ನವದೆಹಲಿ: 2023-24 ಆರ್ಥಿಕ ವರ್ಷದ ಆದಾಯ ತೆರಿಗೆ ರಿಟನ್ಸ್ (ಐಟಿಆರ್) ಸಲ್ಲಿಕೆಗೆ ಇಂದೇ(ಜು.31) ಕೊನೆಯ ದಿನ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಜತೆಗೆ ಯಾವುದೇ ವದಂತಿಗೆ ತಲೆಕೊಡಬೇಡಿ, ಈ ವರ್ಷ ಯಾವುದೇ ಕಾಲಾವಕಾಶ ವಿಸ್ತರಣೆಯಾಗುವುದಿಲ್ಲ, ತೆರಿಗೆದಾರರು ದಂಡದಿಂದ ತಪ್ಪಿಸಿಕೊಳ್ಳಲು ಹಾಗೂ ಕೊನೆಯ ಕ್ಷಣದಲ್ಲಿ ಪರದಾಡದೇ ಇರಲು ಬೇಗ ರಿಟನ್ಸ್ ಸಲ್ಲಿಕೆ ಮಾಡಿ ಎಂದು ಇಲಾಖೆ ಹೇಳಿದೆ.
6 ಕೋಟಿ ರಿಟನ್ಸ್
ಅಲ್ಲದೇ ಈ ವರ್ಷ 6 ಕೋಟಿ ರೂ.ಗಳಷ್ಟು ಐಟಿ ರಿಟನ್ಸ್ ಸಲ್ಲಿಕೆಯಾಗಿದೆ ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಅದರಲ್ಲೂ ಶೇ.70ರಷ್ಟು ರಿಟನ್ಸ್, ಕಡಿಮೆ ತೆರಿಗೆ ದರ ನೀಡುವ ಸರಳೀಕೃತ ಹೊಸ ತೆರಿಗೆ ಪದ್ದತಿ ಮೂಲಕ ಸಲ್ಲಿಕೆಯಾಗಿದೆ ಎಂದು ಹೇಳಿದ್ದಾರೆ.
ರಿಟನ್ಸ್ ಸಲ್ಲಿಕೆ ವಿಳಂಬವಾದಲ್ಲಿ ದಂಡ
ಜು.31ರಂದು ಐಟಿಆರ್ ಸಲ್ಲಿಕೆಯಾಗದೇ ಇದ್ದಲ್ಲಿ, ವಿಳಂಬ ಶುಲ್ಕ 5 ಸಾವಿರ ರೂ. (5 ಲಕ್ಷ ರೂ.ಗಿಂತ ಕಡಿಮೆ ಆದಾಯವಿದ್ದಲ್ಲಿ 1 ಸಾವಿರ ರೂ.) ದಂಡ ವಿಧಿಸಲಾಗುತ್ತದೆ. ಜತೆಗೆ ಹಳೆಯ ತೆರಿಗೆ ಪದ್ದತಿಯಲ್ಲಿನ ಪ್ರಯೋಜನಗಳು ದೊರೆಯುವುದಿಲ್ಲ. ಅಲ್ಲದೇ ಹಳೆಯ ಪದ್ದತಿಯಲ್ಲಿರುವ ತೆರಿಗೆದಾರರನ್ನು ತಕ್ಷಣ ಹೊಸ ಪದ್ಧತಿಗೆ ವರ್ಗಾಯಿಸಲಾಗುತ್ತದೆ. ಜತೆಗೆ ಅವರು ಪಾವತಿ ಮಾಡಬೇಕಾಗಿರುವ ತೆರಿಗೆ ಪ್ರಮಾಣ ಹೆಚ್ಚಾಗಲಿದೆ ಎನ್ನಲಾಗಿದೆ.