Advertisement

ಸ್ಥಿರ ಬೆಲೆಯೂ ಸಿಗದೆ ರೈತ ಕಂಗಾಲು; ತಂಬಾಕು ಬೆಳೆಗಾರರ ಗೋಳು ಕೇಳೋರಿಲ್ಲ

04:05 PM Feb 16, 2023 | Team Udayavani |

ಅರಕಲಗೂಡು: ಅತಿವೃಷ್ಟಿ ಪರಿಣಾಮ ಹೊಗೆಸೊಪ್ಪು ಬೆಳೆಗಾರರಿಗೆ ಹಿಂದೆಂದೂ ಬಾ ಧಿಸದಷ್ಟು ಇಳುವರಿ ನಷ್ಟವಾಗಿದೆ. ರಾಮನಾಥಪುರ ತಂಬಾಕು ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಸಿಗುವ ಆಶಾಭಾವನೆಯಲ್ಲಿದ್ದ ಬೆಳೆಗಾರರ ಆಸೆ ಕಮರಿ ಹೋಗಿದೆ.245ಕ್ಕೆ ಕುಸಿತ: ಈ ಬಾರಿ ಮಾರುಕಟ್ಟೆ ಆರಂಭದ ಹರಾಜಿನಲ್ಲಿ ಗುಣಮಟ್ಟದ ಒಂದು ಕೇಜಿ ಹೊಗೆಸೊಪ್ಪು 165 ರಿಂದ 170 ರೂ.ಗೆ ಮಾರಾಟವಾಗಿತ್ತು.

Advertisement

ಇಳುವರಿ ಇಲ್ಲದ ಪರಿಣಾಮ ವರ್ತಕರು ಹೊಗೆಸೊಪ್ಪು ಖರೀದಿಗೆ ಮುಗಿಬಿದ್ದಿದ್ದರು. ಹೀಗಾಗಿ, ಮಾರುಕಟ್ಟೆ ದರ ಸುಧಾರಣೆ ಕಾಣಲಿದ್ದು, ಒಂದು ಕೇಜಿ 300 ರೂ. ಗಡಿ ದಾಟಿ ದಾಖಲೆ ದರ ದೊರಕಲಿದೆ ಎನ್ನುವ ಆಸೆ ರೈತರಲ್ಲಿ ಚಿಗುರೊಡೆದಿತ್ತು.ದುರಾದೃಷ್ಟವಶಾತ್‌ 300 ರೂ. ಗಡಿ ದಾಟುವುದಿರಲಿ, ಸ್ಥಿರ ಬೆಲೆ ಕೂಡ ಉಳಿಯಲಿಲ್ಲ. 270ಕ್ಕೆ ಮಾರಾಟ ಆಗುತ್ತಿದ್ದ ಬೆಲೆ 245ಕ್ಕೆ ಕುಸಿತ ಕಂಡಿತು.

ರೈತರ ಗೋಳು ಕೇಳುವವರಿಲ್ಲ: ಬೆಲೆ ಏರಿಕೆ ಆಗುವ ನಿರೀಕ್ಷೆಯಲ್ಲಿ ಬೆಳೆಗಾರರು ಮಾರುಕಟ್ಟೆಗೆ ಬೇಲ್‌ ಗಳನ್ನು ಮಾರಾಟಕ್ಕೆ ತರದೇ ಮನೆಗಳಲ್ಲಿಯೇ ದಾಸ್ತಾನು ಮಾಡಿಟ್ಟಿದ್ದರು. ಕಡೇ ಹಂತದ ಮಾರುಕಟ್ಟೆ ಹರಾಜಿನಲ್ಲಿ ಬೆಲೆ ಏರಿಕೆಯಾಗುವ ನಿರೀಕ್ಷೆ ಹೊಂದಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿ ಮತ್ತೆ ಬೆಲೆ ಕುಸಿತ ವಾಗಿದ್ದು, ವರ್ತಕರು 237 ರೂ.ಗೆ ಖರೀದಿಸುತ್ತಿದ್ದು, ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ.

ಒಟ್ಟು ಖರೀದಿ, ವಹಿವಾಟು: ಪ್ರಸಕ್ತ ಸಾಲಿಗೆ ರಾಮನಾಥಪುರ ತಂಬಾಕು ಮಾರುಕಟ್ಟೆಯ ಫ್ಲಾಟ್‌ ಫಾರಂ 7ರಲ್ಲಿ 5.8 ಮಿಲಿಯನ್‌ ಕೇಜಿ ಹೊಗೆಸೊಪ್ಪು ಖರೀದಿಸುವ ಗುರಿ ಹೊಂದಲಾಗಿತ್ತು. ಇಳುವರಿ ಕುಂಠಿತಗೊಂಡು ಸದ್ಯಕ್ಕೆ 4.3 ಮಿಲಿಯನ್‌ ಕೇಜಿ ಖರೀದಿಸಲಾಗಿದೆ. 96.59 ಕೋಟಿ ರೂ. ವಹಿವಾಟು ನಡೆದಿದೆ. ಗರಿಷ್ಠ 270 ರೂ., ಕನಿಷ್ಠ 110 ರೂ. ಮತ್ತು ಸರಾಸರಿ 239 ರೂ. ದರ ದೊರೆತಿದೆ.

ಕಳೆದ ವರ್ಷದ ಹರಾಜು ಪ್ರಕ್ರಿಯೆಯಲ್ಲಿ 6.43 ಮಿಲಿಯನ್‌ ಕೇಜಿ ಖರೀದಿಸಿದ್ದು 100.34 ಕೋಟಿ ರೂ. ವಹಿವಾಟು ನಡೆದಿತ್ತು. 206 ರೂ. ಗರಿಷ್ಠ, 27 ರೂ. ಕನಿಷ್ಠ, 160 ರೂ. ಸರಾಸರಿ ಬೆಲೆ ಸಿಕ್ಕಿತ್ತು. ಮತ್ತೊಂದು ಮಾರುಕಟ್ಟೆ ಪ್ಲಾಟ್‌ ಫಾರಂ 63ರಲ್ಲಿ ಪ್ರಸ್ತಕ ಸಾಲಿಗೆ 4.3 ಮಿಲಿಯನ್‌ ಕೇಜಿ ಹೊಗೆಸೊಪ್ಪು ಖರೀದಿಸುವ ಗುರಿ ಹೊಂದಲಾಗಿತ್ತು. ಪ್ರಸ್ತುತ 3.21 ಮಿಲಿಯನ್‌ ಕೇಜಿ ಹೊಗೆಸೊಪ್ಪು ಖರೀದಿಸಲಾಗಿದ್ದು, 76.76 ಕೋಟಿ ರೂ. ವಹಿವಾಟು ಆಗಿದೆ. 270 ರೂ. ಗರಿಷ್ಠ, 150 ರೂ. ಕನಿಷ್ಠ ಹಾಗೂ ಸರಾಸರಿ 238 ರೂ. ದರ ಸಿಕ್ಕಿದೆ.

Advertisement

3 ಮಿಲಿಯನ್‌ ಕೇಜಿ ಸೊಪ್ಪು ಕುಂಠಿತ: ಕಳೆದ ವರ್ಷ 4.83 ಮಿಲಿಯನ್‌ ಮಾರಾಟವಾಗಿ 76.84 ಕೋಟಿ ರೂ. ವಹಿವಾಟು ನಡೆದಿತ್ತು. 196 ರೂ. ಗರಿಷ್ಠ, 100 ರೂ. ಕನಿಷ್ಠ ಮತ್ತು 154 ರೂ. ಸರಾಸರಿ ದರ ದೊರೆತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಅಂದಾಜು ಮೂರು ಮಿಲಿಯನ್‌ ಕೇಜಿ ಹೊಗೆಸೊಪ್ಪು ಇಳುವರಿ ಕುಂಠಿತಗೊಂಡಿದೆ.

ವೆಚ್ಚದ ಹೊಡೆತ: ಪ್ರಸಕ್ತ ವರ್ಷ ಅತಿವೃಷ್ಟಿ ಪರಿಣಾಮ ಇಳುವರಿ ಇಲ್ಲವಾಗಿ ರೈತರು ಹೊಗೆಸೊಪ್ಪು ಬೆಳೆಗೆ ವ್ಯಯಿಸಿದ್ದ ವೆಚ್ಚ ಕೂಡ ಭರಿಸಲಾಗುತ್ತಿಲ್ಲ. ತಂಬಾಕು ನಾಟಿ ಮಾಡಿದ ನಂತರ ಸಾಲ ಮಾಡಿ ರೈತರು ರಸಗೊಬ್ಬರ ನೀಡಿದ್ದರು. ಬೆಳವಣಿಗೆ ಹಂತದಲ್ಲಿ ಶುರುವಾದ ಮಳೆ, ಬೆಳೆ ಕಟಾವು ಮುಗಿಯುವ ತನಕ ಬಿಡುವಿಲ್ಲದೆ ಸುರಿಯಿತು.ಅತಿವೃಷ್ಟಿಗೆ ಸಿಲುಕಿ ಬಹುತೇಕ ಬೆಳೆ ನಾಶವಾಯಿತು.ಇದೀಗ ಅತಿವೃಷ್ಟಿ ಪರಿಣಾಮಗಳನ್ನು ಎದುರಿಸಿ, ಉತ್ಪಾದಿಸಿದ್ದ ಕನಿಷ್ಠ ಪ್ರಮಾಣದ ತಂಬಾಕಿಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ.

ಹುಡಿ ಹೊಗೆಸೊಪ್ಪಿಗೆ ಖುದುರಿದ ದರ: ತಂಬಾಕು ಉತ್ಪಾದಿಸಿ ಬೇಲ್‌ ಸಿದ್ಧಪಡಿಸಿದ ನಂತರ ಸಿಗುವ ಹೊಗೆಸೊಪ್ಪು ಹುಡಿಗೂ ಈ ಬಾರಿ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿತ್ತು. ಅತಿವೃಷ್ಟಿಗೆ ಇಳುವರಿ ಕುಂಠಿತ ಗೊಂಡಿದ್ದರಿಂದ ಮಾರುಕಟ್ಟೆಯಲ್ಲಿ ಹುಡಿ ಬೇಲ್‌ ಗಳನ್ನು ಖರೀದಿಸಲಾಯಿತು. ಸಾಮಾನ್ಯವಾಗಿ ಕೇಳು ವವರೇ ಇಲ್ಲದೆ ಹುಡಿ ಸೊಪ್ಪು ಬಿಸಾಡಲಾಗುತ್ತಿತ್ತು. ಹಳ್ಳಿಗಳಲ್ಲಿ ಟಂ ಟಂ ಗಾಡಿ ತೆಗೆದುಕೊಂಡು ಹೋಗಿ ದಲ್ಲಾಳಿಗಳು, ಸಣ್ಣ ವ್ಯಾಪಾರಿಗಳು ರೈತರಿಂದ ಹುಡಿ ಹೊಗೆಸೊಪ್ಪನ್ನು ಒಂದು ಕೇಜಿಗೆ ಕೇವಲ 10ರಿಂದ 12 ರೂ.ಗೆ ಖರೀದಿಸುತ್ತಿದ್ದರು.

ಚಾಮರಾಜನಗರ, ಗುಂಡ್ಲುಪೇಟೆ ಭಾಗದಲ್ಲಿ ಬೀಡಿ ಕಟ್ಟಲು ಕೊಂಡೊಯ್ಯುತ್ತಿದ್ದ ಹುಡಿ ಸೊಪ್ಪಿಗೆ ಬೇಡಿಕೆ ಬಾರದ ಕಾರಣ, ಹಳ್ಳಿ ಹಳ್ಳಿಗಳಲ್ಲಿ ಪ್ರತಿ ವರ್ಷ ಇವರು ವ್ಯಾಪಾರದ ದಂಧೆ ಮಾಡಿಕೊಂಡಿದ್ದರು. ಅದೃಷ್ಟವಶಾತ್‌ ಈ ಬಾರಿ ಮಾರುಕಟ್ಟೆಯಲ್ಲಿ ಒಂದು ಕೇಜಿ ಹುಡಿ ಹೊಗೆಸೊಪ್ಪು ಬರೋಬರಿ 80 ರೂ.ಗೆ ಮಾರಾಟವಾಗಿ ಬೆಳೆಗಾರರು ಹುಬ್ಬೇರುವಂತೆ ಮಾಡಿತ್ತು. ಅಲ್ಲದೆ, ಆರಂಭದಲ್ಲಿ ಬೀದಿ ವ್ಯಾಪಾರಿಗಳಿಗೆ 10ರಿಂದ 12 ರೂ.ಗೆ ಹುಡಿ ಸೋಪ್ಪು ಮಾರಾಟ ಮಾಡಿದ್ದ ರೈತ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಹೊಗೆಸೊಪ್ಪಿಗೆ ವಿದೇಶದಲ್ಲಿ ಉತ್ತಮ ಬೆಲೆ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾತ್ರ ಬೇಕಾಬಿಟ್ಟಿ ಬೆಲೆಗೆ ಖರೀದಿಸಲಾಗುತ್ತಿದೆ. ಬೆಳೆಗಾರರು ಬೆಲೆ ಕುಸಿತದಿಂದ ತತ್ತರಿಸಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರವಿಗೆ ಬರುತ್ತಿಲ್ಲ. ಬೆಳೆಗಾಗಿ ಖರ್ಚು ಮಾಡಿದ ಹಣ ಕೂಡ ಸಿಗುತ್ತಿಲ್ಲ. ಕಷ್ಟಪಟ್ಟು ಹೊಗೆಸೊಪ್ಪು ಬೆಳೆದ ರೈತರು ಆರ್ಥಿಕವಾಗಿ ಸಬಲರಾಗುತ್ತಿಲ್ಲ. ಇದೇ ತಂಬಾಕು ಖರೀದಿಸುವ ಕಾರ್ಪೊರೇಟ್‌ ಕಂಪನಿಗಳು ಶ್ರೀಮಂತವಾಗುತ್ತಿವೆ.
●ಯೋಗಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ

ಅತಿವೃಷ್ಟಿ ಪರಿಣಾಮ ಈ ಬಾರಿ 5.8 ಮಿಲಿಯನ್‌ ಕೇಜಿ ತಂಬಾಕು ಖರೀದಿಸುವ ಗುರಿ ಇತ್ತು. ಸದ್ಯಕ್ಕೆ 4.1 ಮಿಲಿಯನ್‌ ಮಾರಾಟವಾಗಿದೆ. ಅತಿ ಮಳೆಯಿಂದ ಹೊಗೆಸೊಪ್ಪು ತೂಕದಲ್ಲಿ ಇಳಿಕೆಯಾಗಿದೆ. ಆರಂಭದ ಹರಾಜು ಪ್ರಕ್ರಿಯೆಯಲ್ಲಿ ತಂಬಾಕಿಗೆ ಉತ್ತಮ ಬೇಡಿಕೆ ಬಂದಿದೆ. ಒಂದು ಕೇಜಿಗೆ 265 ರಿಂದ 270 ರೂ. ದಾಖಲೆ ಮಟ್ಟದ ಬೆಲೆ ನೀಡಲಾಗಿತ್ತು. ಉತ್ತಮ ಬೆಲೆ ಇದ್ದಾಗ ಬೆಳೆಗಾರರು ಹೊಗೆಸೊಪ್ಪು ಮಾರಾಟ ಮಾಡಿಕೊಳ್ಳುವಂತೆ ಹೇಳಿದರೂ, ಬೇಲ್‌ಗ‌ಳನ್ನು ತರಲು ಹಿಂದೇಟು ಹಾಕಿದರು. ಮಾರುಕಟ್ಟೆ ಹರಾಜು ಮುಕ್ತಾಯ ಹಂತದಲ್ಲಿದೆ. ಎಲ್ಲಾ ರೈತರು ಬೇಲ್‌ ಗಳನ್ನು ತಂದು ಮಾರಾಟ ಮಾಡಿಕೊಳ್ಳಬೇಕು.
● ಐಸಾಕ್‌ ಸೊರೆನ್‌ ದತ್ತ, (ಫ್ಲಾಟ್‌ ಫಾರಂ 07),ನಿವೇಶ್‌ ಕುಮಾರ್‌ ಪಾಂಡೆ, (ಫ್ಲಾಟ್‌ ಫಾರಂ 63) ಮಾರುಕಟ್ಟೆ ಹರಾಜು ಅಧೀಕ್ಷಕರು.

ವಿಜಯ್‌ಕುಮಾರ್‌

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next