Advertisement

ಇಂದು ಅಂತಾರಾಷ್ಟ್ರೀಯ ಶ್ವಾನ ದಿನ: ಅಂಗಳದಲ್ಲಿ ನಿಲ್ಲುವ ನಾಯಿಗೆ ಹೃದಯದಲ್ಲಿ ನೆಲೆ!

07:31 AM Aug 26, 2021 | Team Udayavani |

ಕಾರ್ಕಳ: ಇವರದು ಅಂತಿಂಥ ಪ್ರೀತಿಯಲ್ಲ. ಮನೆಯ ಅಂಗಳದಲ್ಲಿ, ಎಲ್ಲೋ ಬೀದಿ ಬದಿ ಯಲ್ಲಿ ಅಲೆದಾಡುವ ಶ್ವಾನಗಳಿಗೆ ಹೃದಯದಲ್ಲಿ ಜಾಗ ಕೊಟ್ಟು ಬಜಗೋಳಿಯ ಯುವಕ ವೀರಂಜನ್‌ ಜೈನ್‌ ನಿತ್ಯ ಶ್ವಾನ ಗಳಿಗೆ ಪ್ರೀತಿಯ ತೋರಿಸಿಸಿ ಗಮನ ಸೆಳೆದಿದ್ದಾರೆ.

Advertisement

ಬೀದಿ ನಾಯಿಗಳ ಬಗ್ಗೆ ಕಾಳಜಿ ತೋರುವವರೇ ಕಡಿಮೆ. ಆದರೆ  ಶ್ವಾನಗಳ ಮೇಲೆ ಅತಿಯಾದ ಪ್ರೀತಿ ಹೊಂದಿರುವ ವೀರಂಜನ್‌ ರಸ್ತೆ ಬದಿ ಗಾಯಗೊಂಡ, ಅಸ್ವಸ್ಥ ಅಥವಾ ರೋಗಗಳಿಂದ ಬಳಲುತ್ತಿರುವ ನಾಯಿಗಳನ್ನು ಮನೆಗೆ ಕರೆತಂದು ಚಿಕಿತ್ಸೆ ನೀಡಿ ಪೋಷಿಸುತ್ತಿದ್ದಾರೆ. 160ಕ್ಕೂ ಅಧಿಕ  ಶ್ವಾನಗಳು ಅವರ   ಕೇಂದ್ರದಲ್ಲಿ  ಆಶ್ರಯ ಪಡೆದಿವೆ.

ಅಹಿಂಸಾ ಎನಿಮಲ್‌ ಕೇರ್‌ ಟ್ರಸ್ಟ್‌ :

ಶ್ವಾನಗಳಿಗಾಗಿ ಪ್ರತ್ಯೇಕ ಅಹಿಂಸಾ ಎನಿಮಲ್‌ ಕೇರ್‌ ಟ್ರಸ್ಟ್‌ ರಚಿಸಿರುವ ಜೈನ್‌ ಶ್ವಾನ ನಿವಾಸ ತೆರೆದಿದ್ದಾರೆ. ಇದನ್ನು ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದ್ದು ಚಿಕಿತ್ಸಾ ಕೊಠಡಿ, ವಿಶ್ರಾಂತಿ ಕೊಠಡಿ, ದಾಸ್ತಾನು ಕೊಠಡಿ, ನೆಲಕ್ಕೆ ಇಂಟರ್‌ಲಾಕ್‌  ಅಳವಡಿಸಲಾಗಿದೆ.

ಪಿಯು ತನಕ ಓದಿರುವ ಜೈನ್‌ ಈಗ ಪೂರ್ಣ ಸಮಯವನ್ನು ಶ್ವಾನ ಆರೈಕೆಯಲ್ಲೆ ಕಳೆಯುತ್ತಿದ್ದಾರೆ.  ಮೂವರು ಕೆಲಸಗಾರರಿದ್ದು ನಿತ್ಯ ಸ್ವತ್ಛತೆ, ಆಹಾರ ನೀಡುವುದು ಇವರ ಕೆಲಸ. ಶ್ವಾನಗಳಿಗೆ ದಿನಕ್ಕೆ  12 ಲೀ. ಮೊಸರು, 16 ಕೆ.ಜಿ. ಅನ್ನದ ಆಹಾರ ಆವಶ್ಯವಿದೆ. ಬ್ರೆಡ್‌, ಬಿಸ್ಕತ್‌, ಡ್ರೂಲ್ಸ್‌ ಎಂದೆಲ್ಲ  ತಿಂಗಳಿಗೆ ಸುಮಾರು 60 ಸಾ. ರೂ. ಖರ್ಚು ತಗಲುತ್ತಿದ್ದು, ಟ್ರಸ್ಟ್‌ ಮೂಲಕ ಇದನ್ನು ಭರಿಸುತ್ತಿದ್ದಾರೆ.

Advertisement

ಚಿಕಿತ್ಸೆಗಾಗಿ ಆಸ್ಪತ್ರೆ:

ಶ್ವಾನಗಳಿಗೆ ಈ ಹಿಂದೆ   ನಿಟ್ಟೆ, ನಾರಾವಿಯ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಸಲಾಗುತ್ತಿತ್ತು. ಆದರೆ ಅಲ್ಲಿರುವ ಹೆಚ್ಚಿನ ಶ್ವಾನಗಳು ಅಪಘಾತ, ಅಂಗವಿಕಲತೆ, ವಿವಿಧ ದೌರ್ಬಲ್ಯಗಳಿಂದ ಬಳಲುತ್ತಿರುವ ಕಾರಣ ಮನೆಯಲ್ಲಿಯೇ  ಈಗ ಆಸ್ಪತ್ರೆ ತೆರೆಯಲಾಗಿದೆ.  ಪ್ರಾಣಿ ವೈದ್ಯ ತಜ್ಞರಾದ ವಾಸುದೇವ ಪೈ, ಯಶಸ್ವಿ, ಮಂಗಳೂರಿನ ವೈದ್ಯರು ನೆರವು ನೀಡುತ್ತಿದ್ದಾರೆ.

ಉಡುಪಿಯಲ್ಲೂ ಇದೆ :

ಇದೇ ರೀತಿ ಉಡುಪಿಯಲ್ಲಿ ಮಧ್ವರಾಜ್‌ ಎನಿಮಲ್‌ ಟ್ರಸ್ಟ್‌  ಕಾರ್ಯನಿರ್ವಹಿಸುತ್ತಿದ್ದು ಬೀದಿ ಶ್ವಾನಗಳ ರಕ್ಷಣೆ, ಚಿಕಿತ್ಸೆಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ  ಶ್ವಾನಗಳ ರಕ್ಷಣೆ, ಚಿಕಿತ್ಸೆಗಾಗಿ ಮೊಬೈಲ್‌ ಆ್ಯಂಬುಲೆನ್ಸ್‌ ಹೊಂದುವ ಚಿಂತನೆಗಳಿವೆ ಎಂದು ಟ್ರಸ್ಟ್‌ನ ಬಬಿತಾ ಮಧ್ವರಾಜ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next