Advertisement
ಬಂಕಾಪುರ ವಿಜಯನಗರ ಅರಸರ ಅಧೀನ ಪ್ರಾಂತ. ಕದಂಬರ ಬನವಾಸಿಗೆ ಸೇರಿದ ಕಾಗಿನೆಲೆಗಾಗಿ ಸದಾ ಯುದ್ಧ, ಸೆಣಸಾಟ. ಮೊದಲನೇ ಹರಿಹರನ ತಮ್ಮ ಮಾರಪ್ಪ ಬನವಾಸಿ ಗೋವೆಯಿಂದ ಇದನ್ನು ವಶಮಾಡಿಕೊಂಡಿದ್ದ.
Related Articles
Advertisement
ತಾಳಲಾರದ ವೇದನೆ. ಬದುಕಬೇಕೆಂಬ ಬಯಕೆ ತೀವ್ರವಾಗಿ ಕನಕ ಕೋರಿಕೊಂಡ “ದಾಸನಾಗುವೆ ನೋವು ತಪ್ಪಿಸು’.
ಈ ಸಂಕಲ್ಪ ಬಂದ ಕೂಡಲೇ ಕನಕನಲ್ಲಿ ಹೊಸ ಆವೇಶ. ಯುದ್ಧ ಭೂಮಿಯಲ್ಲೇ ಹೀಗೆ ವೈರಾಗ್ಯ ಹಿಡಿದು ಬಂದ ಕನಕ. ವೈರಾಗ್ಯವನ್ನೇ ಜೀವಪರ ಕಾಳಜಿಯಾಗಿಸಿದ. ಕಾವ್ಯವಾಗಿಸಿದ. ಭಕ್ತಿರಸದಲ್ಲಿ ಮಿಂದೆದ್ದ.
ಕುರುಬರ ಕುಲಗುರು, ಶ್ರೀ ವೈಷ್ಣವ ಪರಂಪರೆಯ ತಿರುಮಲೆ ತಾತಾಚಾರ್ಯರನ್ನೇ ಹುಡುಕಿ ಹೊರಟ ಕನಕ. ಅವನ ಮನೆತನವು ಶ್ರೀವೈಷ್ಣವ ಪರಂಪರೆಗೆ ಸೇರಿದ್ದು.
ವಿಜಯನಗರದ ರಾಜಗುರು, ಮೊದಲ ಗುರು ತಿರುಮಲೆ ತಾತಾಚಾರ್ಯರು. ಈ ಕೃಷ್ಣದೇವರಾಯನ ಆಸ್ಥಾನ ವಿದ್ವಾಂಸರು ಹೌದು. ಅಲ್ಲೇ ಕನಕ ಶ್ರೀ ವೈಷ್ಣವ ದೀಕ್ಷೆಯನ್ನೇ ಪಡೆದ. ವಿಜಯನಗರದ ಅದೃಷ್ಟ ಇದು. ಈ ಸಾಮ್ರಾಜ್ಯವನ್ನು ಉಚ್ಛ್ರಾಯ ಸ್ಥಿತಿಗೆ ಒಯ್ದವರು ತಿರುಮಲೆ ತಾತಾಚಾರ್ಯರು ಮತ್ತು ವ್ಯಾಸತೀರ್ಥರು. ಕ್ರಮವಾಗಿ ಶ್ರೀವೈಷ್ಣವ ಮತ್ತು ಮಾಧ್ವ ಸಂಪ್ರದಾಯದವರು. ಕೃಷ್ಣದೇವರಾಯನ ಕೀರ್ತಿ ಬೆಳಗಿದವರು. ಹಂಪಿಯಲ್ಲಿದ್ದ ವ್ಯಾಸತೀರ್ಥರು ದಾಸಪರಂಪರೆಗೆ ಮೂಲಪುರುಷರು. ಕೃಷ್ಣದೇವರಾಯ ವ್ಯಾಸರಾಯರಿಗೆ ವ್ಯಾಸಸಮುದ್ರದಲ್ಲಿ ಒಂದು ಜಾಗವನ್ನು ಉಂಬಳಿಯಾಗಿ ಕೊಟ್ಟಿದ್ದ. ಸಮುದ್ರವೆಂದರೆ ಅದು ಸಮುದ್ರವಲ್ಲ. ಒಂದು ದೊಡ್ಡ ಕೆರೆ. ಅದನ್ನು ಕಟ್ಟಿಸುತ್ತಿದ್ದ ವ್ಯಾಸರಾಯರಿಗೆ ಬಂಡೆಯೊಂದು ಅಡ್ಡ ಬಂದಿತ್ತು. ಇದೇ ಸಮಯಕ್ಕೆ ಕನಕ ಅಲ್ಲಿಗೆ ಬಂದ. ಅವನಿಗೆ ಅಧ್ಯಾತ್ಮದ ಹಸಿವು. ಭಕ್ತಿಪಾರಮ್ಯ ಮಾರ್ಗ ಹುಡುಕುತ್ತಿದ್ದ.
ವ್ಯಾಸತೀರ್ಥರು ಕೆರೆಗೆ ಅಡ್ಡವಾಗಿದ್ದ ಬಂಡೆಯ ಬಗ್ಗೆ ತುಂಬಾ ಕಷ್ಟಪಡುತ್ತಿದ್ದ ಸಮಯದಲ್ಲೇ ನನಗೆ ಮಂತ್ರೋಪದೇಶ ಬೇಕು ಎಂದ. ಕನಕನ ನಿವೇದನೆ ಕೇಳಿ “ನೀನು ಕುರುಬ, ನಿನಗೇನು ಮಂತ್ರ.ನಿನಗೆ ಕೋಣ ಮಂತ್ರ’ ಎಂದರು ವ್ಯಾಸರಾಯರು. ಇದನ್ನೇ ಮಂತ್ರವೆಂದು ಭಾವಿಸಿ ಯಮನನ್ನೇ ಸಾಕ್ಷಾತ್ಕರಿಸಿಕೊಂಡ ಕನಕ ಕೋಣ ಜತೆ ವ್ಯಾಸತೀರ್ಥರ ಬಳಿ ಮತ್ತೆ ಬಂದ.
ಕನಕನ ಅದ್ಭುತ ಭಕ್ತಿ ಶಕ್ತಿಯನ್ನು ತಿಳಿದ ವ್ಯಾಸರಾಯರು ಕೆರೆಗೆ ಅಡ್ಡವಾಗಿದ್ದ ಬಂಡೆಯನ್ನು ದೂರ ಮಾಡಲು ಹೇಳಿದ್ರು. ಅದು ದೂರ ಆಯ್ತು. ಈಗಲೂ ಕೋಣನತೂಂಬು ಎಂಬ ಹೆಸರು ಅಲ್ಲಿ ಇದೆ. ಈ ಘಟನೆ ಕನಕನನ್ನು ವ್ಯಾಸತೀರ್ಥರ ಪರಮ ಶಿಷ್ಯನಾಗಲು ಅವಕಾಶ ನೀಡಿತು. ಅವರ ಹೃದಯಕ್ಕೆ ಎಷ್ಟು ಹತ್ತಿರನಾದನೆಂದರೆ ವ್ಯಾಸತೀರ್ಥರು ಪೂಜೆಯ ಬಳಿಕ ಮೊದಲಿಗೆ ಕನಕನಿಗೆ ಕರೆದು ತೀರ್ಥ ಕೊಡುತ್ತಿದ್ದರಂತೆ. ದೇವರ ಅಸ್ತಿತ್ವವನ್ನು ಎಲ್ಲೇಡೆ ಕಂಡ ಕನಕ ವ್ಯಾಸತೀರ್ಥರ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಈ ಕಥೆಯನ್ನು ತಮ್ಮ ಕೀರ್ತನೆಯಲ್ಲಿ ಸ್ವತಃ ಪುರಂದರದಾಸರೆ ತಮ್ಮ ಗೆಳೆಯನ ಬಗ್ಗೆ ಹೇಳಿದ್ದಾರೆ. ಹೀಗೆ ವ್ಯಾಸಕೂಟ, ದಾಸಕೂಟ ಎರಡರಲ್ಲೂ ಯಶಸ್ಸು ಕಂಡವ ಕನಕ.
ವ್ಯಾಸರಾಯರ ಪರಮಶಿಷ್ಯರು ಸೋದೆ ವಾದಿರಾಜರು. ಕನಕ ವಾದಿರಾಜರಿಗೂ ಅಷ್ಟೇ ಪ್ರಿಯನಾದ ಶಿಷ್ಯನಾದ. ವಾದಿರಾಜರು ಮತ್ತು ಕನಕನ ಸಂಬಂಧ ಎಷ್ಟು ಗಾಢ ಮತ್ತು ಆಳವಾಗಿತ್ತು ಎಂದ್ರೆ ಇವತ್ತಿಗೂ ಉಡುಪಿಯ ಕನಕನಕಿಂಡಿಯ ದರ್ಶನ ಮಾಡದೆ ಯಾವ ಯತಿಗಳ ಭಕ್ತರ ಪೂಜೆಯು ಫಲ ಕೊಡೋದಿಲ್ಲ ಎಂಬ ವಾದಿರಾಜರ ಅಲಿಖೀತ ಸಂವಿಧಾನವೇ ಹೇಳುತ್ತದೆ.
ಮಧ್ವರಿಗೊಲಿದು ಉಡುಪಿಗೆ ಬಂದ ಕೃಷ್ಣ. ಅಷ್ಟಮಠದ ಯತಿಗಳ ಪೂಜಾಕೈಂಕರ್ಯವನ್ನೂ ಪಡೆದ. ಕನಕನಿಗೊಲಿದ ಕೃಷ್ಣ ಸಕಲ ಭಕ್ತರೆಡೆಗೂ ಸಮಾನವಾಗಿ ತಿರುಗಿ ನಿಂತ. ಆದ್ದರಿಂದ ಉಡುಪಿಯಲ್ಲಿ ಮಾತ್ರ ಹಗಲು -ರಾತ್ರಿ ಎಲ್ಲರಿಗೂ ಎಲ್ಲ ಕಾಲಕ್ಕೂ ಕೃಷ್ಣದರ್ಶನ ಸಾಧ್ಯ. ಕನಕನ ಮೂಲಕ ಸಾಧ್ಯವಾಗಿರೋದೇ ಕನಕಕಿಂಡಿ. ಕಿಂಡಿಯಲ್ಲಿ ಕನಕ (ಬಂಗಾರ)ಇಲ್ಲದಿದ್ದರೂ ಕನಕಮಯ ಶ್ರೀಕೃಷ್ಣನ ದರ್ಶನಸುಖ ಎಲ್ಲರಿಗೂ ಇದ್ದೆ ಇದೆ.
ವಾದಿರಾಜರ ಸ್ನೇಹ ಮತ್ತು ಪ್ರೀತಿಗಾಗಿ ಕನಕ ಉಡುಪಿಗೆ ಮತ್ತೆ ಮತ್ತೆ ಬಂದ. ಅವರಿಬ್ಬರ ಸ್ನೇಹ, ಪ್ರೀತಿ ಬಗ್ಗೆ ಹತ್ತು ಹಲವು ಕಥೆಗಳೂ ಹರಡಿಕೊಂಡಿವೆ. ತಮ್ಮ ಕೀರ್ತನೆ, ಸಾಹಿತ್ಯಗಳಲ್ಲಿ ಸರಳವಾಗಿ ಬದುಕಿನ ತಣ್ತೀಚಿಂತನೆ ಕಟ್ಟಿಕೊಟ್ಟ ಕನಕನ ದರ್ಶನವನ್ನು ಕನಕನಕಿಂಡಿಯಲ್ಲಿ ಮಾಡಬೇಕು. ಜೀವನದರ್ಶನ ಪಡೆಯಬೇಕು. ಕನಕನ ನೆನಪು ಅಂತರಂಗ ಬೆಳಗುವ ಭಕ್ತಿ ಜ್ಞಾನದ ಹೊಳಪು.
ಜಿ.ಪಿ. ಪ್ರಭಾಕರ ತುಮರಿ