Advertisement

ಗತಕಾಲದ ಗ್ರಂಥಾಲಯಕ್ಕೆ ಬೇಕಿದೆ ಆಧುನಿಕ ರೂಪ!

02:14 PM Oct 25, 2019 | Team Udayavani |

ಶಿರಹಟ್ಟಿ: ಹಿರಿಯ ಹವ್ಯಾಸಿ ಓದುಗರು ಸ್ವಪ್ರಯತ್ನದಿಂದ ಸ್ಥಾಪಿಸಿ ಮುನ್ನಡೆಸಿಕೊಂಡು ಬಂದ ಶತಮಾನೋತ್ಸವ ಸಂಭ್ರಮ ಆಚರಿಸಿದ ನಗರದ ಲೋಕಮಾನ್ಯ ಟಿಳಕ ವಾಚನಾಲಯ ಕೇಂದ್ರಕ್ಕೆ ಆಧುನಿಕ ರೂಪ ಒದಗಿಸಬೇಕಿದೆ.

Advertisement

ಒಂದು ಕಾಲದಲ್ಲಿ ಶಿರಹಟ್ಟಿ ಪಟ್ಟಣ ಅಧ್ಯಯನಕ್ಕೆ ಪ್ರಮುಖ ಕೇಂದ್ರವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದಿತ್ತು. ಓದುವ ಹವ್ಯಾಸ ಬೆಳೆಸಲು ಸರಕಾರದ ಯಾವುದೇ ಸಹಾಯಧನ ಅಪೇಕ್ಷಿಸದೆ 1852ರಲ್ಲಿ “ಲೋಕಮಾನ್ಯ ಟಿಳಕ ವಾಚನಾಲಯ’ ಕೇಂದ್ರವನ್ನು ಓದುಗರೇ ಸೇರಿ ಸ್ಥಾಪಿಸಿದ್ದಾರೆ.

ಈ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ವಾರಪತ್ರಿಕೆಗಳು ಹೊರತುಪಡಿಸಿದರೆ ಉಳಿದ ಪುಸ್ತಕಗಳನ್ನು ಅಳವಡಿಸಲು ಸ್ಥಳದ ಕೊರತೆ ಇದೆ. ಅಲ್ಲದೇ ಅವುಗಳನ್ನು ಹೊಂದಿಸಿಡುವ ರ್ಯಾಕ್‌ಗಳು ಸಹ ಗತಕಾಲದ್ದಾಗಿವೆ. ಪೂರ್ವಜರು ಆರಂಭಿಸಿದ ವಾಚನಾಲಯ ಇಂದು ಸರಕಾರದ ಅ ಧೀನದಲ್ಲಿದ್ದರೂ ಸೊರಗಿ ತನ್ನ ನೈಜ ಸ್ವರೂಪ ಕಳೆದುಕೊಳ್ಳುತ್ತಿರುವುದು ಸಾಹಿತ್ಯಾಸಕ್ತರ ಮನ ಕಲುಕಿದೆ.

ವರ್ಣ ಚಿತ್ರಗಳ ರಕ್ಷಣೆಯಿಲ್ಲ: ಮರಾಠಾ ರಾಜವಂಶಸ್ಥರಾದ ಸಾಂಗ್ಲಿ ಮಹಾರಾಜರ ಆಡಳಿತಕ್ಕೆ ಸೇರಿದ ಶಿರಹಟ್ಟಿ ಭಾಗದ ಜನರ ಮಾತೃಭಾಷೆಯಾದ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಲು ಹಾಗೂ ಸಾಹಿತ್ಯಾಸಕ್ತರ ಕೋರಿಕೆ ಮೇರೆಗೆ ಈಗಿರುವ ಕಟ್ಟಡವನ್ನು ರಾಜವಂಶಸ್ಥರು ಗ್ರಂಥಾಲಯಕ್ಕೆ ಬಿಟ್ಟು ಕೊಟ್ಟಿದ್ದರು. ಎರಡು ಅಂತಸ್ತು ಹೊಂದಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ಅಂದಿನ ಕಾಲದ ರಾಜ ಮನೆತನದವರ, ಲೋಕಮಾನ್ಯ ಟಿಳಕರ ಹಾಗೂ ಗ್ರಂಥಾಲಯ ಸ್ಥಾಪನೆಗೆ ಶಕ್ತಿಯಾಗಿ ನಿಂತ ಅನೇಕ ಮಹನೀಯರ ಆ ಕಾಲದ ಅತ್ಯಮೂಲ್ಯ ವರ್ಣ ಚಿತ್ರಗಳು ಇಂದಿಗೂ ರಾರಾಜಿಸುತಿದ್ದು, ಅವುಗಳನ್ನು ರಕ್ಷಿಸುವುದು ಅವಶ್ಯವಿದೆ.

ಕಾದಂಬರಿಗಳಿಗೇ ಸೀಮಿತ: ನೆಲ ಅಂತಸ್ತಿನಲ್ಲಿ ವಾಚನಾಲಯ, ಮೇಲಿನ ಭಾಗದಲ್ಲಿ ಗ್ರಂಥಾಲಯ ವ್ಯವಸ್ಥೆಯಿದ್ದು, ಓದುಗರಿಗೆ ಪುಸ್ತಕಗಳ ಕೊರತೆ ಎದ್ದು ಕಾಣುತ್ತಿದೆ. ಪ್ರಸಕ್ತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಬಲ್ಲ ಸಾಹಿತ್ಯ ಕೃತಿಗಳ ಕೊರತೆ ಗ್ರಂಥಾಲಯದಲ್ಲಿದ್ದು, ಕೇವಲ ನಾಟಕ, ಕಥೆ, ಕಾದಂಬರಿಗಳ ಗೂಡಾಗಿರುವ ಗ್ರಂಥಾಲಯ ಓದುಗರನ್ನು ಸೆಳೆಯುವಲ್ಲಿ ವಿಫಲವಾಗಿದೆ.

Advertisement

 

-ಪ್ರಕಾಶ ಮೇಟಿ

Advertisement

Udayavani is now on Telegram. Click here to join our channel and stay updated with the latest news.

Next