Advertisement
ಜಿಎಸ್‌ಬಿ ಸಮಾಜದ ಸುಮಂಗಲಿಯರು ಶ್ರಾವಣ ಮಾಸದಲ್ಲಿ ರವಿವಾರ-ಶುಕ್ರವಾರ ಚೂಡಿ ಪೂಜೆ ಆಚರಿಸುತ್ತಾರೆ. ರಕ್ಕಸ ದೊರೆ ಜಲಂಧರನ ಪತ್ನಿ ವೃಂದಾ ಪತಿವ್ರತೆಯಾಗಿದ್ದಳು. ವಿಷ್ಣುವಿನ ಪರಮ ಭಕ್ತೆ. ಜಲಂಧರನಿಂದ ದೇವತೆಗಳನ್ನು ರಕ್ಷಿಸಲು ವಿಷ್ಣು ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಜಲಂಧರ ಸಾಯಬೇಕಾದರೆ ವೃಂದಾಳ ಪಾತಿವ್ರತ್ಯಕ್ಕೆ ಧಕ್ಕೆ ಬರಬೇಕು. ಹೀಗಾಗಿ, ಜಲಂಧರ ಯುದ್ಧಕ್ಕೆ ತೆರಳಿದ್ದ ಸಂದರ್ಭದಲ್ಲಿ ವಿಷ್ಣು ಆತನ ರೂಪದಲ್ಲಿ ವೃಂದಾಳ ಬಳಿಗೆ ಬರುತ್ತಾನೆ. ತನ್ನ ಗಂಡನೆಂದು ನಂಬಿ ವೃಂದಾ ವಿಷ್ಣುವನ್ನು ಕೂಡುತ್ತಾಳೆ. ಯುದ್ಧಭೂಮಿಯಲ್ಲಿ ಜಲಂಧರ ಸಾಯುತ್ತಾನೆ. ಪತಿಯ ಸಾವಿನಿಂದ ದುಃಖೀತಳಾದ ವೃಂದಾ ಮತ್ತೆ ಪಾತಿ ವ್ರತ್ಯ ಕೊಡಿಸುವಂತೆ ವಿಷ್ಣುವಿನ ಮೊರೆ ಹೋಗುತ್ತಾಳೆ. ಶ್ರಾವಣ ಮಾಸದಲ್ಲಿ ವಿವಿಧ ಹೂವುಗಳನ್ನು ನಾರಿನಿಂದ ಕಟ್ಟಿ ತುಳಸಿಗೆ ಅರ್ಪಿಸಿ, ತುಳಸೀ ದೇವಿಯನ್ನು ಪೂಜಿಸುವಂತೆ ವೃಂದಾಗೆ ತಿಳಿಸುತ್ತಾನೆ. ತುಳಸೀಯನ್ನು ಪೂಜಿಸಿ ವೃಂದಾ ಪವಿತ್ರಳಾಗುವ ಕಥೆಯೇ ಚೂಡಿ ಪೂಜೆಗೆ ಹಿನ್ನೆಲೆ.
ಶ್ರಾವಣ ಮಾಸದ ಪ್ರತಿ ರವಿವಾರ, ಶುಕ್ರವಾರ ಸುಮಂಗಲಿಯರು ಚೂಡಿ ಪೂಜೆಯನ್ನು ಮಾಡುತ್ತಾರೆ. ಈ ಪೂಜೆಗೆ ಗರಿಕೆ ಹುಲ್ಲು ಅತ್ಯಗತ್ಯ. ಆರತಿ , ಬೆಕ್ಕಿನ ಉಗುರು ಹಾಗೂ ಕುದುರೆ ಕಾಲನ್ನು ಹೋಲುವ ಸಸ್ಯ ಗಳು, ನೀರು ಕಡ್ಡಿ, ಅರಳಿ ಗಿಡ ಹಾಗೂ ಹಿತ್ತಿಲಲ್ಲಿ ಸಿಗುವ ಯಾವುದಾದರೂ ಐದು ಹೂವುಗಳನ್ನು ಸೇರಿಸಿ ಚೂಡಿಯನ್ನು ತಯಾರಿಸುತ್ತಾರೆ. ಪೂಜಿಸಲು ಬೆಸ ಸಂಖ್ಯೆಯಲ್ಲಿ ಚೂಡಿ ಬಳಸುತ್ತಾರೆ. ಔಷಧೀಯ ಗುಣವುಳ್ಳ ಚೂಡಿಯನ್ನು ತಲೆಯಲ್ಲಿ ಧರಿಸುವುದರಿಂದ ಶರೀರದ ಉಷ್ಣತೆ ಕಮ್ಮಿಯಾಗುತ್ತದೆ. ಸಮತೋಲನ ಸಾಧ್ಯವಾಗುತ್ತದೆ. ಭಕ್ತಿಯಿಂದ ಚೂಡಿ ಪೂಜೆ ಆಚರಿಸಿದರೆ ಆಧ್ಯಾತ್ಮಿಕ ಶಕ್ತಿ ಹೆಚ್ಚುತ್ತದೆ ಎಂಬುದು ಹಿರಿಯರ ಅಭಿಪ್ರಾಯ.
Related Articles
ಮನೆ ಹಾಗೂ ತುಳಸೀ ಕಟ್ಟೆಯನ್ನು ಸ್ವಚ್ಛಗೊಳಿಸಿ ಸುಮಂಗಲಿಯರು ತಲೆಗೆ ಸ್ನಾನ ಮಾಡಿ, ಬಾವಿಯಿಂದ ನೀರು ತಂದು ತುಳಸೀ ಕಟ್ಟೆ ಸುತ್ತ ಮಾವಿನ ಎಲೆಯಿಂದ ಪ್ರೋಕ್ಷಣೆ ಮಾಡುತ್ತಾರೆ. ತುಳಸಿಗೆ ಅರಿಸಿನ, ಕುಂಕುಮ ಹಚ್ಚಿ, ಚೂಡಿಯನ್ನಿಟ್ಟು, ಹಣ್ಣುಕಾಯಿ, ನೈವೇದ್ಯ ಮಾಡಿ, ಆರತಿ ಎತ್ತಿ ಪೂಜೆ ಮಾಡುತ್ತಾರೆ. ಒಂದು ಚೂಡಿಯನ್ನು ತುಳಸಿ ಕಟ್ಟೆಗೆ ಹಾಗೂ ಸೂರ್ಯದೇವರಿಗೆ ಸಮರ್ಪಿಸುತ್ತಾರೆ. ಮನೆಯಲ್ಲಿರುವ ಎಲ್ಲ ಹೊಸ್ತಿಲುಗಳನ್ನು ರಂಗೋಲಿಯಿಂದ ಸಿಂಗರಿಸಿ, ಆರತಿ ಬೆಳಗಿ, ಚೂಡಿ ಇಟ್ಟು, ಅಕ್ಷತೆ ಹಾಕಿ ನಮಿಸುತ್ತಾರೆ. ದೇವರ ಕೋಣೆಯಲ್ಲಿ ದೇವರಿಗೆ ಚೂಡಿ ಇಟ್ಟು ಪೂಜಿಸುತ್ತಾರೆ.
Advertisement
ಮಾಧವ ನಾಯಕ್ ಕೆ.