Advertisement
“ವೈದ್ಯೋ ನಾರಾಯಣೋ ಹರಿ:’ ಎಂಬ ಉಕ್ತಿ ಎಷ್ಟೊಂದು ಸತ್ಯ! ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆತರೆ ಈ ವೈದ್ಯರು ಸಾವಿನ ಅಂಚಿನಲ್ಲಿರುವವರನ್ನೂ ಬದುಕಿಸುತ್ತಾರಲ್ಲಾ… ಅದು ನಿಜಕ್ಕೂ ಅದ್ಭುತವೇ ಸರಿ. ಎಲ್ಲವನ್ನೂ ಸಲಹುವವನು ಮೇಲಿರುವ ಭಗವಂತ.
Related Articles
Advertisement
ಎಲ್ಲವೂ ಕ್ಷಣಾರ್ಧದಲ್ಲಿ ನಡೆದಿತ್ತು. ಮಗನ ಚೀರಾಟ ಎಲ್ಲೋ ಆಳವಾದ ಬಾವಿಯಿಂದ ಕೇಳಿಸಿದಂತೆ ಕಿವಿಗಪ್ಪಳಿಸುತ್ತಿದ್ದರೆ ನನಗೆ ಕಣ್ಣುಬಿಟ್ಟು ನೋಡುವುದೇ ಸಾಧ್ಯವಾಗುತ್ತಿರಲಿಲ್ಲ. ನನಗೇನಾಗಿದೆಯೆಂಬ ಪರಿವೇ ನನಗಿಲ್ಲ. ಆ ಕ್ಷಣ ಎಂಜಲೊಣಗಿ, ಮಿದುಳು ಸ್ತಬ್ಧವಾಗಿ, ಕಣ್ಣು ಮುಚ್ಚಿದ್ದೆ. ಗಂಡ ಬಂದು ತಟ್ಟಿ ಎಚ್ಚರಿಸಿದರೂ ಇಹದ ಪರಿವೆಯಿಲ್ಲದಂತೆ ಕದಲದ ಸ್ಥಿತಿಯಲ್ಲಿ ಬಿದ್ದಿದ್ದೆ. ಯಾರೋ ಬಂದು ನನ್ನ ಎತ್ತಿ ರಿಕ್ಷಾದಲ್ಲಿ ಮಲಗಿಸಿದಾಗ ಸಾವಿರಾರು ಈಟಿಗಳಿಂದ ಒಮ್ಮೆಲೇ ದೇಹಕ್ಕೆ ಚುಚ್ಚಿ, ದೇಹ ತುಂಡುತುಂಡಾಗಿ ಕತ್ತರಿಸಿದರೆ ಆಗುವಷ್ಟು ನೋವಾಗತೊಡಗಿತು. ಅಯ್ಯೋ ಕಾಪಾಡಿ ಕಾಪಾಡಿ ಎಂದು ಬಡಬಡಿಸುತ್ತಿದ್ದೆ.
ಪ್ರಾಥಮಿಕ ಚಿಕಿತ್ಸೆಗಾಗಿ ಸನಿಹದ ಆರ್.ಎನ್.ಎಸ್. ಆಸ್ಪತ್ರೆಗೆ ಕರೆದೊಯ್ದಾಗ ನನ್ನ ತಲೆಗೆ ಸ್ಟಿಚ್ ಹಾಕಿದ ಡಾಕ್ಟರ್ ನನ್ನ ಮಾತನಾಡಿಸಲು ಪ್ರಯತ್ನಿಸುತ್ತಿದ್ದರು. ಕಣ್ಣುಮುಚ್ಚಬೇಡಿ ಇಲ್ನೋಡಿ ಎಂದು ತಟ್ಟುತ್ತಿದ್ದರು. ಮನೆಯವರೊಂದಿಗೆ ತ್ವರಿತವಾಗಿ ಉಡುಪಿಯ ಆದರ್ಶ ಅಥವಾ ಮಂಗಳೂರಿನ ಎಜೆಗೆ ಕರೆದುಕೊಂಡು ಹೋಗಬೇಕು. ವೆರಿ ಕ್ರಿಟಿಕಲ್ ಕಂಡಿಷನ್ ಎಂದಾಗ ಅವರ ಮಾತು ನನ್ನ ಕಿವಿಗಪ್ಪಳಿಸಿದಾಗ ಅಯ್ಯೋ ಹಾಗಾದರೆ ನಾನು ಬದುಕೋದಿಲ್ವಾ ಎನಿಸಿಬಿಟ್ಟಿತ್ತು.
ಅಂಬ್ಯುಲೆನ್ಸ್ ಮೂಲಕ ನನ್ನ ಮತ್ತು ಮಗನನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ನನ್ನನ್ನು ನಿಮ್ಮ ಸುಪರ್ದಿಗೆ ವಹಿಸಲಾಗಿತ್ತು(ಡಾ. ಎಂ.ಡಿ. ಶೆಟ್ಟಿ).ಕ್ಷಣಕ್ಷಣಕ್ಕೂ ನಾನು ಸಾವಿನ ಮೆಟ್ಟಿಲು ಏರುತ್ತಿದ್ದಂತೆ, ನರಕದ ಬಾಗಿಲು ತಟ್ಟುತ್ತಿರುವಂತೆ ಭಾಸವಾಗುತ್ತಿತ್ತು. ಯಮ ಕೈಬೀಸಿ ಕರೆದಂತೆ ಭಾಸವಾಗುತ್ತಿತ್ತು. ಶೇಕಡಾ 99 ರಷ್ಟು ಮೇಲೆಹೋಗಿದ್ದ ನನ್ನ ಪ್ರಾಣವನ್ನು ವೈದ್ಯರಾದ ನೀವು ಮತ್ತೆ ನನ್ನ ಭರವಸೆ ಮತ್ತು ಆತ್ಮವಿಶ್ವಾಸದ ಕಾರಣ ತಡೆ ಹಿಡಿದಿದ್ದೆ. ನನ್ನ ಬದುಕಿಸಲು ನಿಮ್ಮ ಹೋರಾಟ ಬಲುದೊಡ್ಡದು. ಸರಿಯಾಗಿ ಪ್ರಜ್ಞೆ ಬಂದು ಒಂದು ವಾರದ ನಂತರ ನನ್ನನ್ನು ನನ್ನ ಮಗನಿರುವ ವಾರ್ಡಿಗೆ ಶಿಫ್ಟ್ ಮಾಡಿದಾಗ ನನ್ನರಿವಿಗೆ ಬಂದದ್ದು ನಾನು ಐಸಿಯುವಿನಲ್ಲಿದ್ದೇನೆಂದು. ಪ್ರತಿದಿನವೂ ನೀವು ನನ್ನ ರೂಂಗೆ ಬರುವಾಗ ಗುಡ್ ಮಾರ್ನಿಂಗ್ ಹೇಳುತ್ತಾ ಬರುತ್ತಿದ್ರಿ. ಹಾಗೆ ಹೇಳುವ ನಿಮ್ಮ ರೀತಿಯಲ್ಲೇ ಒಂದು ಬಗೆಯ ಧನಾತ್ಮಕವಾದ ಒಂದು ನಿಶ್ಚಿತವಾದ ಕಂಪನವಿರುತ್ತಿತ್ತು. ಒಮ್ಮೆ ನೋವು ತಡೆಯದೇ “ನಾನು ಸಾಯ್ತಿàನಿ’ ಎಂದು ಬೊಬ್ಬೆ ಹಾಕಿದಾಗ ನನಗೆ ನೀವೇ ಧೈರ್ಯ ತುಂಬಿದ್ರೀ ಸರ್.! “”ನಿನ್ನ ಮೊದಲ ದಿನದ ಪೋಟೋ ಇದ್ರೆ ತಂದು ಗೋಡೆಮೇಲೆ ಅಂಟಿಸಬೇಕು, ಆಗ ನಿನಗೆ ನೀನಿದ್ದ ಪರಿಸ್ಥಿತಿ ಅರ್ಥವಾಗುತ್ತೆ. ಬಾಯಿ ಕಳೆದುಕೊಂಡು ಉಸಿರಾಡಲಾಗದೇ ಸತ್ತವಳಂತೆ ಬಿದ್ದಿದ್ದೆ. ಈಗ ಏನೂ ಆಗಿಲ್ಲ. ನಾವೆಲ್ಲ ನಿನ್ನನ್ನುಳಿಸಲು ಹಗಲುರಾತ್ರಿ ಹೋರಾಡುತ್ತಿದ್ದೇವೆ. ನೀನು ಧೈರ್ಯಗೆಟ್ಟರೆ, ಅತ್ತರೆ ಗಾಯ ಉಲ್ಬಣಗೊಳ್ಳುತ್ತದೆ. ಖುಷಿಯಾಗಿರು. ಧನಾತ್ಮಕವಾಗಿ ಯೋಚಿಸು” ಎಂದು ಧೈರ್ಯ ನೀಡಿದ್ದೀರಿ. ನಿಮ್ಮ ಅಸಿಸ್ಟೆಂಟ್ ನರ್ಸ್ ರಜೆಯ ಮೇಲೆ ಊರಿಗೆ ಹೋದಾಗ, ಆಸ್ಪತ್ರೆಯಲ್ಲಿ ಹಲವು ನರ್ಸ್‌ಗಳಿದ್ದರೂ ಸಹ ಅವರ್ಯಾರಿಗೂ ನನ್ನ ಗಾಯ ಕ್ಲೀನ್ ಮಾಡಲು ಹೇಳುತ್ತಿರಲಿಲ್ಲ. ಹದಿನೈದು ದಿನಗಳ ಕಾಲ ನೀವೇ ಮುತುವರ್ಜಿಯಿಂದ ನನ್ನ ಗಾಯಗಳಿಗೆ ಡ್ರೆಸ್ಸಿಂಗ್ ಮಾಡುತ್ತಿದ್ರಿ. ಅಂತಹ ಅದ್ಭುತ ಕಾಳಜಿ ನಿಮ್ಮದಾಗಿತ್ತು. ಒಂದು ತಿಂಗಳ ನಂತರ ಹೆಣದಂತೆ ಬಿದ್ದಿದ್ದ ಈ ದೇಹವನ್ನ ಮೊದಲ ಬಾರಿ ನಡೆಯಲು ಪ್ರಯತ್ನಿಸಿ ದಾಗಲೆಂತೂ ಉಂಗುಷ್ಟದಿಂದ ನೆತ್ತಿಯವರೆಗೆ ನೋವು ಸಂಚಾರವಾಗಿ ಅಮ್ಮಾ ಎಂದು ಕೂಗಿ ಇಡೀ ವಾರ್ಡ್‌ನ ಜನರನ್ನ ಒಟ್ಟು ಮಾಡಿದ್ದೆ. ಮೂರು ದಿನ ಒಂದೇ ಒಂದು ಹೆಜ್ಜೆ ಎತ್ತಿಡಲೂ ಸಾಧ್ಯವಾಗಿರಲಿಲ್ಲ. ಆಗಲೂ ನೀವು, ಮಲಗಿದ್ದಲ್ಲೇ ಮಲಗಿದ್ದರೆ ಆ ಭೀಕರ ಗಾಯಗಳು ತುಂಬಿಬರುವುದಿಲ್ಲ. ಚಲನೆಯಿಲ್ಲದ ಸ್ಥಿತಿ ಯಲ್ಲಿ ದೇಹದ ಸೂಕ್ಷ್ಮಜೀವಕೋಶಗಳು, ಅಂಗಾಂಗಗಳು ಸಾಯುತ್ತವೆ. ದೇಹ ಚಲನೆಯಲ್ಲಿದ್ದಾಗ ಮಾತ್ರ ರಕ್ತದ ಹರಿವು ಎಲ್ಲಾ ಕಡೆ ಸಾಧ್ಯವಾಗಿ ನಿಮ್ಮ ಗಾಯ ಬೇಗನೆ ಆರೋಗ್ಯಕರ ಸ್ಥಿತಿಯಲ್ಲಿ ತುಂಬುತ್ತಾ ಬರಲು ಸಾಧ್ಯ ಎಂದು ವಾಸ್ತವಿಕತೆಯ ಅರಿವು ಮೂಡಿಸಿದ್ರಿ. ಈಗಲೂ ನನಗೆ ಎಲ್ಲರಂತೆ ನೆಲದಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಕಾಲು ಮಡಚಿ ಚಕ್ಕರಪಟ್ಟೆ ಹಾಕಲು ಸಾಧ್ಯವಿಲ್ಲ. ಆದರೂ ಬದುಕುವುದೇ ಸಂಶಯವೆಂಬ ಸ್ಥಿತಿಯಿಂದ ಮಾಮೂಲಿ ಓಡಾಡಲಾಗದೆಂಬ ಸ್ಥಿತಿಯಿಂದ ನಾನು ಪಾರಾದೆ. ನನ್ನನ್ನು ಇಷ್ಟು ಸರಿಯಾಗಿ ಓಡಾಡುವಂತೆ ಮಾಡಿದ, ಪುನರ್ಜನ್ಮ ನೀಡಿದ ನಿಮಗಿದೋ
(ಪರೋಕ್ಷವಾಗಿ ಕಾರಣರಾದ ಇತರ ವೈದ್ಯರುಗಳಿಗೂ) ಹೃತೂರ್ವಕ ನಮನಗಳು. ಕೋಟಿ ಕೋಟಿ ಕೃತಜ್ಞತೆಗಳು. -ಗೀತಾ ಎಸ್ ಭಟ್, ಭಟ್ಕಳ