Advertisement

ತಂಬಾಕು ಉತ್ಪನ್ನ ಸಂಪೂರ್ಣ ನಿಷೇಧಿಸಲಿ

02:43 PM Jun 01, 2018 | |

ದಾವಣಗೆರೆ: ಸರ್ಕಾರ ದಿಟ್ಟ ನಿಲುವು ತಳೆದು ತಂಬಾಕು, ಉತ್ಪನ್ನಗಳನ್ನು ಸಂಪೂರ್ಣ ನಿಷೇಧಿಸುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಎಸ್‌.ಎಚ್‌.ಹೊಸಗೌಡರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಅಥಣಿ ಸಂಯುಕ್ತ
ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ತಂಬಾಕು ಸೇವನೆ ವಿರುದ್ಧ ಅನೇಕ ಕಾನೂನುಗಳ ಜಾರಿ ಮಾಡಿ, ದಂಡ ವಿಧಿಸುತ್ತದೆ. ಆದರೆ, ಕಾನೂನು ಮಾಡುವುದರಿಂದ, ದಂಡ ವಿಧಿಸುವುದರಿಂದ ಪ್ರಯೋಜನವಿಲ್ಲ ಎಂದು ತಿಳಿಸಿದರು.

 ಸರ್ಕಾರ ಯಾವುದೇ ಕಾರಣಕ್ಕೂ ತಂಬಾಕು ಬೆಳೆಗೆ ಪ್ರೋತ್ಸಾಹಿಸಬಾರದು. ಸರ್ಕಾರ ಒಂದೆಡೆ ತಂಬಾಕು ಸೇವನೆ ಬೇಡ ಎನ್ನುತ್ತದೆ. ಮತ್ತೂಂದೆಡೆ‌ ತಂಬಾಕು ಅಭಿವೃದ್ಧಿ ಮಂಡಳಿ ಸ್ಥಾಪಿಸುತ್ತದೆ. ಇಂತಹ ವೈರುಧ್ಯಗಳಿಂದ ಹೊರಬಂದು ತಂಬಾಕನ್ನು ಸಂಪೂರ್ಣ ನಿಷೇಧಿಸುವ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದರು.

ಯುವ ಪೀಳಿಗೆ ದುಶ್ಚಟಗಳ ದಾಸರಾಗದೆ ಸಂಸ್ಕಾರಯುತ ಜೀವನ ರೂಢಿಸಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ಅರಿತು ದುಶ್ಚಟಗಳಿಂದ ದೂರವಿದ್ದರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ನಾಗರಿಕರಲ್ಲಿ ಅರಿವು, ಜಾಗೃತಿ ಮೂಡಿಸಿ ದುಶ್ಚಟದಿಂದ ಹೊರ ಬರಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಭಯಂಕರ ಕ್ಯಾನ್ಸರ್‌ಗೆ ಕಾರಣವಾಗುವ ತಂಬಾಕನ್ನು ಹಲವಾರು ವಿಧದಲ್ಲಿ ಜನರು ಸೇವಿಸುತ್ತಾರೆ. ಬೀಡಿ, ಸಿಗರೇಟು, ಗುಟ್ಕಾ, ಚುಟ್ಟಾ ಮುಂತಾದ ರೀತಿಯಲ್ಲಿ ಅನಾದಿ ಕಾಲದಿಂದಲೂ ಸೇವಿಸುತ್ತಾ ಬಂದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತಿ ಬಂದಿದೆ. ವಿದ್ಯಾರ್ಥಿ, ಯುವ ಸಮೂಹ ತಂಬಾಕಿನಿಂದ ದೂರವಿದ್ದು ಪೋಷಕರು, ಸ್ನೇಹಿತರು, ನೆರೆಹೊರೆಯವರನ್ನು ತಂಬಾಕು ಸೇವನೆಯಿಂದ ವಿಮುಖವಾಗುವಂತೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮನವಿ
ಮಾಡಿದರು.

Advertisement

ಈ ಬಾರಿಯ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಸಂದೇಶ ತಂಬಾಕಿನಿಂದ ಹೃದಯ ಖಾಯಿಲೆಗಳು… ಎಂಬುದಾಗಿದೆ. ತಂಬಾಕಿನಿಂದ ಹೃದಯ, ಶ್ವಾಸಕೋಶ, ಕರುಳು, ಕಿಡ್ನಿ ಎಲ್ಲಾ ಅಂಗಾಂಗಳಿಗೂ ತೊಂದರೆ ಆಗುತ್ತದೆ.
ಹಾಗಾಗಿ ಜನರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ತಂಬಾಕು ಸೇವಿಸುವವರಿಗೆ ಕ್ಯಾನ್ಸರ್‌ ಕಟ್ಟಿಟ್ಟ ಬುತ್ತಿ. ಹಾಗಾಗಿ ಇಂತಹ ಕ್ಯಾನ್ಸರಕಾರಕ ತಂಬಾಕಿನಿಂದ ದೂರವಿದ್ದರಷ್ಟೇ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರಪಂಚದಲ್ಲಿ ಪ್ರತಿವರ್ಷ 55 ಲಕ್ಷ ಜನರು ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ತಂಬಾಕಿಗೆ ಬಲಿಯಾಗುತ್ತಿದ್ದಾರೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ. ಎಚ್‌.ಲೋಕಿಕೆರೆ ಸಿದ್ದಪ್ಪ ಮಾತನಾಡಿ, ಎಲ್ಲರಲ್ಲಿ ಆರೋಗ್ಯಕರ ಚಟಗಳು ಇರಲಿ. ದುಶ್ಚಟಗಳು ಬೇಡ. ಓದಬೇಕು.. ಸಾಧಿಸಬೇಕು.. ಆರೋಗ್ಯವಾಗಿರಬೇಕು ಎಂಬ ಚಟಗಳಿರಲಿ. ಮನಸ್ಸಿಗೆ-ಆರೋಗ್ಯಕ್ಕೆ ವಿರುದ್ಧವಾದ ಚಟಗಳು ಬೇಡ. ಉನ್ನತ ಸಾಧನೆಯ ಹಠದ ಚಟವಿರಲಿ ಎಂದು ತಿಳಿಸಿದರು. 

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣ್‌ಕುಮಾರ್‌, ಕಾಲೇಜಿನ ಪ್ರಾಚಾರ್ಯ ಕೆ.ರಾಜಶೇಖರ್‌ ಇತರರು ಇದ್ದರು. ಸೋನು ಸ್ವಾಗತಿಸಿದರು.ಭಾವನಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next