ಬೆಂಗಳೂರು: ಜಮ್ಮು-ಕಾಶ್ಮೀರಕ್ಕೆ ನೀಡಿರುವ 370ನೇ ವಿಧಿ ರದ್ಧತಿ ಕುರಿತು ಅರಮನೆ ಮೈದಾನದಲ್ಲಿ ಸೆ.22ರಂದು ಬಿಜೆಪಿಯಿಂದ ವಿಶೇಷ ಜನಜಾಗೃತಿ ಸಭೆ ಹಮ್ಮಿಕೊಂಡಿದ್ದು ರಾಷ್ಟ್ರೀಯ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಪ್ರಧಾನಿ ಹಾಗೂ ಕೇಂದ್ರ ಗೃಹಸಚಿವರು 370ನೇ ವಿಧಿ ಹಾಗೂ 35ಎ ರದ್ಧತಿಯನ್ನು ಸಂವಿಧಾನ ಚೌಕಟ್ಟಿನಲ್ಲಿ ಮಾಡಿದ್ದು, “ಒಂದು ದೇಶ-ಒಂದು ಸಂವಿಧಾನ’ ಎಂಬ ಸಂದೇಶವನ್ನು ಕಾರ್ಯಾಧ್ಯಕ್ಷರು ಸಭೆಗೆ ನೀಡಲಿದ್ದಾರೆ. ಬಿಜೆಪಿ ಸಂಘಟನಾ ಶಕ್ತಿ ಹೆಚ್ಚಿಸಿಕೊಳ್ಳಲು ಸೆ.30ರ ಒಳಗಡೆ 58 ಸಾವಿರ ಬೂತ್‌ಗಳಲ್ಲಿ ಬೂತ್ ಅಧ್ಯಕ್ಷರ ಚುನಾವಣೆ ನಡೆಯಲಿದೆ.
ಚುನಾವಣೆ ನಂತರ ಬೂತ್ ಸಮಿತಿ ರಚನೆ, ಬಿಜೆಪಿ ಕಾರ್ಯಾಲಯಕ್ಕೆ ಮಾಹಿತಿ ನೀಡಬೇಕೆಂದು ಜಿಲ್ಲಾ ಸಮಿತಿಗೆ ತಿಳಿಸಿದರು. ಡಿಸೆಂಬರ್ ಒಳಗಡೆ ರಾಷ್ಟ್ರ -ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪಕ್ಷದ ಆಂತರಿಕ ಚುನಾವಣೆ ನಡೆಯಲಿದೆ. ಡಿ.15ರ ಒಳಗಡೆ ಬಿಜೆಪಿ ಸಂಘಟನಾ ಪರ್ವ ಮುಕ್ತಾಯಗೊಳ್ಳಲಿದೆ ಎಂದರು.
ಉಪಚುನಾವಣೆ ಸಿದ್ಧತೆ ಕುರಿತು ನಳಿನ್ ಕುಮಾರ್ ಕಟೀಲು, ಬಿಎಸ್‌ವೈ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದು ಅಗತ್ಯ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅಭ್ಯರ್ಥಿ ಆಯ್ಕೆಯೂ ಕೋರ್ ಕಮಿಟಿ ನಿರ್ಧಾರದಂತೆ ನಡೆಯಲಿದೆ.
-ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ