ಮೇ ಬಂತೆಂದರೆ ಸಾಕು ಅಂಬರೀಷ್ ಹಾಗು ರವಿಚಂದ್ರನ್ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ಮತ್ತು ಸಂಭ್ರಮ. ಅದಕ್ಕೆ ಕಾರಣವನ್ನು ಹೇಳಬೇಕಿಲ್ಲ. ಯಾಕೆಂದರೆ, ಮೇ 29 ರೆಬೆಲ್‌ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬ. ಮೇ 30 ರವಿಚಂದ್ರನ್ ಅವರ ಹುಟ್ಟುಹಬ್ಬ. ಹೀಗಾಗಿ ಒಂದು ದಿನದ ಅಂತರದಲ್ಲಿ ಇಬ್ಬರು ಸ್ಟಾರ್ ನಟರ ಬರ್ತ್‌ಡೇ. ಹೀಗಾಗಿ ಇಬ್ಬರು ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ.
ಅಂಬರೀಷ್ ಇಂದು (ಸೋಮವಾರ) ತಮ್ಮ 65 ನೇ ಹುಟ್ಟುಹಬ್ಬ ಆಚರಿಸಿಕೊಂಡರೆ, ರವಿಚಂದ್ರನ್ ಅವರು 56 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಎಂದಿನಂತೆ ಇಬ್ಬರ ಅಭಿಮಾನಿಗಳೂ ಕೂಡ ಪ್ರೀತಿಯ ನಾಯಕ ನಟರ ಮನೆಯ ಮುಂದೆ ಸಾಲುಗಟ್ಟಿ, ಶುಭಾಶಯ ಹೇಳಲು ಸಜ್ಜಾಗಿದ್ದಾರೆ.
ದೂರದ ಊರುಗಳಿಂದ ಆಗಮಿಸುವ ಅಭಿಮಾನಿಗಳು ಹಿಂದಿನ ದಿನದ ರಾತ್ರಿಯೇ ನಟರ ಮನೆಯ ಮುಂದೆ ಹಾಜರಾಗಿ, ಶುಭಾಶಯ ಹೇಳುವ ಪರಿಪಾಠ ಬೆಳೆಸಿಕೊಂಡು ಬಂದಿದ್ದಾರೆ. ಇನ್ನು, ಇಬ್ಬರು ನಟರು ಪರಸ್ಪರ ಶುಭಾಶಯ ಹೇಳುವ ಮೂಲಕ ಕೇಕ್ ಕತ್ತರಿಸಿ, ಅಭಿಮಾನಿಗಳ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದೂ ಇದೆ. ಅಂತೂ ಈ ಎರಡು ದಿನಗಳು ಅಭಿಮಾನಿಗಳ ಪಾಲಿಗೆ ಸಂಭ್ರಮದ ದಿನಗಳಂತೂ ಹೌದು.
ರವಿಚಂದ್ರನ್ ಅಭಿನಯದ ಮೂರು ಚಿತ್ರಗಳು ಚಿತ್ರೀಕರಣದಲ್ಲಿವೆ. “ರಾಜೇಂದ್ರ ಪೊನ್ನಪ್ಪ’, “ದಶರಥ’ ಹಾಗೂ ‘ಬಕಾಸುರ’ ಚಿತ್ರಗಳಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ಇನ್ನು, ಅಂಬರೀಷ್ ಅವರು ಎಂದಿನಂತೆ ರಾಜಕಾರನದಲ್ಲಿ ಬಿಜಿಯಾಗಿದ್ದಾರೆ. “ಕುರುಕ್ಷೇತ್ರ’ ಚಿತ್ರದಲ್ಲಿ ಅಂಬರೀಷ್ “ಭೀಷ್ಮ’ನ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾತೂ ಸಹ ಕೇಳಿಬರುತ್ತಿದೆ.