Advertisement
ಮೊದಲ ಪಂದ್ಯದ ತಾಣ ಲಕ್ನೋ. ಅನೇಕ ಮಂದಿ ಪ್ರಮುಖ ಆಟಗಾರರ ಗೈರಿನ ಹೊರತಾಗಿಯೂ ರೋಹಿತ್ ಪಡೆಯೇ ಇಲ್ಲಿನ ನೆಚ್ಚಿನ ತಂಡ ಎಂಬುದರಲ್ಲಿ ಎರಡು ಮಾತಿಲ್ಲ.
Related Articles
ಈ ಸರಣಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಾಮರ್ಥ್ಯಕ್ಕೊಂದು ಸವಾಲು ಎಂಬುದರಲ್ಲಿ ಎರಡು ಮಾತಿಲ್ಲ. ಕೊಹ್ಲಿ, ಪಂತ್, ಸೂರ್ಯಕುಮಾರ್-ಮೂವರೂ ಏಕಕಾಲಕ್ಕೆ ಬೇರ್ಪಟ್ಟಿರುವುದರಿಂದ ಒತ್ತಡ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ ಮೇಲೆ ಎಂದಿಗಿಂತ ಹೆಚ್ಚಿನ ಹೊಣೆಗಾರಿಕೆ ಬೀಳಲಿದೆ. ಇವರಲ್ಲಿ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿ ಹೆಚ್ಚಿನ ಅವಧಿಯನ್ನು ಕಳೆಯಬೇಕಿದೆ. ಇದೇ ವೇಳೆ ಅನುಭವಿ ಜಡೇಜ ಮರಳಿರುವುದರಿಂದ ಡೆತ್ ಓವರ್‌ಗಳಲ್ಲಿ ಖಂಡಿತವಾಗಿಯೂ ಲಾಭವಾಗಲಿದೆ.
Advertisement
ಓಪನಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮ ಅವರಿಗೆ ಜತೆ ನೀಡಲು ಇಬ್ಬರಿದ್ದಾರೆ-ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್. ಆದರೆ ಇವರಲ್ಲೊಬ್ಬರು ವನ್‌ಡೌನ್‌ನಲ್ಲಿ ಬ್ಯಾಟ್ ಹಿಡಿದು ಬಂದು ಕೊಹ್ಲಿ ಸ್ಥಾನವನ್ನು ತುಂಬಬೇಕಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್-ದಬಾಂಗ್ ದಿಲ್ಲಿ ಪ್ರಶಸ್ತಿ ಫೈಟ್
ಬೌಲಿಂಗ್ ಆಯ್ಕೆ ಹಲವುಭಾರತದ ಮುಂದೆ ಬೌಲಿಂಗ್ ಆಯ್ಕೆ ಬಹಳಷ್ಟಿದೆ. ಉಪನಾಯಕ ಬುಮ್ರಾ ವಾಪಸಾತಿಯಿಂದ ಪೇಸ್ ವಿಭಾಗ ಹೆಚ್ಚು ಬಲಿಷ್ಠಗೊಂಡಿದೆ. ಇವರಿಗೆ ಭುವನೇಶ್ವರ್, ಹರ್ಷಲ್ ಪಟೇಲ್ ಬೆಂಬಲ ಸಿಗುವ ಸಾಧ್ಯತೆ ಇದೆ. ಸ್ಪಿನ್ ವಿಭಾಗದ ಒಂದು ಸ್ಥಾನ ಆಲ್‌ರೌಂಡರ್ ಜಡೇಜಾಗೆ ಮೀಸಲಾಗಿರುತ್ತದೆ. ಚಹಲ್ ಅಥವಾ ಬಿಷ್ಣೋಯಿ ಇನ್ನೊಂದು ಸ್ಥಾನ ತುಂಬಬೇಕಿದೆ. ಲಂಕನ್ನರು ಭಾರತದಲ್ಲಿ, ಅದರಲ್ಲೂ ಸ್ಪಿನ್ನಿಗೆ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇರುವುದರಿಂದ ತ್ರಿವಳಿ ಸ್ಪಿನ್ ದಾಳಿ ಅನುಮಾನ ಎನ್ನಬಹುದು. ಲಂಕಾ ಸಾಮಾನ್ಯ ತಂಡ
ಆಸ್ಟ್ರೇಲಿಯ ಕೈಯಲ್ಲಿ ಸೋತು ಸುಣ್ಣವಾಗಿ ಬಂದಿರುವ ಶ್ರೀಲಂಕಾ ಏಶ್ಯ ಟ್ರ್ಯಾಕ್‌ನಲ್ಲಿ ಒಂದಿಷ್ಟು ಸುಧಾರಿತ ಆಟವಾಡೀತು ಎಂಬ ಲೆಕ್ಕಾಚಾರವೊಂದಿದೆ. ಆದರೆ ತಂಡದ ಬ್ಯಾಟಿಂಗ್ ವಿಭಾಗವೇ ಅತ್ಯಂತ ದುರ್ಬಲ. ಬೌಲಿಂಗ್ ಬಲಗುಂದಿದೆ. ಆಲ್‌ರೌಂಡರ್ ವನಿಂದು ಹಸರಂಗ ಗೈರು ಇನ್ನಷ್ಟು ಹೊಡೆತ ನೀಡಲಿದೆ. ಒಟ್ಟಾರೆ ಹೇಳುವುದಾದರೆ, ಲಂಕಾ ಟಿ20 ಸ್ಪೆಷಲಿಸ್ಟ್ ತಂಡವಂತೂ ಅಲ್ಲ. ಅಗ್ರ ಕ್ರಮಾಂಕದ ಬ್ಯಾಟರ್ ಮಿಂಚಿದರೆ ಯಶಸ್ಸು ಸಾಧ್ಯ ಎಂಬುದು ನಾಯಕ ದಸುನ್ ಶಣಕ ನಂಬಿಕೆ. ಕೊರೊನಾ; ಹಸರಂಗ ಹೊರಕ್ಕೆ
ಶ್ರೀಲಂಕಾದ ಲೆಗ್ ಸ್ಪಿನ್ನಿಂಗ್ ಆಲ್‌ರೌಂಡರ್ ವನಿಂದು ಹಸರಂಗ ಭಾರತದೆದುರಿನ ಟಿ20 ಸರಣಿಯಿಂದ ಬೇರ್ಪಟ್ಟಿದ್ದಾರೆ. ಕಾರಣ, ಮತ್ತೆ ಕಾಡಿದ ಕೊರೊನಾ ಪಾಸಿಟಿವ್. ಆಸ್ಟ್ರೇಲಿಯ ಪ್ರವಾಸದ ವೇಳೆ, ಒಂದು ವಾರದ ಹಿಂದೆ ವನಿಂದು ಹಸರಂಗ ಅವರಿಗೆ ಕೊರೊನಾ ಅಂಟಿತ್ತು. ಇತ್ತೀಚಿನ ಟೆಸ್ಟ್ ನಲ್ಲೂ ಪಾಸಿಟಿವ್ ಫಲಿತಾಂಶವೇ ಬಂದಿದೆ. ಇದಕ್ಕೂ ಮೊದಲೊಮ್ಮೆ ಅವರು ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದರು. ಕಳೆದ ಜುಲೈಯಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸಗೈದಾಗ ಹಸರಂಗ ಬೌಲಿಂಗ್‌ನಲ್ಲಿ ಮಿಂಚಿದ್ದರು. ದ್ವಿತೀಯ ಏಕದಿನ ಪಂದ್ಯದಲ್ಲಿ ಕೇವಲ 9 ರನ್ನಿಗೆ 4 ವಿಕೆಟ್ ಉಡಾಯಿಸಿದ್ದರು. ಈ ಸರಣಿಯ ಬಳಿಕ ಅವರು ನಂ.1 ಟಿ20 ಬೌಲರ್ ಆಗಿ ಮೂಡಿಬಂದಿದ್ದರು. ಕಳೆದ ವರ್ಷದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಸಾಧನೆಗೈದ ಹೆಗ್ಗಳಿಕೆಯೂ ಹಸರಂಗ ಅವರದಾಗಿತ್ತು. ಐಪಿಎಲ್ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ. ಮೊತ್ತಕ್ಕೆ ಆರ್‌ಸಿಬಿ ಪಾಲಾಗಿದ್ದರು. ಹಸರಂಗ ಗೈರು ಲಂಕೆಗೆ ಭಾರೀ ಹೊಡೆತವಿಕ್ಕುವ ಸಾಧ್ಯತೆ ಇದೆ. ಸರಣಿಯಿಂದ ಹೊರಬಿದ್ದ ಸೂರ್ಯ
ವೆಸ್ಟ್ ಇಂಡೀಸ್ ವಿರುದ್ಧ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದ ಮಧ್ಯಮ ಕ್ರಮಾಂಕದ ಇನ್‌ಫಾರ್ಮ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಶ್ರೀಲಂಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಕೈ ಮೂಳೆಯಲ್ಲಿ ಸೂಕ್ಷ್ಮ ಬಿರುಕು ಕಂಡುಬಂದ ಕಾರಣ ಅವರು ಚಿಕಿತ್ಸೆಗೆ ತೆರಳಲಿದ್ದಾರೆ. ಇದರೊಂದಿಗೆ ಸರಣಿ ಆರಂಭವಾಗುವ ಮೊದಲೇ ಭಾರತದ ಇಬ್ಬರು ಪ್ರಮುಖ ಆಟಗಾರರು ತಂಡದಿಂದ ಬೇರ್ಪಟ್ಟಂತಾಯಿತು. ಇದಕ್ಕೂ ಮುನ್ನ ಸ್ನಾಯು ಸೆಳೆತಕ್ಕೆ ಸಿಲುಕಿದ ದೀಪಕ್ ಚಹರ್ ಇದೇ ಸಂಕಟಕ್ಕೆ ಸಿಲುಕಿದ್ದರು. “ಗಾಯಾಳಾದ ಕಾರಣ ಸೂರ್ಯಕುಮಾರ್ ಮತ್ತು ಚಹರ್ ಲಂಕಾ ವಿರುದ್ಧದ ಸರಣಿಗೆ ಲಭ್ಯರಾಗುತ್ತಿಲ್ಲ. ಇಬ್ಬರೂ ಬೆಂಗಳೂರಿನ ಎನ್‌ಸಿಎಗೆ ತೆರಳುವರು’ ಎಂದು ಬಿಸಿಸಿಐ ತಿಳಿಸಿದೆ. ಇವರಿಬ್ಬರ ಸ್ಥಾನಕ್ಕೆ ಬದಲಿ ಆಟಗಾರರನ್ನು ಹೆಸರಿಸಿಲ್ಲ. ಈಗಾಗಲೇ ಕೊಹ್ಲಿ ಮತ್ತು ಪಂತ್ ಅವರಿಗೆ ಬ್ರೇಕ್ ನೀಡಿದ ಕಾರಣ 4 ಪ್ರಮುಖ ಆಟಗಾರು ಈ ಸರಣಿಯಿಂದ ಬೇರ್ಪಟ್ಟಂತಾಗುತ್ತದೆ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ/ಸಂಜು ಸ್ಯಾಮ್ಸನ್, ವೆಂಕಟೇಶ್ ಅಯ್ಯರ್, ರವೀಂದ್ರ ಜಡೇಜ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್/ರವಿ ಬಿಷ್ಣೋಯಿ. ಶ್ರೀಲಂಕಾ: ಪಥುಮ್ ನಿಸ್ಸಂಕ, ಕುಸಲ್ ಮೆಂಡಿಸ್, ಚರಿತ ಅಸಲಂಕ, ದಿನೇಶ್ ಚಂಡಿಮಾಲ್, ಜನಿತ್ ಲಿಯನಗೆ, ದಸುನ್ ಶಣಕ (ನಾಯಕ), ಚಮಿಕ ಕರುಣಾರತ್ನೆ, ಪ್ರವೀಣ್ ಜಯವಿಕ್ರಮ, ಮಹೀಶ್ ತೀಕ್ಷಣ, ದುಷ್ಮಂತ ಚಮೀರ, ಬಿನುರ ಫೆರ್ನಾಂಡೊ.