ಎಚ್.ಡಿ.ಕೋಟೆ: ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಜನರ ಮೇಲೆ ದಾಳಿ ಮಾಡಿ, ತಿಂಗಳ ಅಂತರದಲ್ಲಿ ಮೂವರು ಗಿರಿಜನರನ್ನು ಬಲಿ ಪಡೆದಿದ್ದ 15ರ ಪ್ರಾಯದ ಗಂಡು ಹುಲಿಯನ್ನು ಅರಣ್ಯಾಧಿಕಾರಿಗಳ ತಂಡ ಸೆರೆ ಹಿಡಿದಿದೆ.
ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿಯ ತಿಮ್ಮನಹೊಸಳ್ಳಿ ಹಾಡಿಯ ಕೆಂಚ ಅಲಿಯಾಸ್ ಅಪ್ಪಿ ಮೇಲೆ ಗುರುವಾರ ಹುಲಿ ದಾಳಿ ಮಾಡಿಕೊಂದಿತ್ತು. ಅಷ್ಟೇ ಅಲ್ಲದೆ, ಡಿ.25 ಮಾನಿಮೂಲೆ ಹಾಡಿ ಮಧು (25), ಜ.28ರಂದು ಹುಲ್ಲುಮುಟ್ಲು ಹಾಡಿಯ ಚಿನ್ನಪ್ಪ(40) ಮೇಲೂ ಹುಲಿ ದಾಳಿ ಮಾಡಿ ಕೊಂದಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಇಲ್ಲಿನ ಜನರು ಗುರುವಾರ ಮಧ್ಯ ರಾತ್ರಿವರೆಗೂ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಭಟನಾ ವಿಷಯ ತಿಳಿದು ಘಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ, ಹಾಡಿಯ ಜನರಿಗೆ ಸಾಂತ್ವನ ಹೇಳಿ ಹುಲಿಯನ್ನು ಬೇಗ ಹಿಡಿದು, ಭಯ ಮುಕ್ತ ಜೀವನ ನಡೆಸಲು ಕ್ರಮವಹಿಸುವಂತೆ ಅರಣ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ಇಲ್ಲಿನ ಜನರ ಪ್ರತಿಭಟನೆ ಕಾವು ಹೆಚ್ಚಿದ ಕಾರಣ ಹುಲಿಯನ್ನು ಜೀವಂತವಾದರೂ ಅಥವಾ ಕೊಂದದಾದರೂ ಸೆರೆ ಹಿಡಿಯಲೇ ಎಂದು ದೃಢ ನಿರ್ಧಾರಕ್ಕೆ ಬಂದ ಅರಣ್ಯಾಧಿಕಾರಿಗಳ ತಂಡ, ಶುಕ್ರವಾರ ಬೆಂಗಳೂರಿನಿಂದ ಇಬ್ಬರು ಶಾರ್ಪ್ ಶೂಟರ್ ಸೇರಿ ಹೆಚ್ಚಿನ ಸಿಬ್ಬಂದಿ ಕರೆಸಿಕೊಂಡು ಮೃತ ಕೆಂಚನ ಮೇಲೆ ದಾಳಿ ಮಾಡಿದ್ದ ಸ್ಥಳದಿಂದ ಅರ್ಜುನ, ಕೃಷ್ಣ, ಭೀಮಾ, ಸರಳಾ, ಕುಮಾರಸ್ವಾಮಿ ಆನೆ ಬಳಸಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಶುಕ್ರವಾರ ಮಧ್ಯಾಹ್ನ 1.20ರಲ್ಲಿ ಕೆಂಚನ ಮೇಲೆ ದಾಳಿ ನಡೆದಿದ್ದ 300 ಮೀಟರ್ ದೂರದಲ್ಲಿ ಹುಲಿ ದರ್ಶನವಾಯಿತು. 2.20ಕ್ಕೆ ವನ್ಯಜೀವಿ ತಜ್ಞ ವೈದ್ಯ ಡಾ.ಮುಜೀಬ್ ಅಹ್ಮದ್ ಅರವಳಿಕೆ ಚುಚ್ಚುಮದ್ದನ್ನು ಹುಲಿಗೆ ಹೊಡೆಯುವಲ್ಲಿ ಯಶಸ್ವಿಯಾದರು. ನಂತರ ಸೆರೆಯಾದ 15ರ ಪ್ರಾಯದ ಗಂಡು ಹುಲಿಯನ್ನು ಬೋನ್‌ಗೆ ಸುರಕ್ಷಿತವಾಗಿ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಕೂರ್ಗಳ್ಳಿ ಹುಲಿ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲಾಯಿತು.
ಕಾರ್ಯಾಚರಣೆಯಲ್ಲಿ ಪಿಸಿಸಿಎಫ್ ಜಯರಾಂ, ನಾಗರಹೊಳೆ ಉದ್ಯಾನದ ಸಿ.ಎಫ್.ನಾರಾಯಣಸ್ವಾಮಿ, ಮೈಸೂರು ವಲಯದ ಡಿಎಫ್‌ಒ ಸಿದ್ದರಾಮಪ್ಪ, ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಆರ್‌ಎಫ್‌ಒ ಸುಬ್ರಹ್ಮಣ್ಯ, ಅಂತರಸಂತೆ ವಲಯದ ಆರ್‌ಎಫ್‌ಒ ವಿನಯ್, ಅರಣ್ಯ ಇಲಾಖೆ ಸಿಬ್ಬಂದಿ, ಹುಲಿ ವಿಶೇಷ ಸಂರಕ್ಷಣಾ ದಳದ ಸಿಬ್ಬಂದಿ, 150ಕ್ಕೂ ಹೆಚ್ಚಿನ ಸಿಬ್ಬಂದಿ ಇದ್ದರು.