎಂದು ಸಮಿತಿ ಸದಸ್ಯ ಮೌಲಾನಾ ಮಕ್ಸೂದ್‌ ಇಮ್ರಾನ್‌ ರಶಾದಿ ಮಾಹಿತಿ ನೀಡಿದ್ದಾರೆ.

ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ದಾವಣಗೆರೆ, ರಾಯಚೂರು, ಕಲಬುರಗಿ, ಬೀದರ್‌ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ, ತಾಲೂಕ ಕೇಂದ್ರಗಳು ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ನಡೆಯುವ ವಿಶೇಷ ಪ್ರಾರ್ಥನೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಳ್ಳಲಿದ್ದಾರೆ.

ಇದಲ್ಲದೇ ಬೆಂಗಳೂರಿನ ಮಿಲ್ಲರ್ಸ್‌ ಖುದ್ದೂಸ್‌ ಸಾಬ್‌ ಈದ್ಗಾ, ಬನ್ನೇರುಘಟ್ಟ ರಸ್ತೆಯ ಹಜರತ್‌ ಬಿಲಾಲ್‌ ಈದ್ಗಾ, ಮೈಸೂರು ರಸ್ತೆಯ ಚಾಮರಾಜಪೇಟೆ ಈದ್ಗಾ, ಜಯನಗರ 4ನೇ ಬ್ಲಾಕ್‌ನ ಈದ್ಗಾ, ಶಿವಾಜಿನಗರದ ಛೋಟಾ ಮೈದಾನ, ನಾಗವಾರದ ಸಬೀಲುರ್ರಶಾದ್‌ ಅರೆಬಿಕ್‌ ಕಾಲೇಜು ಮೈದಾನ ಸೇರಿದಂತೆ ವಿವಿಧ ಕಡೆ ಈದ್‌ ಪ್ರಾರ್ಥನೆ ನಡೆಯಲಿದೆ.

ನಾಗವಾರದ ಸಬೀಲುರ್ರಶಾದ್‌ ಅರೆಬಿಕ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈದ್‌ ಪ್ರಾರ್ಥನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಭಾಗವಹಿಸಲಿದ್ದಾರೆ. ಮುಸ್ಲಿಮರು ಪವಿತ್ರ ಈದ್‌ ಉಲ್‌ ಫಿತ್ರ ಹಬ್ಬಕ್ಕೆ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಹಲವು ರಾಜಕೀಯ ಮುಖಂಡರು, ಗಣ್ಯರು ಶುಭಾಷಯ ಕೋರಿದ್ದಾರೆ.

Advertisement

ಗಣ್ಯರ ಶುಭಾಶಯಗಳು
ಬೆಂಗಳೂರು:
ಈದುಲ್‌ ಫಿತ್ರ ಎಂದು ಕರೆಯಲಾಗುವ ಮುಸ್ಲಿಮರ ಪವಿತ್ರ ರಂಜಾನ್‌ ಹಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಸಮಸ್ತ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ವ್ಯಕ್ತಿಯ ಮನಃಶುದ್ದಿ ಮತ್ತು ಆತ್ಮಶುದ್ಧಿಗಾಗಿ ಒಂದು ತಿಂಗಳು ಉಪವಾಸ ವೃತ ಆಚರಿಸಿ, ತಿಂಗಳ ಕೊನೆಗೆ ಆಚರಿಸುವ ಹಬ್ಬದ ಸಂದರ್ಭದಲ್ಲಿ ಬಡವರಿಗೆ ದಾನ ಮಾಡುವುದು ರಂಜಾನ್‌ ಹಬ್ಬದ ವಿಶೇಷತೆ. ದಾನದ ಈ ಸಂಪ್ರದಾಯ ತಾನೂ ಬದುಕುವುದರ ಜೊತೆಗೆ ಮತ್ತೂಬ್ಬರನ್ನು ಬದುಕಲು ಅವಕಾಶ ನೀಡಬೇಕು ಎಂಬ ಶ್ರೇಷ್ಠ ಸಂದೇಶ ಸಾರುತ್ತದೆ.

ಒಂದೆಡೆ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಕಂದರ ಸೃಷ್ಟಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೂಂದಡೆ ಧರ್ಮ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿರುವವರ  ಸಂಖ್ಯೆಯೂ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಂಜಾನ್‌ ಹಬ್ಬವು ಎಲ್ಲಡೆ ಮತ್ತು ಎಲ್ಲರಲ್ಲೂ ಸಹೋದರತೆ ಮತ್ತು ಸೌಹಾರ್ದತೆ ಮೂಡಿಸಲು ಪ್ರೇರಣೆ ಮತ್ತು ಸ್ಪೂರ್ತಿ ನೀಡಲಿ ಎಂಬುದೇ ನನ್ನ ಮನದಾಳದ ಹಾರೈಕೆ ಎಂದು ಸಿದ್ದರಾಮಯ್ಯ ತಮ್ಮ ಶುಭಾಷಯ ಸಂದೇಶದಲ್ಲಿ ತಿಳಿಸಿದ್ದಾರೆ.

“ಪವಿತ್ರ ಈದ್‌ ಉಲ್‌ ಫಿತ್ರ ಹಬ್ಬದ ಪ್ರಯುಕ್ತ ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಷಯಗಳನ್ನು ತಿಳಿಸುತ್ತೇನೆ . ಹಬ್ಬವು ಸುಖ, ಆರೋಗ್ಯ ಮತ್ತು ಶಾಂತಿಯುತ ಜೀವನ ದಯಪಾಲಿಸಲಿ ಎಂದು ಹಾರೈಸುತ್ತೇನೆ’.
  – ವಜುಭಾಯಿ ವಾಲಾ, ರಾಜ್ಯಪಾಲ.

“ಶಾಂತಿ ಮತ್ತು ಸಹೋದರ ಭಾವವನ್ನು ಸಂಭ್ರಮದಿಂದ ವ್ಯಕ್ತಪಡಿಸುವ ರೀತಿಯಲ್ಲಿ ಆಚರಿಸಲಾಗುವ ಪವಿತ್ರ ರಂಜಾನ್‌ ಹಬ್ಬದ ಸಂದರ್ಭದಲ್ಲಿ ನಾಡಿನ ಎಲ್ಲ ಮುಸ್ಲಿಂ ಬಾಂಧವರಿಗೆ ಶುಭಾಷಯಗಳನ್ನು ತಿಳಿಸುತೇನೆ. ಎಲ್ಲ ಮತರ್ಧಮಗಳ ಜನರು ಒಗ್ಗಟ್ಟು ಮತ್ತು ಸೌಹಾರ್ದತೆಯಿಂದ ಒಂದೇ ಕುಟುಂಬದ ರೀತಿ ಬದುಕಿ ವಿವಿಧತೆಯಲ್ಲಿ ಏಕತೆ ಕಾಣುವ ಭಾರತದ ಭಾವೈಕ್ಯತೆ ಬಲಗೊಳ್ಳಲಿ. ಜನರ ಬದುಕು ಹಸನಾಗಿ ಸುಖ ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೇನೆ’.
 - ಡಾ. ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ.

“ಸಹೋದರತ್ವದ ಪ್ರತೀಕವಾಗಿರುವ ಪವಿತ್ರ ರಂಜಾನ್‌ ಹಬ್ಬದ ಆಚರಣೆಯ ಸಂದರ್ಭದಲ್ಲಿ ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಹಾರ್ದಿಕ ಶುಭಾಷಯಗಳನ್ನು ಕೋರುತ್ತಾ, ನಾಡಿನ ಸಮಸ್ತ ಜನತೆಗೆ ಸುಖ ಶಾಂತಿ ಸಮೃದ್ಧಿ ವೃದ್ಧಿಸಲೆಂದು ಹಾರೈಸುತ್ತೇನೆ’.
 - ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next