Advertisement

ಎಐಸಿಸಿ ಅಧ್ಯಕ್ಷ ಸ್ಥಾನ ಯಾವ ಜಾತಿಯವರಿಗೆಲ್ಲಾ ನೀಡಿದ್ದೀರಿ?: ಸಿದ್ದುಗೆ ಬಿಜೆಪಿ ಸವಾಲು

08:09 PM Jun 08, 2022 | Team Udayavani |

ಬೆಂಗಳೂರು: ಪಠ್ಯ ಪುಸ್ತಕ ವಿವಾದ, ಆರ್ ಎಸ್ ಎಸ್ ಕುರಿತಾಗಿನ ನಿರಂತರ ಟೀಕೆಗಳಿಗೆ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಗಳ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಿಗೆ ಕುಟುಕಿದೆ.

Advertisement

ಸಂಘದ ಪದಾಧಿಕಾರಿಗಳ ಸ್ಥಾನದಲ್ಲಿ ಒಂದೇ ಜಾತಿಯವರು ಇದ್ದಾರೆ ಎಂದು ವೃಥಾರೋಪ ಮಾಡುವ ಸಿದ್ದರಾಮಯ್ಯ ಅವರೇ ಎಐಸಿಸಿ ಅಧ್ಯಕ್ಷ ಸ್ಥಾನ ಯಾವ ಜಾತಿಯವರಿಗೆಲ್ಲಾ ನೀಡಿದ್ದೀರಿ? ʼಅವ್ವ-ಮಗʼ ನ ಜಾತಿಯವರಿಗೋ? ಕಾಂಗ್ರೆಸ್‌ ಪಕ್ಷಕ್ಕೆ ಅಷ್ಟೊಂದು ಬದ್ಧತೆ ಇದ್ದರೆ ಎಐಸಿಸಿ ಅಧ್ಯಕ್ಷ ಸ್ಥಾನ ದಲಿತರಿಗೆ ಬಿಟ್ಟು ಕೊಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬ ಹೊರತಾಗಿ ಅಧ್ಯಕ್ಷರು ನೇಮಕವಾಗಲಿ ಎಂಬ ವಾದ ಮುಂಚೂಣಿಗೆ ಬಂದಾಗ ಸಿದ್ದರಾಮಯ್ಯ ಮಾಡಿದ್ದೇನು? ಗಾಂಧಿ ಕುಟುಂಬ ಹೊರತುಪಡಿಸಿ ಅನ್ಯರಿಗೆ ಪಕ್ಷ ಮುನ್ನಡೆಸಲು ಸಾಧ್ಯವಿಲ್ಲ ಎಂದು ನೀವು ಪತ್ರ ಬರೆದಿದ್ದೇಕೆ? ಆಗ ಸಿದ್ದರಾಮಯ್ಯ ಅವರಿಗೇಕೆ ದಲಿತ ನಾಯಕರ ಹೆಸರು ನೆನಪಾಗಲಿಲ್ಲ? ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯ ಅವರೇ, ನೀವು ಗಾಜಿನ ಮನೆಯಲ್ಲಿ‌ ನಿಂತು ಇನ್ನೊಬ್ಬರತ್ತ ಕಲ್ಲು ಎಸೆಯುವುದು ಎಷ್ಟು ಸರಿ? 1998 ರಿಂದ ಇಲ್ಲಿಯವರೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದ ಸ್ಥಿತಿ ಹೇಗಿದೆ ಎಂದು ನೋಡಿದ್ದೀರಾ? ಅದನ್ನು ನೋಡಿಯೂ ಕಾಂಗ್ರೆಸ್‌ ಪಕ್ಷ ಒಬ್ಬರ ಸ್ವತ್ತಾ ಎಂದು ಪ್ರಶ್ನಿಸಿಲ್ಲವೇಕೆ? ಎಂದು ಫೋಟೋ ಸಮೇತ ಚಡ್ಡಿ ರಾಮಯ್ಯ ಎಂಬ ಹ್ಯಾಷ್ ಟ್ಯಾಗ್ ಬಳಸಿ ತಿರುಗೇಟು ನೀಡಿದೆ.

ಯೋಧರನ್ನು ಅತ್ಯಾಚಾರಿ ಎಂದವರು

Advertisement

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಉಣ್ಣಿಕೃಷ್ಣನ್ ಪಠ್ಯ ತಿರಸ್ಕರಿಸಿದರು.ಯೋಧರನ್ನು ಅತ್ಯಾಚಾರಿ ಎಂದು ಕಾಲೇಜಿನ ಪಠ್ಯ ಪುಸ್ತಕದಲ್ಲಿ ಬರೆದರು.ಭಾರತೀಯತೆಯನ್ನೇ ನಂಬದವರು. ಇದು ಸಿದ್ದರಾಮಯ್ಯ ಸರ್ಕಾರ ನೇಮಿಸಿದ ಬರಗೂರು ರಾಮಚಂದ್ರಪ್ಪ ಅವರ ಕಾರ್ಯವೈಖರಿ.ಈ ವಿಚಾರಗಳನ್ನು ಕಾಂಗ್ರೆಸ್ ಸರ್ಕಾರ ಒಪ್ಪಿದ್ದು ಹೇಗೆ? ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯ ಸರ್ಕಾರ ನೇಮಿಸಿದ ಬರಗೂರು ಸಮಿತಿ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಮೈಸೂರು ಒಡೆಯರ್ ವಂಶಸ್ಥರ ಪಠ್ಯಕ್ಕೆ ಕತ್ತರಿ ಹಾಕಿತ್ತು. ಅದೇ ಸಮಿತಿ ಟಿಪ್ಪುವನ್ನು ವೈಭವೀಕರಿಸಿ, ಹೆಚ್ಚಿನ ಪುಟ ಸೇರಿಸಿತ್ತು.ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಮೈಸೂರು ರಾಜ ಮನೆತನಕ್ಕೆ ಅವಮಾನ ಮಾಡಿದ್ದು ನಿಜವಲ್ಲವೇ?ಶಿಕ್ಷಣ ವಿರೋಧಿ ಕಾಂಗ್ರೆಸ್‌ ಎಂದು ಟ್ವೀಟ್ ಮಾಡಿದೆ.

ರಾಮಾಯಣದ ಬಗೆಗಿನ ಪಠ್ಯ ತೆಗೆದು ಇಸ್ಲಾಮಿಕ್ ಮತ್ತು ಸೂಫಿ ಪಂಥದ ಪಠ್ಯ ಸೇರಿಸಲಾಗಿತ್ತು.ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ವೈಭವೀಕರಣೆ, ಸನಾತನ ಸಂಸ್ಕೃತಿಯ ಬಗ್ಗೆ ಕೀಳರಿಮೆ ಬರುವಂತಹ ಬರಹ ಸೇರ್ಪಡೆ. ಇದೆಲ್ಲ ಮಾಡಿದ್ದು ಬಿಜೆಪಿ ನೇಮಿಸಿದ ಸಮಿತಿಯಲ್ಲ, ಕಾಂಗ್ರೆಸ್‌ ಸರ್ಕಾರ ನೇಮಿಸಿದ್ದ ಸಮಿತಿ.ಎಂದು ಆರೋಪಗಳ ಸುರಿಮಳೆ ಗೈದಿದೆ.

ತಾಜ್‌ ಹೋಟೆಲ್‌ ಮೇಲೆ ನಡೆದ ಉಗ್ರ ದಾಳಿಯಲ್ಲಿ ರಾಜ್ಯದ ಹೆಮ್ಮೆಯ ಯೋಧ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ದೇಶಕ್ಕಾಗಿ ಪ್ರಾಣ ತೆತ್ತರು. ಇವರ ತ್ಯಾಗ ಬಲಿದಾನ ನೆನೆಯುವ ನಿಟ್ಟಿನಲ್ಲಿ 8ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಪಾಠವಿತ್ತು. ಸಿದ್ದರಾಮಯ್ಯ ಸರ್ಕಾರ ಆ ಪಾಠ ಕೈಬಿಟ್ಟಿದ್ದು ಯೋಧ ಪರಂಪರೆಗೆ ಅವಮಾನವಲ್ಲವೇ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್‌ ಸರ್ಕಾರ ನೇಮಿಸಿದ ಸಮಿತಿಯ ಸಾಧನೆ: ಅಂಬೇಡ್ಕರ್ ಪಠ್ಯ ತಿರಸ್ಕಾರ, ನಾಡಪ್ರಭು ಕೆಂಪೇಗೌಡ ಪಠ್ಯಕ್ಕೆ ಜಾಗ ಇರಲಿಲ್ಲ, ನೇಗಿಲಯೋಗಿ ಪದ್ಯಕ್ಕೆ ಅವಕಾಶವಿಲ್ಲ, ಸಿಂಧೂ ನಾಗರಿಕತೆ ಪಾಠವೇ ಇಲ್ಲ, ನೆಹರೂ, ಇಂದಿರೆಗೆ ಬರೆದ ಪತ್ರವನ್ನು ಅನಾವಶ್ಯಕವಾಗಿ ತುರುಕಿಸಲಾಗಿದೆ.ಇವರ ಉದ್ದೇಶವೇನಿತ್ತು? ಎಂದು ಸರಣಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next