Advertisement

ತಂಬಾಕು ಸೇವನೆಯಿಂದ ಮಾರಣಾಂತಿಕ ಕಾಯಿಲೆ

04:33 PM Jul 20, 2019 | Suhan S |

ಗದಗ: ತಂಬಾಕು ಸೇವನೆಯಿಂದ ಕ್ಯಾನ್ಸರ್‌, ಹೃದಯ, ಶ್ವಾಸ ಸಂಬಂಧಿ ಮಾರಣಾಂತಿಕ ರೋಗಗಳು ಬರುತ್ತವೆ. ತಂಬಾಕು ಸೇವನೆಗೆ ಸಂಬಂಧಿಸಿದ ಕಾಯಿಲೆಗಳಿಂದ ಪ್ರತಿವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಕುರಿತು ಯುವ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ. ಸಲಗರೆ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ಜಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಅಧಿನಿಯಮ ಕೋಟ್ಪಾ 2003 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತ ಮಂಜುನಾಥ ಬೊಮ್ಮನಕಟ್ಟಿ ಮಾತನಾಡಿ, ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನದಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ. ಶಾಲಾ ಆವರಣದಿಂದ 100 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಷಿದ್ದವಿದ್ದರೂ ಅಲ್ಲಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದರೆ ಮಕ್ಕಳ ಸಹಾಯವಾಣಿ ಕರೆ ಮಾಡಿ ಮಾಹಿತಿ ಒದಗಿಸಬಹುದಾಗಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ವಿರೂಪಾಕ್ಷರೆಡ್ಡಿ ಮಾದಿನೂರ ಮಾತನಾಡಿ, ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಸಮೀಕ್ಷಾಧಿಕಾರಿಗಳು ಹಾಗೂ ಎನ್‌ಟಿಸಿಪಿ ಕಾರ್ಯಕ್ರಮಾಧಿಕಾರಿ ಡಾ| ಸತೀಶ ಬಸರಿಗಿಡದ ಮಾತನಾಡಿ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಪಿಪಿಟಿ ಮುಖಾಂತರ, ತಾಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾಥಾ ಮುಖಾಂತರ, ಬೀದಿ ನಾಟಕ, ಗೋಡೆ ಬರಹ, ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುತ್ತದೆ ಎಂದು ವಿವರಿಸಿದರು.

Advertisement

ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಗೋಪಾಲ ಸುರಪುರ ಮಾತನಾಡಿ, ಕೋಟ್ಪಾ ಕಾಯ್ದೆ ಸೆಕ್ಷನ್‌ 4 ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

ತಂಬಾಕು ಸೇವನೆ ಕ್ಯಾನ್ಸರ್‌ಗೆ ಕಾರಣ:

ಧೂಮಸಹಿತ ತಂಬಾಕು ವಸ್ತು(ಸಿಗರೇಟ್)ಗಳಲ್ಲಿ 4000ಕ್ಕೂ ಹೆಚ್ಚು ರಾಸಾಯನಿಕ ಅಂಶಗಳು ಒಳಗೊಂಡಿದ್ದು, 60ಕ್ಕೂ ಹೆಚ್ಚು ರಾಸಾಯನಿಕ ಅಂಶಗಳು ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುತ್ತದೆ. ತಂಬಾಕು ಸೇವಿಸುವವರಲ್ಲಿ ಬಂಜೆತನ, ನಾನಾ ರೀತಿಯ ಕ್ಯಾನ್ಸರ್‌ ಹಾಗೂ ಡ್ರೈ ಗ್ಯಾಂಗ್ರಿಂಗ್‌ ನಂತಹ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಜಿಮ್ಸ್‌ ಆಸ್ಪತ್ರೆಯ ಡಾ| ಅರವಿಂದ ಕರಿನಾಗಣ್ಣವರ ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಇಂದಿನ ಯುವಕರು ಕೌಟುಂಬಿಕ ಹಿನ್ನೆಲೆ, ಸ್ನೇಹಿತರ ಪ್ರಭಾವ, ಕೆಲಸದ ಒತ್ತಡ ಹಾಗೂ ಮಾನಸಿಕ ಖನ್ನತೆಯಿಂದ ತಂಬಾಕು ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಬಾಯಿ ಕ್ಯಾನ್ಸರ್‌, ದಂತ ಕ್ಷಯ, ಗರ್ಭಪಾತ, ಗರ್ಭಧಾರಣೆಯಲ್ಲಿ ಕುಂಠಿತ, ಕಡಿಮೆ ತೂಕದ ಮಗುವಿನ ಜನನ ಮತ್ತಿತರೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next