ಪಿರಿಯಾಪಟ್ಟಣ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಂಬಾಕು ಪರವಾನಗಿ ಪುಸ್ತಕವನ್ನು ತಡೆ ಹಿಡಿಯಲಾಗಿದೆ. ಈ ಬಗ್ಗೆ ರೈತರು ಆತಂಕಪಡಬೇಕಿಲ್ಲ ಎಂದು ತಂಬಾಕು ಮಂಡಳಿಯ ವಲಯ ವ್ಯವಸ್ಥಾಪಕ ಎಸ್.ಎಸ್.ಪಾಟೀಲ್ ತಿಳಿಸಿದ್ದಾರೆ.
ಪಟ್ಟಣದ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಯಲ್ಲಿ ತಂಬಾಕು ರೈತರ ಪಾಸ್ ಪುಸ್ತಕ ತಡೆ ಹಿಡಿದಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕದ ತಂಬಾಕಿಗೆ ಇರುವ ಬೇಡಿಕೆಯನ್ನು ಆಧರಿಸಿ ಮಂಡಳಿಯು 2018-19 ಸಾಲಿನಲ್ಲಿ 95 ಮಿಲಿಯನ್ ಕೆ.ಜಿ.ಉತ್ಪಾದನಾ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಆದರೆ, ರಾಜ್ಯದಲ್ಲಿ ಕೇವಲ 85 ಮಿಲಿಯನ್ ಕೆ.ಜಿ.ತಂಬಾಕು ಉತ್ಪಾದನೆಯಾಗಿದೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಅಕ್ರಮ ಮಾರಾಟಗಾರರ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ನೈಜ ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ಈ ವರೆಗೂ ತಂಬಾಕು ಬೆಳೆಯುತ್ತಿದ್ದು ಪರವಾನಗಿ ಹೊಂದಿರದ ಕಾರ್ಡ್‌ದಾರರಿಗೆ ಹಸ್ತಾಂತರಿಸುವ ಉದ್ದೇಶದಿಂದ ತಂಬಾಕು ಮಂಡಳಿ ಈ ದಿಟ್ಟ ಹೆಜ್ಜೆ ಇಟ್ಟಿದೆ.
ಈ ಹಿಂದೆಯೂ ಆಂಧ್ರಪ್ರದೇಶದಲ್ಲಿ ತಂಬಾಕು ಮಂಡಳಿಯ ಆಯುಕ್ತರಾದ ಸುನೀತಾ ಎಂಬುವವರು 10885 ಬ್ಯಾರೆನ್ ಲೈಸೆನ್ಸ್ ತಡೆಹಿಡಿಯುವ ಮೂಲಕ ಅಲ್ಲಿನ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನಿಜವಾದ ರೈತರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು. ರಾಜ್ಯದಲ್ಲಿಯೂ ಈ ದಿಟ್ಟ ನಿಲುವು ತಾಳಿ ನೈಜ್ಯ ರೈತರಿಗೆ ಭದ್ರತೆ ಒದಗಿಸಲಾಗುತ್ತದೆ.
ಪಿರಿಯಾಪಟ್ಟಣ, ರಾಮನಾಥಪುರ, ಅರಕಲಗೂಡು, ಹೆಗ್ಗಡದೇವನ ಕೋಟೆ, ಹುಣಸೂರು ಸೇರಿದಂತೆ ಎಲ್ಲಾ ಭಾಗದಲ್ಲೂ ಪಾಸ್ ಪುಸ್ತಕ ತಡೆ ಹಿಡಿಯವಾಗಿದೆ. ಇನ್ನು ಸರ್ವೆ ಕಾರ್ಯ ಪ್ರಗತಿಯಲ್ಲಿರುವ ಕಾರಣ ನಿಖರ ಮಾಹಿತಿ ಲಭ್ಯವಾಗಿಲ್ಲ, ಒಂದು ವೇಳೆ ನಿಜವಾದ ರೈತರ ಪಾಸ್ ಪುಸ್ತಕ ತಡೆಯಾಗಿದ್ದರೆ ತಮ್ಮ ಪಾಸ್‌ಬುಕ್ ಮತ್ತು ಜಮೀನಿನ ಸರ್ವೆ ನಂಬರ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಿ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿಗೆ ದೂರು ಸಲ್ಲಿಸಿದರೆ ಪುಸ್ತಕ ನೀಡಲಾಗುವುದು.
ಈ ಕುರಿತು ಮಧ್ಯವರ್ತಿಗಳು ಬೆದರಿಕೆ ಹಾಕಿದರೆ 9448280151, 9448495502 ಇವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.