Advertisement

Today ನಾಗಮಂಗಲಕ್ಕೆ ಬಿಜೆಪಿ ಸತ್ಯಶೋಧನ ಸಮಿತಿ

11:38 PM Sep 15, 2024 | Team Udayavani |

ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣ ಸಂಬಂಧ ಮಾಜಿ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ರಚಿಸಿರುವ ಸತ್ಯಶೋಧನ ಸಮಿತಿಯು ಸೋಮವಾರ ಸ್ಥಳಕ್ಕೆ ಭೇಟಿ ನೀಡಲಿದೆ.

Advertisement

ಈ ಬಗ್ಗೆ ಮಾಹಿತಿ ಹಂಚಿಕೊಂಡ ಡಾ| ಅಶ್ವತ್ಥನಾರಾಯಣ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಭೈರತಿ ಬಸವರಾಜ್‌, ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ಲಕ್ಷ್ಮೀ ಅಶ್ವಿ‌ನ್‌ ಗೌಡ, ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರನ್ನೊಳಗೊಂಡ ಸಮಿತಿಯು ಸೋಮವಾರ ನಾಗಮಂಗಲಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವುದಾಗಿ ತಿಳಿಸಿದರು.

ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭ ಗಲಭೆಯನ್ನು ಹತ್ತಿಕ್ಕುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫ‌ಲವಾಗಿದೆ. ಪ್ರಾರಂಭದಲ್ಲಿ ಅದೇನೂ ಇಲ್ಲ ಎಂಬಂತೆ ಹೇಳಿಕೆ ಕೊಟ್ಟರು. ಅನಂತರ ಇಂಟೆಲಿಜೆನ್ಸ್ ಮುಖ್ಯಸ್ಥರನ್ನು ವರ್ಗಾಯಿಸಿದರು. ಇನ್‌ಸ್ಪೆಕ್ಟರ್‌ ಅನ್ನು ಅಮಾನತು ಮಾಡಿದ್ದು, ಕಾನೂನು-ಸುವ್ಯವಸ್ಥೆ ನಿರ್ವಹಿಸುವಲ್ಲಿನ ವೈಫ‌ಲ್ಯವು ನಾಗಮಂಗಲ ಘಟನೆ ಮೂಲಕ ವ್ಯಕ್ತವಾಗಿದೆ ಎಂದರು.

ಇಡೀ ಘಟನೆಗೆ ಒಂದು ಕೋಮಿನವರು ಪ್ರಚೋದನೆ ಮಾಡಿದ್ದಾರೆ. ಕೇರಳದವರು ಇದರ ಹಿಂದಿದ್ದು, ಎಸ್‌ಡಿಪಿಐಯವರಿದ್ದಾರೆ ಎಂಬ ಅನುಮಾನಗಳಿವೆ. ನಮ್ಮ ಸಂಸ್ಕೃತಿ ಎನಿಸಿದ ವಿನಾಯಕನ ಚತುರ್ಥಿ ಕಾರ್ಯಕ್ರಮವು ದೇಶದ ಸದೃಢತೆಗೆ ಶಕ್ತಿ ತುಂಬುತ್ತದೆ. ಅಂಥ ಸಂದರ್ಭದಲ್ಲಿ ಅಡಚಣೆ, ಅನಾವಶ್ಯಕವಾಗಿ ತೊಂದರೆ ಕೊಡುತ್ತಿದ್ದು, ಇದಕ್ಕೆ ಗೃಹ ಇಲಾಖೆ ಬೆಂಬಲ ಕೊಡುತ್ತಿದೆ ಎಂದು ಟೀಕಿಸಿದರು.

ಈ ಸರಕಾರ ಒಂದು ವರ್ಗ, ಒಂದು ಧರ್ಮಕ್ಕೆ ಸೀಮಿತವಾಗಿ ವರ್ತಿಸುತ್ತಿದೆ. ಎಷ್ಟೋ ಕಡೆ ಗಣೇಶ ಮೂರ್ತಿ ಇಡಲು ಬಿಟ್ಟಿಲ್ಲ. ಮೆರವಣಿಗೆಗೆ ಕಡಿವಾಣ ಹಾಕಿದ್ದಾರೆ. ಬೆಂಗಳೂರಿನಲ್ಲಿ ಗಣೇಶ ಮೂರ್ತಿಯನ್ನೇ ಬಂಧಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಸಂಪೂರ್ಣವಾಗಿ ವಿಫ‌ಲವಾಗಿದೆ. ನೂರಾರು
ಘಟನೆಗಳು ಕಣ್ಣೆದುರು ಇವೆ. ತುಷ್ಟೀಕರಣದ ಪರಿಣಾಮ, ಆಡಳಿತದ ಮೇಲೆ ಹಿಡಿತ-ಸ್ಪಷ್ಟತೆ ಇಲ್ಲದ ಕಾರಣ ಸಮಾಜದಲ್ಲಿ ತುಂಬ ಗೊಂದಲ, ಭಯ, ಅತೃಪ್ತಿಯ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next