Advertisement
ಮಂಗಳೂರಿನ ಪುರಭವನದಲ್ಲಿ ರಂಗಚಾವಡಿಯ ಆಶ್ರಯದಲ್ಲಿ ದುಬಾಯಿಯ ಗಮ್ಮತ್ ಕಲಾವಿದರು ಬಯ್ಯ ಮಲ್ಲಿಗೆ ನಾಟಕವನ್ನು ಪ್ರದರ್ಶಿಸಿದರು. ತುಳುನಾಡಿನ ಕಲಾ ತಂಡಗಳು ಸಾಗರ ದಾಟಿ ಪ್ರದರ್ಶನ ನೀಡಿದ್ದಿದೆ. ಅಕ್ಟೋಬರ್ 11ರಂದು ಮಂಗಳೂರಿನಲ್ಲಿ ನಡೆದ ಈ ಪ್ರದರ್ಶನ ಮರುಭೂಮಿಯಲ್ಲಿ ದುಡಿಯುತ್ತಿರುವ ತುಳುನಾಡಿನ ಜನ ಅಲ್ಲಿ ಸೇರಿಕೊಂಡು, ಕಲಾ ಸಂಘಟನೆ ರೂಪಿಸಿಕೊಂಡು, ಸಿ.ಡಿ.ಗಳನ್ನು ನೋಡಿ ರಿಹರ್ಸಲ್ ನಡೆಸಿ ತಾಯ್ನಾಡಿಗೆ ಬಂದು ನೀಡಿದ ಪ್ರದರ್ಶನ.ಡಾ| ಸಂಜೀವ ದಂಡಕೇರಿಯವರು ಈ ನಾಟಕವನ್ನು ಬರೆದ ಕಾಲ 55 ವರ್ಷ ಹಿಂದಿನದ್ದು. ಇದರ ಅವಧಿ ಆಗ 6 ಗಂಟೆ. ಈಗ ಎರಡೂವರೆ ಗಂಟೆಗೆ ಇಳಿದಿದೆ. ಇದು ಬೆಳ್ಳಿತೆರೆಯಲ್ಲೂ ಮಿಂಚಿದೆ . ನಾಟಕದ ವಸ್ತು ಭಾವ ಪ್ರಧಾನವಾದುದು. ಆ ಕಾಲದ ಸಮಾಜ ರಚನೆಯನ್ನು , ಬದಲಾಗುತ್ತಿರುವ ಮೌಲ್ಯಗಳನ್ನು ಮತ್ತು ನ್ಯಾಯ ಅನ್ಯಾಯಗಳನ್ನು ಮುಖಾಮುಖೀಯಾಗಿಸುವ ಬಯ್ಯ ಮಲ್ಲಿಗೆ ತಲೆಯ ಮೇಲೆ ಹೊಯಿದ ನೀರು ಕಾಲಿಗೆ ಬರುತ್ತದೆ ಎಂಬ ನಾಣ್ಣುಡಿಯನ್ನು ನೆನಪಿಸುತ್ತದೆ. ಕೊನೆಯಲ್ಲಿ ಈ ನಾಟಕ ದುರಂತದ ದಟ್ಟ ಛಾಯೆಯನ್ನು, ತಪ್ಪು, ಅನ್ಯಾಯಗಳನ್ನು ಮಾಡಿದವರಿಗೆ “ಮೇಲೊಬ್ಬನಿರುವನಲ್ಲ ಅವನು ಶಿಕ್ಷೆ ಕೊಡುತ್ತಾನೆ’ ಎಂಬ ಸಂದೇಶವನ್ನು ಸಾರುತ್ತದೆ.
ಭೂಮಿ, ಪಶು ಸಂಪತ್ತುಗಳೇ ಪ್ರಧಾನವಾಗಿದ್ದ, ಕೈಗಾರಿಕಾ ಕ್ರಾಂತಿ ಮತ್ತು ಅದರ ಫಲವಾದ ಉದ್ಯೋಗ ಸಂಪಾದನೆ ಕೆಲವರಿಗಷ್ಟೇ ಸೀಮಿತವಾಗಿದ್ದ, ನಿರುದ್ಯೋಗ ಸಮಸ್ಯೆ ಮತ್ತು ಉದ್ಯೋಗಕ್ಕೆ ಅರ್ಹತೆಗಿಂತ ಹಣ ಮತ್ತು ಜಾತಿ-ಸಂಬಂಧಗಳು ಮುಖ್ಯವಾಗುತ್ತಿದ್ದಂತಹ ಸಾಮಾಜಿಕ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿರುವ ಸಂದರ್ಭವನ್ನು ಈ ನಾಟಕ ಒಳಗೊಂಡಿದೆ.
ಮಲತಾಯಿಯಾಗಿ ಬಂದವಳು ಗಂಡನ ಮೊದಲ ಪತ್ನಿಯ ಮಕ್ಕಳನ್ನು ನಿರ್ಲಕ್ಷಿಸುತ್ತಾಳೆ. ಆಕೆ ಸಹೋದರನ ಮಾತು ಕೇಳಿಕೊಂಡು ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳುತ್ತಾಳೆ. ತಂದೆಗೆ ಇಷ್ಟವಿಲ್ಲದಿದ್ದರೂ ಆಸ್ತಿಯನ್ನು ಚಿಕ್ಕಮ್ಮಳಿಗೆ ಮಾಡಿಕೊಡುವಲ್ಲಿ ಮಗ ಪ್ರಮುಖ ಪಾತ್ರವಹಿಸುತ್ತಾನೆ. ಇಲ್ಲಿ ಆತ ಆ ಕಾಲದ ಆದರ್ಶದ ಪ್ರತಿಮೂರ್ತಿಯಂತೆ ಕಾಣುತ್ತಾನೆ. ಈತನ ತಂಗಿಗೆ ಮಲತಾಯಿ ಕಾಟ ಕೊಡುತ್ತಾಳೆ. ಅದನ್ನಾಕೆ ಸಹನಾಮೂರ್ತಿಯಂತೆ ಸಹಿಸುವ ರೀತಿ ಆ ಕಾಲದಲ್ಲಿ “ಮನೆಯ ಗುಟ್ಟು ಹೊರಗೆ ಹೋಗಬಾರದು’ ಎಂದು ಚಾಲ್ತಿಯಲ್ಲಿದ್ದ ಮೌಲ್ಯ ಪ್ರಜ್ಞೆಯನ್ನು ಹೇಳುತ್ತದೆ.
ನಾಟಕದ ಸಂಭಾಷಣೆಗಳು ಎಷ್ಟು ಚುರುಕಾಗಿವೆ ಎಂದರೆ ಅವುಗಳಲ್ಲಿ ಅರ್ಥವನ್ನು ಹುಡುಕಬೇಕಾಗಿಲ್ಲ.ಇಲ್ಲಿ ಅರ್ಥಶ್ಲೇಷೆ , ಕ್ಲೀಷೆಗಳಿಲ್ಲ. ಸಂಕೇತಗಳಿಲ್ಲ. ಆದರಿಂದಲೇ ಈ ನಾಟಕ ಇಷ್ಟು ವರ್ಷಗಳ ನಂತರವೂ ತುಂಬಿದ ಗೃಹದಲ್ಲಿ ಪ್ರದರ್ಶನಗೊಂಡಿತು. ಪಾತ್ರಗಳನ್ನು ಎಷ್ಟೊಂದು ಭಾವ ಪೂರ್ಣವಾಗಿ ಅಭಿನಯಿಸಲಾಯಿತೆಂದರೆ ಧಾರಾವಾಹಿಗಳಲ್ಲಿ ಬರುವ ದುಷ್ಟರಿಗೆಹಾಗೇ ಆಗಬೇಕು ಎಂದು ಶಾಪ ಹಾಕುವವರಂತೆ ಇಲ್ಲಿ ಪ್ರೇಕ್ಷಕರು ಶಾಪ ಹಾಕುತ್ತಿದ್ದರು. ನಾಟಕದ ಕೊನೆ ಗ್ರೀಕ್ ದುರಂತ/ರುದ್ರ ನಾಟಕಗಳಂತೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು, ಅದೂ ಈ ಜನ್ಮದಲ್ಲಿಯೇ ಎಂಬ ಸಿದ್ಧಾಂತವನ್ನು ಶಕ್ತಿಯುತವಾಗಿ ಪ್ರತಿಪಾದಿಸುತ್ತದೆ. ತನ್ನ ಸಹೋದರಿಗೆ ಆಸ್ತಿ ಪಡೆಯುವಂತೆ ಸಲಹೆ ಮಾಡಿ ನೆಮ್ಮದಿಯ ಕುಟುಂಬವನ್ನು ನಾಶ ಮಾಡಿದ , ಕೊನೆಗೆ ಆತನ ಚಟಗಳಿಂದಾಗಿ ಅದನ್ನು ಕಳೆದುಕೊಂಡು ಅಕ್ಕ ಮತ್ತು ತಮ್ಮ ಇಬ್ಬರೂ ಭಿಕಾರಿಗಳಾಗುವ ದೃಶ್ಯ ಅನ್ಯಾಯಕ್ಕೊಂದು ಕೊನೆ ಇದೆ, ಅದಕ್ಕೆ ಸಾವಿದೆ ಎನ್ನುತ್ತದೆ.