Advertisement

ಇಂದು ವಿಶ್ವ ಕೈ ತೊಳೆಯುವ ದಿನ: ಕ್ರಮಬದ್ದವಾಗಿ ಕೈ ತೊಳೆಯುವ ಪರಿಪಾಠ ಬೆಳೆಸೋಣ

12:24 AM Oct 15, 2022 | Team Udayavani |

ಕಳೆದೆರಡು ವರ್ಷಗಳಲ್ಲಿ ಜಗತ್ತನ್ನು ಕಾಡಿದ ಕೊರೊನಾ ವೈರಸ್‌ನಿಂದ ದುರಂತದ ಸರಮಾಲೆಯೇ ಆಗಿಹೋಗಿದೆ. ಈ ವೈರಸ್‌ನ ವಿರುದ್ಧ ಸರಕಾರ, ವೈದ್ಯರು, ಸಂಘಸಂಸ್ಥೆಗಳು ಸಮರೋಪಾದಿಯಲ್ಲಿ ಕಾರ್ಯ ಮಾಡಿದ್ದು ಶ್ಲಾಘನೀಯ. ಕೊರೊನಾ ವೈರಸ್‌ಗೆ ಪ್ರತಿರೋಧಕ ಲಸಿಕೆಯನ್ನು ಕಂಡುಹಿಡಿಯುವ ಮೂಲಕ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅವರ ಪ್ರಾಣವನ್ನು ರಕ್ಷಿಸಲಾಯಿತು. ಆದರೆ ಕೊರೊನಾದಂಥ ಸಾಂಕ್ರಾಮಿಕಗಳ ಹರಡುವಿಕೆಗೆ ಮೂಲ ಕಾರಣಗಳಾದ ವೈರಸ್‌, ಬ್ಯಾಕ್ಟೀರಿಯಾಗಳ ತಡೆಗೆ ಶುಚಿತ್ವ ಕಾಪಾಡುವುದು ಬಲುಮುಖ್ಯ. ಕೊರೊನಾ ಸಾಂಕ್ರಾಮಿಕದ ವೇಳೆ ಶುಚಿತ್ವದ ಬಗೆಗೆ ಅದರಲ್ಲೂ ಮುಖ್ಯವಾಗಿ ಕೈ ಶುಚಿತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

Advertisement

ಕೈ ಸುರಕ್ಷೆ ಹಾಗೂ ಕೈ ತೊಳೆಯುವುದರಿಂದ ಆಗುವ ವೈದ್ಯಕೀಯ ಅನುಕೂಲಗಳ ಕುರಿತಂತೆ 1847ರ ಹೊತ್ತಿಗೆ ಮೊದಲು ಜಗತ್ತಿಗೆ ತಿಳಿಸಿದವರು ಹಂಗೇರಿಯ ವೈದ್ಯನಾಗಿದ್ದ ಇಗ್ನಾಝ್ ಸೆಮ್ಮೆಲ್‌. ಇವರು ವಿಯೆನ್ನಾದ ಜನರಲ್‌ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡಿದವರು. ಆ ಕಾಲದಲ್ಲಿಯೇ ಅವರು ವೈಜ್ಞಾನಿಕವಾಗಿ ಕೈ ತೊಳೆದುಕೊಳ್ಳುವ ಬಗ್ಗೆ ಜನರಿಗೆ ಮನವರಿಕೆ ಮಾಡಿ ಜಾಗೃತಿ ಉಂಟುಮಾಡಿದ್ದರು.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕೈ ಕಾಲು ತೊಳೆಯುವ ಪರಿಪಾಠ ಸಾಮಾನ್ಯವಾಗಿತ್ತು ಎಂದು ಹೇಳಬಹುದು. ಶುಚಿತ್ವದ ಕಲ್ಪನೆ ಬಹಳ ಕಾಲದಿಂದಲೂ ನಮ್ಮಲ್ಲಿ ರೂಢಿಯಲ್ಲಿತ್ತು. ಮನೆಯನ್ನು ಪ್ರವೇಶಿಸುವಾಗ ಸಾಮಾನ್ಯವಾಗಿ ಕೈ ಕಾಲು ತೊಳೆದುಕೊಂಡು ಹೋಗುವುದು ನಮ್ಮಲ್ಲಿ ಸಾಮಾನ್ಯ ಪದ್ಧತಿ. ಮಕ್ಕಳು ಮನೆಯಲ್ಲಿ ಆಹಾರ ಸೇವಿಸಲು ತೊಡಗಿದರೆ ಕೈ ತೊಳೆದು ತಿನ್ನಿ ಅನ್ನುವುದು ಮಾಮೂಲು. ಅತಿಥಿಗಳು ಬಂದಾಗ ಕೈ ಕಾಲು ತೊಳೆಯಲು ನೀರು ಕೊಡುವುದು ಈಗಲೂ ನಡೆಯುತ್ತಿರುವ ಪದ್ಧತಿ. ಇನ್ನು ಧಾರ್ಮಿಕ ಕಾರ್ಯಗಳಲ್ಲಿ ಸ್ನಾನ ಮಾಡಿ ಶುಚಿಯಾಗಿ ಇರುವುದು ನಮ್ಮ ಪರಂಪರೆಯೇ ಆಗಿದೆ. ಇದು ಶುಚಿತ್ವದ ಮೊದಲ ಪಾಠವೆಂದೇ ಹೇಳಬಹುದು. ಧಾರ್ಮಿಕ ಕಾರ್ಯಕ್ರಮದ ಆರಂಭದಲ್ಲಿಯೇ ಪುರೋಹಿತರು ಕೈ ತೊಳೆದುಕೊಳ್ಳಿ ಎಂದು ಸಂಕಲ್ಪ ಹಾಗೂ ಅಕ್ಷತೆ ಹಾಕುವ ಸಂದರ್ಭದಲ್ಲಿ ಹೇಳುವುದು ಎಲ್ಲರಿಗೂ ಗೊತ್ತಿರುವ ವಿಚಾರ ಹಾಗೂ ಇದು ಭಾರತೀಯ ಸಂಸ್ಕೃತಿಯಲ್ಲಿ ಸಹಸ್ರಾರು ವರ್ಷಗಳಿಂದ ಬಂದ ಪದ್ಧತಿಯೇ ಆಗಿದೆ. ಇನ್ನು ಮಡಿ, ಮುಸುರೆ ಎಂಬ ಹೆಸರಿನಲ್ಲಿ ನಮ್ಮ ಕೈ ಶುಚಿತ್ವವನ್ನು ಯಾವಾಗಲೂ ಕಾಪಾಡಿಕೊಂಡು ಬಂದಿರುವುದು ಭಾರತದ ಭವ್ಯ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತದೆ.

ಕೈ ತೊಳೆಯದೆ ಆಹಾರ ಸ್ವೀಕರಿಸುವುದರಿಂದ ಅನೇಕ ವೈರಸ್‌ ಹಾಗೂ ಬ್ಯಾಕ್ಟೀರಿಯಾಗಳು ನಮಗೆ ಗೊತ್ತಿಲ್ಲದಂತೆ ಬಾಯಿಯ ಮೂಲಕ ಹೊಟ್ಟೆಗೆ ಸೇರುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇತ್ತೀಚಿನ ವರದಿಯ ಪ್ರಕಾರ ಕೈಯ ಅಸುರಕ್ಷೆಯಿಂದ ಪ್ರತೀ ವರ್ಷ ಸುಮಾರು 3.5 ಮಿಲಿಯನ್‌ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಡಯೇರಿಯಾ ಹಾಗೂ ನ್ಯುಮೋನಿಯಾದಂತಹ ಕಾಯಿಲೆಗಳು ಕೈ ತೊಳೆಯದೆ ಆಹಾರ ಸೇವಿಸುವುದರಿಂದ ಬರುತ್ತದೆ. ಈಗ ಕೊರೊನಾ ವೈರಸ್‌ ಕೂಡ ಹೊಸದಾಗಿ ಸೇರ್ಪಡೆಯಾಗಿದೆ. ಸಾವಿರಾರು ಜನರನ್ನು ಇದು ಬಲಿ ಪಡೆದಿದೆ.

ಕೈಯ ಅಸುರಕ್ಷೆ ಬಗ್ಗೆ ಕಳವಳಗೊಂಡ ವಿಶ್ವಸಂಸ್ಥೆ 2008 ರ ಅಕ್ಟೋಬರ್‌15 ರಂದು ಸಭೆ ಸೇರಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿತು. ಅಕ್ಟೋಬರ್‌15 ರಂದು ಅಧಿಕೃತವಾಗಿ ವಿಶ್ವ ಕೈ ತೊಳೆಯುವ ದಿನವನ್ನಾಗಿ ಘೋಷಿಸಲಾಯಿತು. ಆಗ ಸುಮಾರು 70 ದೇಶಗಳು ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಆ ವರ್ಷದಿಂದಲೇ ಕೈ ಶುಚಿತ್ವದ ಬಗ್ಗೆ ಕಾರ್ಯಕ್ರಮ ಹಾಗೂ ಮಾಹಿತಿ ನೀಡಲು ಆರಂಭಿಸಿದವು. ಈಗ ಬಹುತೇಕ ರಾಷ್ಟ್ರ ಗಳಲ್ಲಿ ಪ್ರತೀ ವರ್ಷ ಅಕ್ಟೋಬರ್‌15 ರಂದು ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಅನೇಕ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವ ಮೂಲಕ ಕೈ ತೊಳೆಯುವ ವಿಧಾನ ಮತ್ತು ಇದರಿಂದ ನಮಗಾಗುವ ಪ್ರಯೋಜನಗಳ ಬಗೆಗೆ ತಿಳಿ ಹೇಳಲಾಗುತ್ತದೆ.

Advertisement

ಅಡುಗೆ ಮಾಡುವ ಮೊದಲು ಮತ್ತು ಅನಂತರ, ಆಹಾರ ಸ್ವೀಕರಿಸುವ ಮೊದಲು ಹಾಗೂ ಅನಂತರ, ಪ್ರಾಣಿಗಳನ್ನು ಮುಟ್ಟಿದ ಅನಂತರ, ಕಸಗಳನ್ನು ಮುಟ್ಟಿದಾಗ, ಕಾರ್ಖಾನೆ ಇತ್ಯಾದಿಗಳಲ್ಲಿ ಕೆಲಸ ಮಾಡಿದ ಅನಂತರ ಇದಕ್ಕಿಂತಲೂ ಹೆಚ್ಚಾಗಿ ಶೌಚ ಹಾಗೂ ಮೂತ್ರ ವಿಸರ್ಜನೆ ಮಾಡುವ ಮೊದಲು ಹಾಗೂ ಅನಂತರ ಕಡ್ಡಾಯವಾಗಿ ಸೋಪು ಬಳಸಿ ಕೈ ತೊಳೆದುಕೊಳ್ಳಬೇಕು. ವರದಿಯೊಂದರ ಪ್ರಕಾರ ಶೇ.15ರಷ್ಟು ಪುರುಷರು, ಶೇ. 7ರಷ್ಟು ಮಹಿಳೆಯರು ಶೌಚಾಲಯ ಬಳಸಿದ ಅನಂತರ ಸೋಪ್‌ ಬಳಸಿ ಕೈ ತೊಳೆದುಕೊಳ್ಳುವುದಿಲ್ಲ. ಎಲ್ಲರೂ ಕಡ್ಡಾಯವಾಗಿ ಸೋಪ್‌ ಬಳಸಿ ಕೈ ತೊಳೆದು ಆರೋಗ್ಯ ಕಾಪಾಡಿಕೊಳ್ಳಬೇಕು.

ವಿಶ್ವ ಆರೋಗ್ಯ ಸಂಸ್ಥೆಯು ವೈಜ್ಞಾನಿಕವಾಗಿ ಕೈ ತೊಳೆದುಕೊಳ್ಳುವ ವಿವಿಧ ಹಂತಗಳನ್ನು ತಿಳಿಸಿದೆ. ವೈದ್ಯ ಲೋಕವು ಇದನ್ನೇ ಒಪ್ಪಿ ನಡೆಯುತ್ತಿದೆ. ಇದರ ಬಗ್ಗೆ ಮಾಹಿತಿ ನೀಡುವ ಕಾರ್ಯ ಆಗುತ್ತಲೇ ಇದೆ.ಅನೇಕ ವೈರಸ್‌ಗಳು ಒಬ್ಬರ ಕೈಯಿಂದ ಮತ್ತೂಬ್ಬರ ಕೈಗೆ ಸರಾಗವಾಗಿ ಹೋಗುತ್ತವೆ. ಆದ್ದರಿಂದ ಇನ್ನೊಬ್ಬರ ಕೈ ಕುಲುಕಲು ಹೋಗಬಾರದು. ಹಾಗೆಯೇ ಕೈ ತೊಳೆಯದೆ ಆಹಾರ ಸ್ವೀಕಾರ ಮಾಡುವುದರಿಂದ ವೈರಸ್‌ ಹರಡುತ್ತದೆ. ಇದಕ್ಕಾಗಿ ಕೈಯನ್ನು ಸೋಪಿನಿಂದ ತೊಳೆಯೋಣ. ಕೊರೊನಾ ಸಹಿತ ಸಾಂಕ್ರಾಮಿಕ ಕಾಯಿಲೆಗಳು ಬರದಂತೆ ಜಾಗ್ರತೆ ವಹಿಸೋಣ.

ವಿಶ್ವ ಆರೋಗ್ಯ ಸಂಸ್ಥೆಯು ವೈಜ್ಞಾನಿಕವಾಗಿ ಕೈ ತೊಳೆದುಕೊಳ್ಳುವ ವಿವಿಧ ಹಂತಗಳನ್ನು ತಿಳಿಸಿದೆ. ಈ ಹಂತಗಳನ್ನು ಪಾಲಿಸಿ, ಕೈ ತೊಳೆದುಕೊಂಡಲ್ಲಿ ನಮ್ಮ ಕೈಗಳು ವೈರಸ್‌, ಬ್ಯಾಕ್ಟೀರಿಯಾಗಳಿಂದ ಮುಕ್ತವಾಗಿರಲು ಸಾಧ್ಯ.
-ಮೊದಲಿಗೆ ಎರಡೂ ಕೈಗಳನ್ನೂ ಸುಮಾರು ಅರ್ಧ ಮೊಣಕೈ ವರೆಗೂ ನೀರನ್ನು ತೋಯಿಸಿಕೊಂಡು ಸೋಪು ಅಥವಾ ಸೋಪಿನ ದ್ರಾವಣವನ್ನು ಹಾಕಿಕೊಂಡು ಎರಡೂ ಹಸ್ತಗಳಿಂದ ಚೆನ್ನಾಗಿ ಉಜ್ಜಿ ನೊರೆ ಬರುವಂತೆ ಮಾಡಬೇಕು.
-ಬಲ ಹಸ್ತದ ಮುಂಭಾಗದಿಂದ ಎಡ ಹಸ್ತದ ಹಿಂಭಾಗಕ್ಕೆ, ಎಡ ಹಸ್ತ ಮುಂಭಾಗದಿಂದ ಬಳ ಹಸ್ತದ ಹಿಂಭಾಗಕ್ಕೆ ನೊರೆ ಹಚ್ಚಬೇಕು. ಹಾಗೆಯೇ ಬೆರಳುಗಳನ್ನು ಕೆಳಗಿನ ಹಸ್ತದ ಬೆರಳುಗಳ ನಡುವೆ ಓಡಾಡಿಸಿ ಸಂದುಗಳಲ್ಲಿಯೂ ನೊರೆ ತುಂಬಿಕೊಳ್ಳುವ ಹಾಗೆ ಮಾಡಬೇಕು.
– ಎರಡೂ ಹಸ್ತಗಳನ್ನು ಒಂದಕ್ಕೊಂದು ತಾಗಿಸಿ ಬೆರಳುಗಳನ್ನು ಒಂದರ ಒಳಗೊಂದು ಬರುವಂತೆ ಸ್ವಲ್ಪ ಒತ್ತಡದಿಂದ ಉಜ್ಜಿಕೊಳ್ಳಬೇಕು.
-ಎರಡೂ ಹಸ್ತದ ಬೆರಳುಗಳನ್ನು ಕೊಕ್ಕೆಯಂತೆ ಅರ್ಧ ಮಡಚಿ ಒಂದಕ್ಕೊಂದು ಸಿಕ್ಕಿಸಿರುವಂತೆ ಎರಡೂ ಹಸ್ತಗಳನ್ನು ಅಡ್ಡಲಾಗಿ ಉಜ್ಜಿಕೊಳ್ಳಬೇಕು.
-ಎಡ ಹೆಬ್ಬರಳುಗಳನ್ನು ಬಲಗೈಯ ಉಳಿದ ನಾಲ್ಕೂ ಬೆರಳುಗಳು ಸುತ್ತುವರಿಯುವಂತೆ ಹಿಡಿದು ಎಡಮುಖ ಹಾಗೂ ಬಲಮುಖವಾಗಿ ತಿರುಗಿಸಬೇಕು.
-ಕೈಯ ಐದು ಬೆರಳುಗಳ ತುದಿ ಒಂದೆಡೆ ಬರುವಂತೆ ಮುಚ್ಚಿ ಈ ತುದಿಗಳಿಂದ ಎಡ ಹಸ್ತದ ನಡುಭಾಗದಲ್ಲಿ ಸ್ವಲ್ಪವೇ ಒತ್ತಡದಿಂದ ವೃತ್ತಾಕಾರದಲ್ಲಿ ತಿರುಗಿಸಬೇಕು. ಹಾಗೆಯೇ ಬಲ ಹಸ್ತಕ್ಕೂ ಅನ್ವಯಿಸಿಕೊಳ್ಳಬೇಕು. ಎರಡೂ ಕೈಗಳ ಮಣಿ ಕಟ್ಟುಗಳನ್ನು ಉಜ್ಜಿಕೊಳ್ಳಬೇಕು. ಕೊನೆಯದಾಗಿ ಎರಡೂ ಕೈಗಳಿಗೆ ನೀರನ್ನು ಹಾಕಿ ತೊಳೆದುಕೊಳ್ಳಬೇಕು.

ಈ ರೀತಿ ಮಾಡುವುದರಿಂದ ಕೈಯಲ್ಲಿನ ಎಲ್ಲ ಭಾಗಗಳಿಗೂ ನೀರು ಹಾಗೂ ಸೋಪು ತಾಗಿ ಕೈ ಶುದ್ಧವಾಗುತ್ತದೆ. ಕೊಳೆ, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಇಲ್ಲದಾಗುತ್ತವೆ.

-ಡಾ| ಪ್ರಸನ್ನಕುಮಾರ ಐತಾಳ್‌, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next