Advertisement

India Club: ಸ್ಟ್ರಾಂಡ್‌ನ‌ಲ್ಲಿ ಇಂಡಿಯಾ ಕ್ಲಬ್‌ಗ ಇಂದೇ ಕೊನೆಯ ದಿನ

11:06 PM Sep 16, 2023 | Team Udayavani |

ಲಂಡನ್‌: ಲಂಡನ್‌ ನಗರದ ಕೇಂದ್ರಭಾಗದಲ್ಲಿರುವ ಇಂಡಿಯಾ ಕ್ಲಬ್‌, ಭಾನುವಾರ ಶಾಶ್ವತವಾಗಿ ಮುಚ್ಚಿಹೋಗಲಿದೆ. ಭಾರತದ ಸ್ವಾತಂತ್ರ್ಯ ಹೋರಾಟದ, ಹೋರಾಟಗಾರರ ಸವಿನೆನಪುಗಳನ್ನು ಹೊತ್ತಿರುವ ಈ ಸ್ಥಳ ಇನ್ನು ಮುಂದೆ ಇರುವುದಿಲ್ಲ. ಕೊನೆಯ ಬಾರಿಗೆ ಭೇಟಿ ಮಾಡುವವರಿಗಾಗಿ ಅದರ ಉಸ್ತುವಾರಿ ಹೊತ್ತಿರುವವರು ಮುಂಚಿತವಾಗಿಯೇ ಗಮನಕ್ಕೆ ತಂದಿದ್ದಾರೆ. ಈ ಕ್ಲಬ್‌ನೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಿರುವ ಭಾರತೀಯರು ಮಾತ್ರ ಅಯ್ಯೋ ಒಂದು ಸಾಂಸ್ಕೃತಿಕ, ಐತಿಹಾಸಿಕ ಕೊಂಡಿ ಕಳಚಿ ಹೋಗುತ್ತದಲ್ಲ ಎಂದು ಕೊರಗುತ್ತಿದ್ದಾರೆ. ಆದರೆ ಎಲ್ಲ ಪ್ರಯತ್ನದ ಹೊರತಾಗಿಯೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

Advertisement

ಇಂಡಿಯಾ ಕ್ಲಬ್‌ ಅನ್ನು ಸ್ಥಾಪಿಸಿದ್ದು ಇಂಡಿಯಾ ಲೀಗ್‌. ಕೃಷ್ಣ ಮೆನನ್‌, ಜವಾಹರಲಾಲ್‌ ನೆಹರೂ ಮುಂತಾದವರು ಇದರ ಸ್ಥಾಪಕ ಸದಸ್ಯರು. ಸ್ಟ್ರಾಂಡ್‌ ಕಾಂಟಿನೆಂಟಲ್‌ ಹೋಟೆಲ್‌ನ ಮೊದಲ ಮಹಡಿಯಲ್ಲಿ ಈ ಕ್ಲಬ್‌ ಭಾರತೀಯ ರೆಸ್ಟೋರೆಂಟ್‌ ಆಗಿ 1946ರಿಂದ ಬದಲಾಯಿತು. ಭಾರತೀಯ ವಿದ್ಯಾರ್ಥಿಗಳು ಓದಿಕೊಳ್ಳುತ್ತಾ, ಹಣಕ್ಕೆ ಚಿಂತಿಸದೇ ಇರಲು ಒಂದು ಜಾಗ ಬೇಕೆಂದು ಇದನ್ನು ಸಿದ್ಧಪಡಿಸಲಾಯಿತು. ಇಲ್ಲಿ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್‌, ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ, ಭಾರತದ ಕೊನೆಯ ವೈಸ್‌ರಾಯ್‌ ಮೌಂಟ್‌ ಬ್ಯಾಟನ್‌ ಅವರ ನೆನಪುಗಳಿವೆ.

ಈ ಹೋಟೆಲ್‌ನ ಮಾಲಿಕ ಸಂಸ್ಥೆ ಮಾರ್ಸ್ಟನ್‌ ಪ್ರಾಪರ್ಟೀಸ್‌ 2018ರಲ್ಲಿ ಹೋಟೆಲ್‌ ಅನ್ನು ಆಧುನೀಕರಣಗೊಳಿಸಲು ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿತ್ತು. ಇದು ಐತಿಹಾಸಿಕ, ಸಾಂಸ್ಕೃತಿಕ ಕೇಂದ್ರವಾಗಿದ್ದರಿಂದ ಅದು ಸಾಧ್ಯವಿಲ್ಲ ಎಂದು ಸರ್ಕಾರ ತಿರಸ್ಕರಿಸಿತು. ಆದರೆ ಏರುತ್ತಿರುವ ಬಾಡಿಗೆ, ವಿಪರೀತ ಖರ್ಚಿನಿಂದ ಇಂಡಿಯಾ ಕ್ಲಬ್‌ ಅನ್ನು ಪ್ರಸ್ತುತ ಜಾಗದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಬೇರೆ ಸ್ಥಳಕ್ಕೆ ವರ್ಗಾಯಿಸುತ್ತೇವೆ ಎಂದು ಪಾರ್ಸಿ ಮಾಲಿಕರಾದ ಫಿರೋಜಾ ಮಾರ್ಕರ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next