ನಾಮ ನಿರ್ದೇಶನ ಮಾಡಿದ ವ್ಯಕ್ತಿಗೆ ಹಣವೇನೋ ಕೊಡಲ್ಪಡುತ್ತದೆ. ಆದರೆ, ಆ ಹಣಕ್ಕೆಲ್ಲಾ ಅವನೊಬ್ಬನೇ ಹಕ್ಕುದಾರನೇ? ಮೃತ ವ್ಯಕ್ತಿಗೆ ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿಯಲ್ಲದೆ ಬೇರೆ ವಾರಸುದಾರರಿದ್ದ ಪಕ್ಷದಲ್ಲಿ, ಅವರುಗಳಿಗೂ ಹಣ ಸೇರಬೇಕಾಗಿಲ್ಲವೇ?
ಇದನ್ನು ತಿಳಿದುಕೊಳ್ಳಬೇಕಾದರೆ, ನಾಮಿನೇಷನ್‌ನ ಇತಿಮಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನಾಮಿನೇಷನ್ ಎಂಬುದು ಸುಲಭವಾಗಿ, ಶೀಘ್ರವಾಗಿ ಹಣಸಂದಾಯ ಮಾಡಿ, ತಮ್ಮ ಜವಾಬ್ದಾರಿಯನ್ನು ತೊಡೆದುಕೊಳ್ಳಲು ಇರುವ ಒಂದು ಉಪಾಯ ಅಥವಾ ಸಾಧನ. ಅದು ಇತರೆ ವಾರಸುದಾರರ ಹಕ್ಕನ್ನು ಮೊಟಕು ಮಾಡುವುದಿಲ್ಲ ಅಥವಾ ಅಳಿಸುವುದಿಲ್ಲ. ಎಲ್ಲಾ ವಾರಸುದಾರರ ಪರವಾಗಿ ಒಬ್ಬ ವಾರಸುದಾರ ಹಣ ಪಡೆದುಕೊಂಡು, ಹಣ ಸಂದ ರಶೀದಿ ಕೊಡಲು ಇರುವ ಸೌಲಭ್ಯ ಮಾತ್ರ. ಹಣ ಪಡೆದುಕೊಂಡ ವ್ಯಕ್ತಿಯಿಂದ ಮಿಕ್ಕ ವಾರಸುದಾರರು ತಮ್ಮ ತಮ್ಮ ಪಾಲನ್ನು ಪಡೆದುಕೊಳ್ಳಬಹುದು. ನಾಮ ನಿರ್ದೇಶನವು ಯಾವತ್ತೂ ಉಯಿಲಿನ ಅರ್ಹತೆಯನ್ನು ಪಡೆಯುವುದಿಲ್ಲ. ಮೃತವ್ಯಕ್ತಿ ಉಯಿಲನ್ನು ಬರೆದಿದ್ದು, ಅದರಲ್ಲಿ ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿಗೆ ಎಲ್ಲಾ ಹಣ ಹೋಗಬೇಕೆಂದು ಸೂಚಿಸಿದ್ದರೆ ಮಾತ್ರ, ಇತರೆ ವಾರಸುದಾರರಿಗೆ ಪಾಲು ಸಿಕ್ಕುವುದಿಲ್ಲ. ಅಂದರೆ, ಉಯಿಲಿನಲ್ಲಿ ಯಾವ ವ್ಯಕ್ತಿಗೆ ಆಸ್ತಿ ಬರೆದು ಕೊಡಲ್ಪಟ್ಟಿದೆಯೋ ಆ ವ್ಯಕ್ತಿ ಮಾತ್ರ ಆ ಆಸ್ತಿಗೆ ಸಂಪೂರ್ಣ ಹಕ್ಕುದಾರನಾಗುತ್ತಾನೆ.
ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿ, ತನ್ನ ಮತ್ತು ಮಿಕ್ಕೆಲ್ಲ ವಾರಸುದಾರರ ಪರವಾಗಿ ಹಣ ಪಡೆಯುವ ಅಧಿಕಾರ ಹೊಂದಿರುತ್ತಾನೆ ಮತ್ತು ಹಾಗೆ ಪಡೆದ ಹಣವನ್ನು ಇತರೆ ವಾರಸುದಾರರಿಗೆ ಹಂಚಲು ಬದ್ಧನಾಗಿರುತ್ತಾನೆ. ಉದಾಹರಣೆಗೆ, ಒಬ್ಬ ವ್ಯಕ್ತಿ ತನ್ನ ಜೀವವಿಮಾ ಪಾಲಿಸಿಯ ಹಣವನ್ನು ತನ್ನ ದೊಡ್ಡ ಮಗನಿಗೆ ಕೊಡಬೇಕೆಂದು ನಾಮನಿರ್ದೇಶನ ಮಾಡಿದ್ದಾನೆ ಎಂದಿಟ್ಟುಕೊಳ್ಳಿ. ಅದೇ ವ್ಯಕ್ತಿ ತನ್ನ ಉಯಿಲನ್ನು ಬರೆದು, ಅದರಲ್ಲಿ ತನ್ನ ಜೀವವಿಮಾ ಪಾಲಿಸಿಯ ಹಣವೆಲ್ಲಾ ತನ್ನ ಹೆಂಡತಿಗೆ ಹೋಗಬೇಕೆಂದು ಬರೆದಿದ್ದರೆ, ದೊಡ್ಡ ಮಗನಿಗೆ ಕೇವಲ ಹಣ ಪಡೆಯಲು ಮಾತ್ರ ಅಧಿಕಾರವಿರುತ್ತದೆ. ಹಾಗೆ ಪಡೆದ ಹಣವನ್ನು ತನ್ನ ತಾಯಿಗೆ ಕೊಡಲು ಬದ್ಧನಾಗಿರುತ್ತಾನೆ.
ಈಗ ಒಂದು ಪ್ರಶ್ನೆ: ಮೇಲಿನ ಉದಾಹರಣೆಯಲ್ಲಿ ಉಯಿಲನ್ನು ಮೊದಲು ಬರೆದಿದ್ದು, ನಾಮನಿರ್ದೇಶನ ನಂತರ ಮಾಡಿದ್ದರೆ, ಆಗಲೂ ಮಗನಿಗೆ ಪಾಲು ಸಿಗುವುದಿಲ್ಲವೇ?
ಉತ್ತರ: ಇಲ್ಲ, ಸಿಗುವುದಿಲ್ಲ. ಉಯಿಲಿನಲ್ಲಿ ಯಾವ ವ್ಯಕ್ತಿಗೆ ಆಸ್ತಿ ಕೊಡಲ್ಪಟ್ಟಿದೆಯೋ ಆ ವ್ಯಕ್ತಿ ಮಾತ್ರ ಆ ಆಸ್ತಿಗೆ ಸಂಪೂರ್ಣ ಹಕ್ಕುದಾರನಾಗಿರುತ್ತಾನೆ. ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿ ತಾನು ವಾರಸುದಾರನಾಗಿದ್ದರೆ, ತನ್ನ ಮತ್ತು ಮಿಕ್ಕೆಲ್ಲ ವಾರಸುದಾರರ ಪರವಾಗಿ ಹಣವನ್ನು ಪಡೆಯಲು ಸಂಪೂರ್ಣ ಅರ್ಹತೆ ಹೊಂದಿರುತ್ತಾನೆ. ಆ ಹಣವನ್ನು ಇತರ ವಾರಸುದಾರರಿಗೆ ಹಂಚುವುದೂ ಅವನ ಕರ್ತವ್ಯ ಆಗಿರುತ್ತದೆ. ಒಂದು ವೇಳೆ, ನಾಮನಿರ್ದೇಶನ ಮಾಡಲ್ಪಟ್ಟ ವ್ಯಕ್ತಿ ತಮ್ಮ ಪಾಲಿನ ಹಣವನ್ನು ಎತ್ತಿಹಾಕುವ ಸಂಭವ ಇದೆಯೆಂದು ಮನಗಂಡರೆ, ಇತರ ವಾರಸುದಾರರು ನ್ಯಾಯಾಲಯದ ಮೊರೆಹೊಕ್ಕು, ನಿರ್ಬಂಧಾಜ್ಞೆಯನ್ನು ಪಡೆಯಬಹುದು.