ಹುಣಸೂರು: ತಂಬಾಕಿಗೆ ಉತ್ತಮ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಹುಣಸೂರು ಉಪವಿಭಾಗ ವ್ಯಾಪ್ತಿಯ ತಂಬಾಕು ಬೆಳೆಗಾರರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಎದುರು ರೈತ ಸಂಘ, ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರೈತಸಂಘ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಂಬಾಕು ಹರಾಜು ಮಾರುಕಟ್ಟೆಆರಂಭಗೊಂಡು ತಿಂಗಳೊಳಗೆ ಸರಾಸರಿ ದರ ಪಾತಾಳಕ್ಕೆ ಕಸಿದಿದ್ದು, ಇದು ಹೀಗೆಮುಂದುವರಿದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ ಕೇಂದ್ರದೊಂದಿಗೆ ಮಾತನಾಡಿ ಉತ್ತಮ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಸಂಸದ ಪ್ರತಾಪ್ ಸಿಂಹ ವಿದೇಶ ಕಂಪನಿಗಳನ್ನು ಕರೆತರುವ ಮಾತನಾಡುತ್ತಲೇ ಇದ್ದಾರೆ. ಹರಾಜಿಲ್ಲಿ ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಭಾಗವಹಿಸುತ್ತಿದ್ದು, ಸಂಸದರ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ದೂರಿದರು.
ರೈತ ಮುಖಂಡ ಲೋಕೇಶ್‌ರಾಜೇ ಅರಸ್ ಮಾತನಾಡಿ, ತಂಬಾಕು ರಫ್ತಿಗೆ ವಿಧಿಸುವ ತೆರಿಗೆಯನ್ನು ರದ್ದುಪಡಿಸಿದರೆ ವಿದೇಶಿ ಕಂಪನಿಗಳು ಭಾಗವಹಿಸುವ ಸಾಧ್ಯತೆ ಇದೆ. ಕೇಂದ್ರ ವಾಣಿಜ್ಯ ಸಚಿವಾಲಯ ಈ ಕುರಿತು ಗಮನ ಹರಿಸಬೇಕು ಎಂದು ಆಗ್ರಹಿಸಿದರು. ನಂತರ ಉಪವಿಭಾಗಾಧಿಕಾರಿ ಬಿ.ಎನ್.ವೀಣಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಗ್ರಹಾರ ರಾಮೇಗೌಡ, ಹೊಸಕೋಟೆ ಬಸವರಾಜು, ಮೋದೂರು ಶಿವಣ್ಣ, ಸರಗೂರು ನಟರಾಜ್, ಬೆಂಕಿಪುರ ಚಿಕ್ಕಣ್ಣ, ರಾಮಕೃಷ್ಣ, ದೇವೇಂದ್ರ, ವಸಂತಮ್ಮ, ಪುಟ್ಟಸ್ವಾಮಿ, ಗಜೇಂದ್ರ ಸೇರಿದಂತೆ ಉಪವಿಭಾಗ ವ್ಯಾಪ್ತಿಯ ತಂಬಾಕು ಬೆಳೆಗಾರರು ಉಪಸ್ಥಿತರಿದ್ದರು.