Advertisement

ಸಂಸ್ಕಾರ ಸುಜ್ಞಾನದ ದೀವಿಗೆ

11:50 PM Jul 21, 2019 | Sriram |

ನಮ್ಮ ಬದುಕು ವೈರುಧ್ಯಗಳ ಹಂದರದಂತಿದ್ದು, ಪ್ರತಿಯೊಬ್ಬರ ಜೀವನ ಶೈಲಿ ಕೂಡ ಭಿನ್ನವಾಗಿರುತ್ತವೆ. ಜೀವನ ಶೈಲಿ ಮನುಷ್ಯನ ಆಚಾರ, ವಿಚಾರ, ನಡವಳಿಕೆ ಆತನ ಸಂಸ್ಕಾರವನ್ನು ತಿಳಿಸುತ್ತದೆ. ಸಂಸ್ಕಾರವಿಲ್ಲದ ಜೀವನ ಪಶುವಿಗೆ ಸಮಾನ. ಸಂಸ್ಕಾರದಿಂದ ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡಿ, ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಪಡೆಯಲು ಸಾಧ್ಯ.

Advertisement

ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಂಸ್ಕಾರ ಮುಖ್ಯ. ಮಾತು, ಮನ, ಕೃತಿಗಳು ಒಂದಾಗಿದ್ದರೆ ನಿಜವಾದ ಗೌರವ, ಘನತೆ ಸಿಗುತ್ತದೆ. ಮಾತಿಗೂ ಕೃತಿಗೂ ಅಜಗಜಾಂತರದಿಂದಾಗಿ ಸಮಾಜದಲ್ಲಿ ಸತ್ಯ ಸಂಸ್ಕೃತಿ ಆದರ್ಶಗಳು ಕಡಿಮೆಯಾಗುತ್ತವೆ. ಉತ್ತಮ ಸಂಸ್ಕಾರ ಪಡೆದು ಬಾಳಿದರೆ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ. ಹಾಗೆ ಸುಸಂಸ್ಕೃತ ವ್ಯಕ್ತಿತ್ವ, ಧರ್ಮನಿಷ್ಠೆ, ಆಚಾರ, ವಿಚಾರ, ಅನುಷ್ಠಾನಗಳು ಸಾಧನೆಗೆ ದಾರಿದೀಪವಾಗಬಲ್ಲವು.

ಬಾಳಿನುದ್ದಕ್ಕೂ ಹಲವಾರು ಸಮಸ್ಯೆಗಳು ಕಾಡುತ್ತಿರುತ್ತವೆ. ಅವುಗಳ ನಡುವೆಯೇ ಸಹನೆ, ತಾಳ್ಮೆ, ನಿರೀಕ್ಷೆಗಳನ್ನಿಟ್ಟುಕೊಂಡು ಬಾಳಲು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವ್ಯಕ್ತಿ ಯಾವ ಮಟ್ಟಕ್ಕೆ ಬೆಳೆಯುತ್ತಾನೆ ಎಂಬುದು ಆತನಲ್ಲಿರುವ ಸಂಸ್ಕಾರ ಸೂಚಿಸುತ್ತದೆ. ಅಹಂಕಾರ, ಕ್ರೌರ್ಯ, ಹಿಂಸೆ ಬಿಟ್ಟು ಶಾಂತಿ, ಸಮಾಧಾನದಿಂದ ಬದುಕುವ, ವ್ಯವಹರಿಸುವ ಗುಣ ಹೊಂದಲು ಉತ್ತಮ ಸಂಸ್ಕಾರ ಪೂರಕ.

ನೈತಿಕ ಮೌಲ್ಯಗಳು ಅಗತ್ಯ
ಬದುಕಿನಲ್ಲಿ ಸಾರ್ಥಕ್ಯ ಕಾಣುವುದು ಒಂದು ಕಲೆ. ಇದಕ್ಕೆ ಕೌಶಲ ಅಗತ್ಯ. ಈ ಪ್ರಪಂಚ ಇರುವುದು ನಮ್ಮ ಬದುಕನ್ನು ಸಿಂಗರಿಸುವುದಕ್ಕೆ. ಆದ್ದರಿಂದ ಇದನ್ನು ಬಳಸಿ ಬದುಕನ್ನು ಸುಂದರ ವನ್ನಾಗಿಸಬೇಕು. ಪ್ರತಿಯೊಬ್ಬರಿಗೂ ಬಾಳಿನಲ್ಲಿ ಒಂದು ನಿರ್ದಿಷ್ಟ ಗುರಿ ಅಗತ್ಯ. ನಿರಂತರ ಪರಿಶ್ರಮದಿಂದ ಗುರಿ ಸಾಧನೆ ಸಾಧ್ಯ. ಜೀವನವು ಕೇವಲ ಯಾಂತ್ರಿಕ, ವ್ಯಾವಹಾರಿಕ ವಾಗಬಾರದು. ಪರಸ್ಪರರಲ್ಲಿ ವಿಶ್ವಾಸ, ನಂಬಿಕೆ, ಸ್ನೇಹ ಮತ್ತಿತರ ನೈತಿಕ ಮೌಲ್ಯಗಳು ಅಡಕವಾಗಿರಬೇಕು.

ಸುಂದರ ಬದುಕು ದಿಢೀರೆಂದು ಅನುಭವಕ್ಕೆ ಬರುವುದಿಲ್ಲ. ಪ್ರೀತಿ, ಸಂತೋಷ, ನೆಮ್ಮದಿ, ಸಂಪತ್ತು, ಆರೋಗ್ಯ ಇತ್ಯಾದಿಗಳನ್ನು ಸಾಧಿಸಿಕೊಳ್ಳಬೇಕು.

Advertisement

ಮೌಲ್ಯಗಳನ್ನು ಆಚರಣೆಗೆ ತನ್ನಿ
ನಾವು ಮೌಲ್ಯಗಳನ್ನು ಆಚರಣೆಗೆ ತರಬೇಕು. ಆಗ ಮಾತ್ರ ಜನರು ನಮ್ಮನ್ನು ಗುರುತಿಸುತ್ತಾರೆ ಮತ್ತು ಅನುಸರಿಸುತ್ತಾರೆ. ಮೌಲ್ಯಗಳು ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸಲು ಮತ್ತು ದುರಭ್ಯಾಸಗಳಿಂದ ದೂರವಿರಲು ಸಹಕಾರಿ. ಜೀವನದಲ್ಲಿ ನಂಬಿಕೆಗಳು ಮತ್ತು ಸಿದ್ಧಾಂತಗಳು ಮಹತ್ವ ಪೂರ್ಣ ಸ್ಥಾನಗಳನ್ನು ಹೊಂದಿವೆ. ಅವುಗಳು ವ್ಯಕ್ತಿತ್ವ ಮತ್ತು ಧೋರಣೆಗಳನ್ನು ರೂಪಿಸುತ್ತವೆ. ನಮ್ಮನ್ನು ಮತ್ತು ನಮ್ಮ ಸ್ನೇಹಿತರನ್ನೂ ಇತರರು ಅಳೆಯುವುದು ವೈಯಕ್ತಿಕ ಮೌಲ್ಯಗಳ ಆಧಾರದಿಂದ. ನಮ್ಮ ನೆಲೆ ಮತ್ತು ಒಲವುಗಳನ್ನು ತಿಳಿಯಪಡಿಸುವುದು ಈ ಮೌಲ್ಯಗಳು.

ತಾಳ್ಮೆ, ಸಹನೆ, ಸತ್ಯ, ಅಹಿಂಸೆ, ಪ್ರಾಮಾಣಿಕತೆ ಎಲ್ಲ ಉತ್ತಮ ಮೌಲ್ಯಗಳು ಅನುಸರಿಸುವುದು ಕಷ್ಟ, ಆದರೆ ಸಹಿಸಿಕೊಂಡು ಯಾರು ಬದುಕು ಸಾಗಿಸುವರೋ, ಅವರು ನಿಜವಾದ ವಿಜಯಿಗಳಾಗುತ್ತಾರೆ.

-   ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next