Advertisement

ಇಂದು ಅಕ್ಷಯ ತೃತೀಯಾ ಶುಭ ದಿನ: ಚಿನ್ನಾಭರಣ ಖರೀದಿಗೆ ಗ್ರಾಹಕರು ಸಿದ್ಧ

01:06 AM May 07, 2019 | Team Udayavani |

ಮಂಗಳೂರು: ಸಂಪತ್ತು ವೃದ್ಧಿಯ ಆಶಯ ದೊಂದಿಗೆ ಚಿನ್ನಾಭರಣ ಖರೀದಿಸುವ ಹಬ್ಬ ಅಕ್ಷಯ ತೃತೀಯಾ ಮತ್ತೆ ಬಂದಿದ್ದು, ಚಿನ್ನ ಪ್ರಿಯರು ತಮ್ಮ ಇಷ್ಟದ ಆಭರಣ ಖರೀದಿಗೆ ಎಲ್ಲೆಡೆ ಅಣಿಯಾಗಿದ್ದಾರೆ.

Advertisement

ಈ ಶುಭ ದಿನದಂದು ಸಣ್ಣ ಚಿನ್ನ ಖರೀದಿಸುವುದರಿಂದ ಬಾಂಧವ್ಯ ವೃದ್ಧಿಯ ಜತೆಗೆ ಸಂಪತ್ತು ಕೂಡ ವೃದ್ಧಿ ಯಾಗುತ್ತದೆ ಎಂಬುದು ನಂಬಿಕೆ. ಈ ಕಾರಣದಿಂದ ಪರಂಪರಾಗತವಾಗಿ ಅಕ್ಷಯ ತೃತೀಯಾ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಆಭರಣ ಮಳಿಗೆಗಳು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಮಂಗಳವಾರ ಚಿನ್ನದ ವ್ಯಾಪಾರಿಗಳು ಹೆಚ್ಚಿನ ಚಿನ್ನಾಭರಣ ವ್ಯಾಪಾರದ ನಿರೀಕ್ಷೆಯಲ್ಲಿದ್ದು, ಅಂಗಡಿಗಳು ವೈವಿಧ್ಯಮಯ ಉತ್ಪನ್ನಗಳೊಂದಿಗೆ ಸಿದ್ಧತೆ ಮಾಡಿಕೊಂಡಿವೆ.

ಚಿನ್ನದ ದರ ಕಡಿಮೆಯಾಗಿರುವುದರಿಂದ ಈ ಬಾರಿ ಹೆಚ್ಚು ಮಂದಿ ಖರೀದಿಸುವ ಸಾಧ್ಯತೆ ಇದೆ. ಹಾಗಾಗಿಯೇ ಅತ್ತ ಚಿನ್ನಾಭರಣ ಮಳಿಗೆಯವರು ಕೂಡ ಹೆಚ್ಚಿನ ಗ್ರಾಹಕರ ನಿರೀಕ್ಷೆಯಲ್ಲಿ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿ ಕೊಂಡಿದ್ದಾರೆ. ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಮಳಿಗೆಗಳಿಗೆ ತೆರಳಿ ಹೊಸದಾಗಿ ಬಂದ ಆಭರಣಗಳ ವಿನ್ಯಾಸವನ್ನು ನೋಡುವ ಕಾತುರದಲ್ಲಿ ಗ್ರಾಹಕರಿದ್ದಾರೆ. ಇನ್ನು ಮಂಗಳವಾರ ಸರಕಾರಿ ರಜಾ ದಿನ ಕೂಡ ಆಗಿರುವುದರಿಂದ ಚಿನ್ನಾಭರಣ ಮಳಿಗೆಗಳತ್ತ ಹೋಗುವುದಕ್ಕೆ ಲೆಕ್ಕಾಚಾರ ಹಾಕಿಕೊಂಡಿರುವ ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಿದೆ.

ಖರೀದಿಸುವಾಗ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸ ಬೇಕು. 24 ಕ್ಯಾರೆಟ್‌ ಎನ್ನುವುದು ಚಿನ್ನದ ಶುದ್ಧವಾದ ರೂಪವಾಗಿದೆ. ಹೆಚ್ಚಿನ ಚಿನ್ನಾಭರಣಗಳ ಮಳಿಗೆಗಳಲ್ಲಿ ಪರಿಶುದ್ಧತೆ ಪರೀಕ್ಷಿಸಲು ಯಂತ್ರಗಳ ವ್ಯವಸ್ಥೆ ಕೂಡ ಇದೆೆ. ಹೀಗಿರುವಾಗ, ಚಿನ್ನದ ಖರೀದಿಯ ಮೊದಲು ಅದರ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ. ಹಾಲ್‌ ಮಾರ್ಕ್‌ ಪರೀಕ್ಷಿಸಿಕೊಳ್ಳುವುದು ಕೂಡ ಅವಶ್ಯ.

ಮುಂಗಡ ಬುಕ್ಕಿಂಗ್‌ಗೆ ಕೊಡುಗೆ
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಆಭರಣ ಮಳಿಗೆಯೊಂದರ ಮಾಲಕ, ಚಿನ್ನದ ಬೆಲೆ ಕೊಂಚ ಕಡಿಮೆಯಾಗಿರುವುದರಿಂದ ಅಕ್ಷಯ ತೃತೀಯಾ ದಿನ ಖರೀದಿಸು ವವರ ಸಂಖ್ಯೆ ಹೆಚ್ಚಿರಬಹುದು. ಮುಂಗಡ ಬುಕ್ಕಿಂಗ್‌ ಮಾಡಿ ದವರಿಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಿರುವ ಹಿನ್ನೆಲೆಯಲ್ಲಿ ಹಲವಾರು ಗ್ರಾಹಕರು ಮುಂಗಡ ಬುಕ್ಕಿಂಗ್‌ ಮಾಡಿದ್ದಾರೆ ಎಂದಿದ್ದಾರೆ.

Advertisement

ಗುಣಮಟ್ಟ, ಕೊಡುಗೆ ನೋಡಿ ಖರೀದಿ
“ಉತ್ತಮ ಗುಣಮಟ್ಟ ಹಾಗೂ ಕೊಡುಗೆಗಳನ್ನು ನೀಡುವ ಮಳಿಗೆಯಿಂದ ಆಭರಣ ಖರೀದಿಸುವ ಉತ್ಸಾಹದಲ್ಲಿದ್ದೇವೆ. ಪ್ರತಿ ವರ್ಷ ಅಕ್ಷಯ ತೃತೀಯಾ ದಂದು ಆಭರಣ ಖರೀದಿಸುತ್ತೇವೆ. ಸಂಪತ್ತು ವೃದ್ಧಿಯ ಬಗ್ಗೆ ತಿಳಿದಿಲ್ಲ. ಆದರೆ ವೃದ್ಧಿಸುವ ನಂಬಿಕೆಯಿಂದ ಆಭರಣ ಖರೀದಿ ಮಾಡುತ್ತೇವೆ.
-ದೀಪಾ,ಗ್ರಾಹಕಿ

Advertisement

Udayavani is now on Telegram. Click here to join our channel and stay updated with the latest news.

Next