Advertisement

ರೈಲು ಮಾರ್ಗ ನನೆಗುದಿಗೆ; ಅಭಿವೃದ್ಧಿಗೆ ಹೊಡೆತ

01:05 AM Dec 13, 2021 | Team Udayavani |

ಕಾರ್ಕಳ: ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಮೂಲ ಸೌಕರ್ಯಗಳಾದ ರಸ್ತೆ, ರೈಲು ಸೇವೆ ಅತ್ಯಗತ್ಯ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ಕೇಂದ್ರಗಳ ಮೂಲಕ ಹಾದು
ಹೋಗುವ ಎರಡು ಪ್ರಮುಖ ಪರ್ಯಾಯ ರೈಲ್ವೇ ಯೋಜನೆಗಳು ಸುದೀರ್ಘ‌ ಕಾಲದಿಂದ ನನೆಗುದಿಗೆ ಬಿದ್ದಿದ್ದು, ಅಭಿವೃದ್ಧಿಗೆ ಹೊಡೆತ ಬಿದ್ದಿದೆ.

Advertisement

ಪಡುಬಿದ್ರಿ, ಕಾರ್ಕಳ, ಉಜಿರೆ ಧರ್ಮಸ್ಥಳ, ನೆಟ್ಟಣ ಹಾಗೂ ನಂದಿಕೂರು, ಕಾರ್ಕಳ, ಬಜಗೋಳಿ, ಉಜಿರೆ, ಚಾರ್ಮಾಡಿ ಮಾರ್ಗವಾಗಿ ಸಾಗುವ ಎರಡು ಪರ್ಯಾಯ ರೈಲು ಮಾರ್ಗಗಳ ನಿರ್ಮಾಣವು ಪ್ರಮುಖವಾಗಿ ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ ತಾಲೂಕುಗಳ ಪ್ರಮುಖ ಬೇಡಿಕೆಗಳಾಗಿವೆ.

ಯಾತ್ರಾ ಕ್ಷೇತ್ರಗಳು, ಉದ್ದಿಮೆಗಳು, ಶಿಕ್ಷಣ ಸಮೂಹ ಸಂಸ್ಥೆಗಳು, ಆಸ್ಪತ್ರೆಗಳು ಈ ಮೂರು ತಾಲೂಕುಗಳಲ್ಲಿದ್ದು, ಪ್ರವಾಸೋದ್ಯಮ ಕೇಂದ್ರಗಳಾಗಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ. ವಿವಿಧ ಜಿಲ್ಲೆ, ರಾಜ್ಯಗಳ ಬಹಳಷ್ಟು ಯಾತ್ರಿಕರು ಇಲ್ಲಿಗೆ ವರ್ಷವಿಡೀ ಆಗಮಿಸುತ್ತಿರುತ್ತಾರೆ. ಉದ್ದೇಶಿತ ರೈಲು ಮಾರ್ಗ ನಿರ್ಮಾಣವಾದರೆ ಈ ಮೂರು ತಾಲೂಕುಗಳ ಇನ್ನಷ್ಟು ಅಭಿವೃದ್ಧಿ ನಿಶ್ಚಿತ.

ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮತ್ತು ಉಡುಪಿಯಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಡ್ಯಡ್ಕ ಹಾಗೂ ಹೊರನಾಡು ಕ್ಷೇತ್ರಗಳಿಗೆ ಪ್ರಯಾಣಿಸುವ ಭಕ್ತರಿಗೆ ಉದ್ದೇಶಿತ ಪಡುಬಿದ್ರಿ-ಕಾರ್ಕಳ, -ಬೆಳ್ತಂಗಡಿ-ಚಿಕ್ಕಮಗಳೂರು ರೈಲು ಮಾರ್ಗವು ವರದಾನ. ಉಜಿರೆ, ಚಾರ್ಮಾಡಿ-ಕೊಟ್ಟಿಗೆಹಾರ ಮೂಲಕ ಹೊಸ ಮಾರ್ಗ ಪ್ರಸ್ತಾವನೆಯನ್ನು ಉಡುಪಿ ರೈಲ್ವೇ ಯಾತ್ರಿಕರ ಸಂಘವು ಇಲಾಖೆಯ ಮುಂದಿಟ್ಟಿದೆ.

ಪಡುಬಿದ್ರಿ-ಕಾರ್ಕಳ-ಧರ್ಮಸ್ಥಳ-ನೆಟ್ಟಣ ಮಧ್ಯೆ 120 ಕಿ.ಮೀ. ಹೊಸ ಮಾರ್ಗದ ಸರ್ವೇ ನಡೆದಿದೆ. ಪ್ರಾಥಮಿಕ ತಾಂತ್ರಿಕ ಮತ್ತು ಸಂಚಾರ ಸರ್ವೇ ಪ್ರಿಲಿಮಿನರಿ, ಎಂಜಿನಿಯರಿಂಗ್‌ ಕಂ ಟ್ರಾಫಿಕ್‌ ಸರ್ವೇ ನಡೆದಿದೆ. ಮಾರ್ಗ ರಚನೆ ಕುರಿತು ಪ್ರಸ್ತಾವನೆಗಳು ಇದ್ದು, ಇಲಾಖೆ ಮಟ್ಟದಲ್ಲಿ ಇದುವರೆಗೂ ಮುನ್ನೆಲೆಗೆ ಬಂದಿಲ್ಲ.

Advertisement

ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್‌ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ

ಅನುಮೋದನೆ ಮಾತ್ರ; ಪ್ರಗತಿಯಾಗಿಲ್ಲ !
ನಂದಿಕೂರು-ಕಾರ್ಕಳ-ಚಾರ್ಮಾಡಿ ನಡುವೆ 148 ಕಿ.ಮೀ. ರೈಲು ಮಾರ್ಗದ ಸರ್ವೇ ನಡೆಸುವಂತೆ ಉಡುಪಿ ರೈಲ್ವೇ ಯಾತ್ರಿಕರ ಸಂಘ ಬಹಳಷ್ಟು ವರ್ಷಗಳಿಂದ ಒತ್ತಾಯಿಸುತ್ತ ಬಂದಿದೆ. ಇದಕ್ಕೂ ಸ್ಪಂದನೆ ಸಿಕ್ಕಿಲ್ಲ. ಈ ಮಾರ್ಗ ಸೋಮನಾಡು ಸೇತುವೆ ಭಾಗದಲ್ಲಿ ಸುರಂಗದ ಮೂಲಕ ಸಾಗಿ ಕೊಟ್ಟಿಗೆಹಾರದಿಂದ ಮೂಡಿಗೆರೆಯಲ್ಲಿ ರೈಲು ಮಾರ್ಗಕ್ಕೆ ಜೋಡಣೆಯಾಗುತ್ತದೆ. ಅದು ಮುಂದಕ್ಕೆ ರಾಜಧಾನಿ ಬೆಂಗಳೂರಿಗೆ ಸೇರಲಿದೆ. 2010ರ ರೈಲ್ವೇ ಬಜೆಟ್‌ನಲ್ಲಿ ಈ ಮಾರ್ಗ ಸಮೀಕ್ಷೆಗೆ ರೈಲ್ವೇ ಮಂತ್ರಿ ಮಮತಾ ಬ್ಯಾನರ್ಜಿ ಅನುಮೋದನೆ ನೀಡಿದ್ದರೂ ಪ್ರಗತಿ ಕಂಡಿಲ್ಲ.

ಕೆಥೋಲಿಕ್‌ ಸಭಾದ ಮಂಗಳೂರು ಪ್ರದೇಶ ಸಂಸ್ಥೆಯು ಸುದೀರ್ಘ‌ ಅವಧಿಯಿಂದ ಈ ರೈಲು ಮಾರ್ಗಕ್ಕಾಗಿ ಹೋರಾಟ, ಮನವಿಗಳನ್ನು ಸಲ್ಲಿಸುತ್ತ ಬಂದಿದೆ. ಸ್ಥಳೀಯ ಮಟ್ಟದಿಂದ ಹಿಡಿದು ದಿಲ್ಲಿ ತನಕ ಪ್ರಯತ್ನಗಳು ನಡೆದಿವೆ. ವೀರಪ್ಪ ಮೊಯ್ಲಿ, ಶೋಭಾ ಕರಂದ್ಲಾಜೆ, ಸುನಿಲ್‌ ಕುಮಾರ್‌ ಅವರ ಮೂಲಕ ಪ್ರಯ°ಗಳು ಸಾಗಿವೆ ಎಂದು ಸಂಸ್ಥೆಯ ಅಧ್ಯಕ್ಷೆ ಲೀನಾ ಮಿನೇಜಸ್‌ ಹೇಳಿದ್ದಾರೆ.

ರೈಲ್ವೇ ಮಾರ್ಗಗಳ ವಿಚಾರದಲ್ಲಿ ಹೆಚ್ಚಿನ ಪ್ರಗತಿಗಳು ಆಗಿಲ್ಲ. ಸರಕಾರದ ಮಟ್ಟದಲ್ಲಿ ಪ್ರಗತಿಗಳಾದ ಬಳಿಕವಷ್ಟೇ ಅದು ಇಲಾಖೆ ಹಂತಕ್ಕೆ ಬರುತ್ತದೆ.
– ಕೆ. ಸುಧಾ ಕೃಷ್ಣಮೂರ್ತಿ, ಕೊಂಕಣ ರೈಲ್ವೇ ಮಂಗಳೂರು ವಿಭಾಗದ ಪಿಆರ್‌ಒ
– ವೆಂಕಟೇಶ್‌,ಕೊಂಕಣ ರೈಲ್ವೇ ಎಂಜಿನಿಯರ್‌

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next