Advertisement

ಇಂದು ನವಲಗುಂದ ಗಣೇಶನ ರಥೋತ್ಸವ

10:03 AM Sep 10, 2019 | Suhan S |

ನವಲಗುಂದ: ಇಲ್ಲಿನ ಇತಿಹಾಸ ಪ್ರಸಿದ್ಧ ವಿನಾಯಕ ಪೇಟೆಯ ಗಣಪತಿ ದೇವಸ್ಥಾನದಲ್ಲಿ ಗಣೇಶ ಹಬ್ಬದ ನಿಮಿತ್ತ 8 ದಿನಗಳ ವರೆಗೆ ನಿತ್ಯ ವಾಹನೋತ್ಸವ ನಡೆದು 9ನೇ ದಿನವಾದ ಸೆ. 10ರಂದು ಶ್ರೀ ಗಣಪತಿಯ ಮಹಾರಥೋತ್ಸವ ಜರುಗಲಿದೆ.

Advertisement

ಪೇಶ್ವೆಯವರ ಕಾಲದಿಂದ ಈ ಉತ್ಸವ ನಡೆದು ಬಂದಿದ್ದು, ಮಧ್ಯದಲ್ಲಿ ನಿಂತು ಹೋಗಿತ್ತು. 2014ರಿಂದ ಮತ್ತೆ ಗಣೇಶ ಜಾತ್ರೆ ಆರಂಭವಾಗಿ ವರ್ಷದಿಂದ ವರ್ಷಕ್ಕೆ ಸಾವಿರಾರು ಭಕ್ತರು ಶ್ರೀ ವಿಘ್ನೕಶ್ವರನ ದರ್ಶನ ಪಡೆಯುತ್ತಿದ್ದಾರೆ.

ಇತಿಹಾಸ: 1734ರಲ್ಲಿ ಅವರಾದಿ ವಿಠಲಪ್ಪಗೌಡರ ವಂಶಸ್ಥ ಎರಡನೇ ಜಾಯಗೊಂಡ ದೊರೆ ನವಲಗುಂದದ ಅಧಿಪತಿಯಾಗಿದ್ದರು. ಅವರು ಪೇಶ್ವೇಯವರನ್ನು ನವಲಗುಂದಕ್ಕೆ ಆಹ್ವಾನಿಸಿದರು. ಪೇಶ್ವೇಯವರು ಇಲ್ಲಿಗೆ ಬಂದ ಮರುದಿನವೇ ಗಣೇಶ ಚತುರ್ಥಿ ಹಬ್ಬ. ಪೇಶ್ವೆ ಗಣೇಶನ ಪರಮಭಕ್ತ. ದೂರದ ಪುಣೆ ತಲುಪಿ ಉತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲವಲ್ಲ ಎಂದು ಚಡಪಡಿಸಿದರಂತೆ. ಆಗ ಜಾಯಗೊಂಡರು ಅಂದೇ ಖ್ಯಾತ ಶಿಲ್ಪಿಯನ್ನು ಕರೆಸಿ ಒಂದೇ ದಿನದಲ್ಲಿ ವಿನಾಯಕ ಮೂರ್ತಿ, ಮಂದಿರ ನಿರ್ಮಾಣವಾಗಬೇಕು ಎಂದರಂತೆ.

ಆ ಶಿಲ್ಪಿಯು ತನ್ನ ದೈವವನ್ನು ನೆನೆದು ಮೂರ್ತಿ ಕೆತ್ತಲು ಆರಂಭಿಸಿದರೆ ಬೆಳಗಾಗುವ ಮುನ್ನವೇ ಗಣೇಶನ ಮೂರ್ತಿ ಹಾಗೂ ಮಂದಿರ ನಿರ್ಮಾಣಗೊಂಡಿತ್ತು. ಆತ ಮೂರ್ತಿಯನ್ನು ಪಾದದಿಂದ ಆರಂಭಿಸಿ ದೇಹ, ಮುಖ ರಚಿಸಿ ಪೂರ್ಣಗೊಳಿಸಿದನಂತೆ. ಈ ರೀತಿಯ ರಚನೆಯಿಂದ ಮೂರ್ತಿ ಮಹಿಮೆಗೆ ಸಾಕ್ಷಿಯಾಗುತ್ತದೆ ಎಂದು ಶಿಲ್ಪಿ ಹೇಳಿದನಂತೆ. ಮುಂದೆ ಜಾಯಗೊಂಡರ ವಂಶದ ರಾಜ್ಯಭಾರ ಕೊನೆಗೊಂಡಿತು. ಈ ಗಣೇಶನ ಮೂರ್ತಿ ಅಗೋಚರ ಶಕ್ತಿಗೆ ಸಾಕ್ಷಿಯಾಯಿತು.

ಪಂಚಲೋಹ ಮೂರ್ತಿ ಹಿನ್ನೆಲೆ: ಗಣೇಶೋತ್ಸವಕ್ಕೆ ಮೆರಗು ಕೊಡಲು ದೇವಸ್ಥಾನದಲ್ಲಿರುವ ವಿಗ್ರಹದಂತೆ ಉತ್ಸವ ಮೂರ್ತಿಯನ್ನು ಬಂಗಾರದಿಂದ ತಯಾರಿಸಲು ಜಾಯಗೊಂಡ ದೊರೆ ಯೋಚಿಸಿ ತನ್ನ ವಾಡೆಯಲ್ಲಿಯೇ ಮೂರ್ತಿ ತಯಾರಿಸಲು ಲೋಹ ಶಿಲ್ಪಿಗೆ ಆದೇಶಿಸಿದರಂತೆ. ಆದರೆ ಬಂಗಾರದ ವ್ಯಾಮೋಹ ಹೊಂದಿದ್ದ ಲೋಹ ಶಿಲ್ಪಿಯು ದೊರೆ ಮನೆಯಲ್ಲಿ ಚಿನ್ನದ ಮೂರ್ತಿ ನಿರ್ಮಿಸಿ, ಅಂಥದೇ ಪಂಚಲೋಹದ ಮೂರ್ತಿಯನ್ನು ತನ್ನ ಮನೆಯಲ್ಲಿ ನಿರ್ಮಿಸಿದನಂತೆ.

Advertisement

ಮೂರ್ತಿ ಪ್ರತಿಷ್ಠಾಪನೆ ಮುನ್ನಾದಿನ ಬಂಗಾರದ ಮೂರ್ತಿಯನ್ನು ಕೆರೆಯಲ್ಲಿ ಇಟ್ಟು ಮರುದಿನ ದೇವಸ್ಥಾನಕ್ಕೆ ತರುವಂತೆ ದೊರೆ ಸೂಚಿಸಿದ್ದರಂತೆ. ಶಿಲ್ಪಿ ಯಾರಿಗೂ ತಿಳಿಯದಂತೆ ಪಂಚಲೋಹದ ಮೂರ್ತಿಯನ್ನು ರಾತ್ರಿ ಕೆರೆಯಲ್ಲಿ ಬಚ್ಚಿಟ್ಟು ಮರುದಿನ ನಸುಕಿನ ಜಾವ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮೂರ್ತಿಯನ್ನು ಬದಲಾಯಿಸಿ ದೇವಸ್ಥಾನಕ್ಕೆ ತಂದನಂತೆ. ಯಾವುದೇ ಸಂಶಯ ಪಡದ ದೊರೆ ಮೂರ್ತಿಯನ್ನು ಸ್ವೀಕರಿಸಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದರಂತೆ. ಆದರೆ ದಿನಗಳೆದಂತೆ ಶಿಲ್ಪಿ ತನ್ನ ಕೃತ್ಯದಿಂದ ಪಶ್ಚಾತ್ತಾಪ ಪಟ್ಟು ರಾಜನ ಬಳಿ ನಿಜ ಸಂಗತಿ ತಿಳಿಸಿ ಮೂರ್ತಿ ಒಪ್ಪಿಸಿದನಂತೆ. ಕ್ಷಮಾಗುಣದ ರಾಜ ಶಿಲ್ಪಿಯನ್ನು ಕ್ಷಮಿಸಿದನಂತೆ.

47 ಕೆಜಿ ಭಾರದ ಪಂಚಲೋಹದ ಮೂರ್ತಿಯೇ ಉತ್ಸವ ಮೂರ್ತಿಯಾಗಿ ಎಂಟು ದಿನಗಳವರೆಗೆ ಅಷ್ಟ ಗಣಪತಿ ದರ್ಶನ ನೀಡುವ ಮೂಲಕ ವಾಹನೋತ್ಸವ ನಡೆಯುತ್ತದೆ. ಮೊದಲ ದಿನ ಸಿಂಹ ವಾಹನ, ಎರಡನೇ ದಿನ ಮಯೂರ, ಮೂರನೇ ದಿನ ಮೂಷಿಕ ವಾಹನ, ನಾಲ್ಕನೇ ದಿನ ನಂದಿ, ಐದನೇ ದಿನ ಗಂಡಭೇರುಂಡ, ಆರನೇ ದಿನ ಗರುಡ, ಏಳನೇ ದಿನ ಗಜವಾಹನ, ಎಂಟನೇ ದಿನ ಕಮಲಾಸನಾರೂಢನಾಗಿ ಕಂಗೊಳಿಸುತ್ತಾನೆ. ಕೊನೆಯದಾಗಿ ಒಂಭತ್ತನೇ ದಿನದಂದು ರಥೋತ್ಸವ ನಿಮಿತ್ತ ಊರಿನ ಭಕ್ತರೆಲ್ಲ ಕರಿಗಡಬು ಸಿದ್ಧಪಡಿಸಿ ನೈವೇದ್ಯ ಅರ್ಪಿಸುತ್ತಾರೆ. ಅದನ್ನೇ ಪ್ರಸಾದವಾಗಿ ಅನ್ನಸಂತರ್ಪಣೆಯಲ್ಲಿ ವಿತರಿಸುತ್ತಾರೆ.

 

•ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next