Advertisement

ಹೊಸ ನಾಯಕ, ಹೊಸ ಕೋಚ್‌, ಹೊಸ ನಿರೀಕ್ಷೆ

11:27 PM Nov 16, 2021 | Team Udayavani |

ಜೈಪುರ: ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನಿರೀಕ್ಷೆಗೆ ವ್ಯತಿರಿಕ್ತ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾದ ಮುಂದೆ ಹೊಸ ಹಾದಿಯೊಂದು ತೆರೆದುಕೊಳ್ಳುವ ಸಮಯ ಕೂಡಿಬಂದಿದೆ.

Advertisement

ರನ್ನರ್ ಅಪ್‌ ನ್ಯೂಜಿಲ್ಯಾಂಡ್‌ ಎದುರಿನ 3 ಪಂದ್ಯಗಳ ಸರಣಿ ಬುಧವಾರ ಜೈಪುರದಲ್ಲಿ ಆರಂಭವಾಗಲಿದ್ದು, ಹೊಸತನದಿಂದ ಕೂಡಿದ ಭಾರತ ತಂಡ ಚುಟಕು ಕ್ರಿಕೆಟ್‌ನಲ್ಲಿ ಹೊಸ ಎತ್ತರವೊಂದನ್ನು ತಲುಪಲು ಇದನ್ನು ಮೊದಲ ಮೆಟ್ಟಿಲನ್ನಾಗಿ ಮಾಡಿಕೊಳ್ಳಬೇಕಿದೆ.

ಹೊಸ ನಾಯಕ, ಹೊಸ ಕೋಚ್‌, ಹೊಸ ನಿರೀಕ್ಷೆ… ಇದು ಭಾರತ ತಂಡದ ಧ್ಯೇಯವಾಕ್ಯ. ವಿರಾಟ್‌ ಕೊಹ್ಲಿ ಬದಲು ರೋಹಿತ್‌ ಶರ್ಮ ಟೀಮ್‌ ಇಂಡಿಯಾದ ನೇತೃತ್ವ ವಹಿಸಲಿದ್ದಾರೆ. ಕೋಚ್‌ ರವಿಶಾಸ್ತ್ರಿ ಸ್ಥಾನದಲ್ಲಿ ಬ್ಯಾಟಿಂಗ್‌ ಕಲಾಕಾರ ರಾಹುಲ್‌ ದ್ರಾವಿಡ್‌ ಕಾಣಿಸಿಕೊಂಡಿದ್ದಾರೆ. ಇಬ್ಬರಿಗೂ ಇದು ಸೀನಿಯರ್‌ ತಂಡದ ನೂತನ ಹಾಗೂ ಅಷ್ಟೇ ಜವಾಬ್ದಾರಿಯುತ ಹೊಣೆಗಾರಿಕೆ. ಹಾಗೆಯೇ ಫಲಿತಾಂಶ ಕೂಡ ಸಕಾರಾತ್ಮಕ ಹಾಗೂ ನೂತನವಾದೀತೆಂಬ ನಿರೀಕ್ಷೆ ದೇಶದ ಕ್ರಿಕೆಟ್‌ ಅಭಿಮಾನಿಗಳದ್ದು.

ತಿದ್ದಿಕೊಳ್ಳಲು ಸಕಾಲ
ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತೀಯರ ಕಳಪೆ ಪ್ರದರ್ಶನ ಎಲ್ಲರನ್ನೂ ರೊಚ್ಚಿಗೆಬ್ಬಿಸಿತ್ತು. ಐಪಿಎಲ್‌ನಲ್ಲಿ ಜೀವ ಪಣಕ್ಕಿಟ್ಟು ಆಡುವ ಇವರೆಲ್ಲ ಐಸಿಸಿಯಂಥ ಮಹತ್ವದ ಕೂಟಗಳಲ್ಲಿ ಇಂಥ ಹೀನಾಯ ಆಟವಾಡುವ ಬಗ್ಗೆ ಎಲ್ಲ ಕಡೆಗಳಿಂದಲೂ ವ್ಯಾಪಕ ಟೀಕೆಗಳು ಎದುರಾಗಿದ್ದವು.

ಆದರೆ ಇದು ಮರೆತುಬಿಡುವ ಮಾತಲ್ಲ. ಅಲ್ಲಿ ಮಾಡಿದ ಎಡವಟ್ಟುಗಳನ್ನು, ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವ ಮಹತ್ವದ ಕಾಲಘಟ್ಟ. ಏಕೆಂದರೆ ಮುಂದಿನ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಉಳಿದಿರುವುದು ಎರಡಲ್ಲ, ಇನ್ನೊಂದೇ ವರ್ಷ!

Advertisement

ಐಪಿಎಲ್‌ ಹೀರೋಗಳು
ಎಲ್ಲ ಹೊಸತನಗಳ ನಡುವೆ ಭಾರತ ತಂಡದಲ್ಲೂ ಹೊಸ ಮುಖಗಳು ಬಹುಸಂಖ್ಯೆಯಲ್ಲಿ ಗೋಚರಿಸಿವೆ. ಐಪಿಎಲ್‌ನಲ್ಲಿ ಮಿಂಚಿದ ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಋತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ವೆಂಕಟೇಶ್‌ ಅಯ್ಯರ್‌, ಆವೇಶ್‌ ಖಾನ್‌, ಹರ್ಷಲ್‌ ಪಟೇಲ್‌ ಅವರೆಲ್ಲ ರೋಹಿತ್‌-ರಾಹುಲ್‌ ಗರಡಿಯಲ್ಲಿ ಪಳಗಿ ಮುಂದಿನ ವಿಶ್ವಕಪ್‌ ವೇಳೆಗೆ ಹುರಿಗೊಳ್ಳಬೇಕಿದೆ. ಹೀಗಾಗಿ ನ್ಯೂಜಿಲ್ಯಾಂಡ್‌ ಎದುರಿನ ಸರಣಿ ಇವರೆಲ್ಲರಿಗೂ ಅತ್ಯಂತ ಮಹತ್ವದ್ದು.

ಇವರೊಂದಿಗೆ ಅನುಭವಿಗಳಾದ ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌ ಇದ್ದಾರೆ. ಚಹಲ್‌ ಮತ್ತು ಸಿರಾಜ್‌ ತಂಡಕ್ಕೆ ವಾಪಸಾಗಿದ್ದಾರೆ. ಇವರಲ್ಲಿ ಕೆಲವರಿಗೆ ಫಾರ್ಮ್ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಅದಕ್ಕೂ ತವರಿನ ಈ ಸರಣಿ ವೇದಿಕೆಯಾಗಬೇಕಿದೆ.

ಇದನ್ನೂ ಓದಿ:ದ್ರಾವಿಡ್‌ ಸರ್‌ ಜತೆ ಕೆಲಸ ಮಾಡಲು ಕಾತರ: ಕೆ.ಎಲ್‌. ರಾಹುಲ್‌

ರೋಹಿತ್‌-ರಾಹುಲ್‌ ಜೋಡಿ
ರೋಹಿತ್‌ ಶರ್ಮ ಅವರ ನಾಯಕತ್ವ ಹಾಗೂ ರಾಹುಲ್‌ ದ್ರಾವಿಡ್‌ ಅವರ ಕೋಚಿಂಗ್‌ ಬಗ್ಗೆ ಎಲ್ಲರೂ ಬಲ್ಲರು. ರೋಹಿತ್‌ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಧೋನಿಯಂತೆ ಬಹಳ “ಕೂಲ್‌’ ಆಗಿ ತಂಡವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಇವರಲ್ಲಿದೆ. ನಾಯಕತ್ವದ ಒತ್ತಡ ಎನ್ನುವುದು ಇವರ ಬ್ಯಾಟಿಂಗ್‌ ಮೇಲೆ ಯಾವತ್ತೂ ವ್ಯತಿರಿಕ್ತ ಪರಿಣಾಮ ಬೀರಿದ್ದಿಲ್ಲ.

ಹಾಗೆಯೇ ರಾಹುಲ್‌ ದ್ರಾವಿಡ್‌. ಭಾರತ “ಎ’, ಅಂಡರ್‌-19 ತಂಡಗಳನ್ನು ಹೊಸ ಹುರು ಪಿನೊಂದಿಗೆ ರೂಪಿಸಿದ ಹಿರಿಮೆ ಇವರದು. ವಿಶೇಷವೆಂದರೆ, ದ್ರಾವಿಡ್‌ ಗರಡಿಯಲ್ಲೇ ಬೆಳೆದ ಹೆಚ್ಚಿನ ಆಟಗಾರರೇ ಈಗಿನ ಸೀನಿಯರ್‌ ತಂಡದಲ್ಲಿರುವುದು. ಹೀಗಾಗಿ ಹೊಂದಾಣಿಕೆ, ಬಾಂಧವ್ಯ ಗಟ್ಟಿಯಾಗಿಯೇ ಬೆಸೆಯುವುದರಲ್ಲಿ ಸಂಶಯ ಬೇಡ.

ಅಪಾಯಕಾರಿ ಕಿವೀಸ್‌
ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಕ್ಕೆ ಸೋತ ನ್ಯೂಜಿಲ್ಯಾಂಡ್‌ ಕೂಡ ತೀವ್ರ ಹತಾಶೆಯಲ್ಲಿದೆ. ಹಾಗೆಯೇ ಭಾರತದಂತೆ ಕಿವೀಸ್‌ ತಂಡದಲ್ಲೂ ಬಹಳಷ್ಟು ಬದಲಾವಣೆ ಸಂಭವಿಸಿದೆ. ನಾಯಕ ಕೇನ್‌ ವಿಲಿಯಮ್ಸನ್‌ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದು ತಂಡದ ಸಮತೋಲನಕ್ಕೆ ತುಸು ಧಕ್ಕೆಯಾಗಿದೆ.

ಆದರೆ ಕಿವೀಸ್‌ ಪಾಳೆಯದಲ್ಲಿ ಸಾಕಷ್ಟು ಮಂದಿ ಅಪಾಯಕಾರಿ ಆಟಗಾರರಿದ್ದಾರೆ. ಗಪ್ಟಿಲ್‌, ಮಿಚೆಲ್‌, ಜಾಮೀಸನ್‌, ನೀಶಮ್‌, ಫಿಲಿಪ್ಸ್‌, ಸ್ಯಾಂಟ್ನರ್‌, ಸೋಧಿ, ಬೌಲ್ಟ್ ಹಾಗೂ ನಾಯಕ ಸೌಥಿ ಟಿ20 ಸ್ಪೆಷಲಿಸ್ಟ್‌ಗಳೇ ಆಗಿದ್ದಾರೆ. ಯುಎಇಯ ನಿಧಾನ ಗತಿಯ ಪಿಚ್‌ಗಳಿಗೆ ಹೋಲಿಸಿದರೆ ಭಾರತದ ಟ್ರ್ಯಾಕ್ ಗಳು ಬ್ಯಾಟಿಂಗಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ. ಹಾಗೆಯೇ ಮಂಜಿನ ಪ್ರಭಾವವೂ ದಟ್ಟವಾಗಿದೆ.

ವೀಕ್ಷಕರು ಫುಲ್‌ ಖುಷ್‌!
ಈ ಸರಣಿ ಮೂಲಕ ಭಾರತದ ಪ್ರೇಕ್ಷಕರಿಗೆ ಮತ್ತೆ ಪೂರ್ಣ ಪ್ರಮಾಣದಲ್ಲಿ ಸ್ಟೇಡಿಯಂ ಬಾಗಿಲು ತೆರೆಯಲಿರುವುದು ಸಂತಸದ ಸಂಗತಿ. ಹಾಗೆಯೇ ಜೈಪುರ ಪಾಲಿಗೆ ಇದೊಂದು ಐತಿಹಾಸಿಕ ಪಂದ್ಯ. ಇಲ್ಲಿನ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ನಡೆಯಲಿರುವ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ!

ವಿಲಿಯಮ್ಸನ್‌ ಬದಲು
ಟಿಮ್‌ ಸೌಥಿ ನಾಯಕ
ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲ್ಯಾಂಡನ್ನು ಮುನ್ನಡೆಸಿದ ಕೇನ್‌ ವಿಲಿಯಮ್ಸನ್‌ ಭಾರತದೆದುರಿನ ಟಿ20 ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇವರ ಬದಲು ವೇಗಿ ಟಿಮ್‌ ಸೌಥಿ ತಂಡದ ನಾಯಕತ್ವ ವಹಿಸಲಿದ್ದಾರೆ.

ವಿಲಿಯಮ್ಸನ್‌ ಟಿ20 ತಂಡದೊಂದಿಗೆ ಇರುವರಾದರೂ ಮುಂಬರುವ ಟೆಸ್ಟ್‌ ಸರಣಿಗೆ ಅಭ್ಯಾಸ ನಡೆಸುವ ಉದ್ದೇಶ ಹೊಂದಿದ್ದಾರೆ.

ಕೈಲ್‌ ಜಾಮೀಸನ್‌, ಡ್ಯಾರಿಲ್‌ ಮಿಚೆಲ್‌, ಗ್ಲೆನ್‌ ಫಿಲಿಪ್ಸ್‌, ಮಿಚೆಲ್‌ ಸ್ಯಾಂಟ್ನರ್‌ ಟಿ20 ಹಾಗೂ ಟೆಸ್ಟ್‌ ಸರಣಿಗಳೆರಡರ ಆಯ್ಕೆಗೂ ಲಭ್ಯರಿರುತ್ತಾರೆ ಎಂದು ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಗಾಯಾಳಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದ ಲಾಕಿ ಫರ್ಗ್ಯುಸನ್‌ ಟಿ20 ಸರಣಿಯ ಆಯ್ಕೆಗೆ ಲಭ್ಯರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next