ಪಾಂಡವಪುರ: ನೈತಿಕ ದಿವಾಳಿತನವನ್ನು ತೋರುತ್ತಿರುವ ಹಾಗೂ ಈ ಜಿಲ್ಲೆಯ ಇಂದಿನ ದುಸ್ಥಿತಿಗೆ ಕಾರಣರಾದ ನಾಯಕರನ್ನು ಜಿಲ್ಲೆಯಿಂದ ಹೊರಗಟ್ಟಿ ಜಿಲ್ಲೆಯ ಅಸ್ಮಿತೆ ಹಾಗೂ ಸ್ವಾಭಿಮಾನ ಎತ್ತಿಹಿಡಿಯಬೇಕಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಎಚ್. ಎನ್.ರವೀಂದ್ರ ಹೇಳಿದರು.
ತಾಲೂಕಿನ ಹೊಸಕೋಟೆಯಲ್ಲಿ “ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಸ್ವಾಭಿಮಾನಕ್ಕಾಗಿ ಪಾದಯಾತ್ರೆ’ ವೇಳೆ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ಎಂಬ ಒಂದೇ ಕಾರಣಕ್ಕಾಗಿ ಮಂಡ್ಯದಲ್ಲಿ ಅನುಭವ ಇಲ್ಲದ ನಿಖೀಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ ಮಂಡ್ಯ ಜಿಲ್ಲೆಯ ಪ್ರಬುದ್ಧ ಸ್ವಾಭಿಮಾನಿ ಮತದಾರರು ಪಕ್ಷೇತರ
ಅಭ್ಯರ್ಥಿ ಸುಮಲತಾ ಅವರಿಗೆ ಅಧಿಕ ಮತ ನೀಡಿ ಗೆಲ್ಲಿಸಿ ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ಹಾಡಬೇಕು ಎಂದು ಮನವಿ ಮಾಡಿದರು.
ಗೌಡ್ರೆ ನಿಂತಿದ್ದರೆ ಗೆಲ್ಲಿಸ್ತಿದ್ದೆವು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅತ್ಯಧಿಕ ಮತಗಳಿಂದ ಭರ್ಜರಿ ಗೆಲವು ಸಾಧಿಸಿ ಜೆಡಿಎಸ್ ವಿರುದ್ಧ ಇತಿಹಾಸ ಸೃಷ್ಟಿಸಲಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧೆ ಮಾಡಿದ್ದರೆ ಜಿಲ್ಲೆಯ ಯಾವೊಬ್ಬ ಮತದಾರರು ಚಕಾರವೆತ್ತುತ್ತಿರಲಿಲ್ಲ. ಆದರೆಅವರೊಬ್ಬ ದೇಶದ ಕನ್ನಡದ ಮೊಟ್ಟ ಮೊದಲ ಪ್ರಧಾನಮಂತ್ರಿ ಎಂದು ಅಭಿಮಾನ ಪೂರ್ವಕವಾಗಿ ಹೇಳಲು ಸಂತೋಷವಾಗುತ್ತಿತ್ತು. ಜತೆಗೆ ನನ್ನ ಜಿಲ್ಲೆಯಿಂದ ಒಬ್ಬ ಮಾಜಿ ಪ್ರಧಾನಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದರೆ ಹೆಮ್ಮೆ ಪಡಬಹುದಿತ್ತು ಅದು ನಮ್ಮ ಮಂಡ್ಯ ಮಣ್ಣಿನ ಔದಾರ್ಯವೂ ಆಗುತ್ತಿತ್ತು. ಆದರೆ, ಅನುಭವವಿಲ್ಲದ, ಜಿಲ್ಲೆಯ ಬಗ್ಗೆ ಗಂಧಗಾಳಿ ಗೊತ್ತಿರುವ ಅಭ್ಯರ್ಥಿಯನ್ನು ಗೆಲ್ಲಿಸಿದರೆ, ಮುಂದೆ ಜಿಲ್ಲೆಯ ಅಭಿವೃದ್ಧಿ ಅಧೋಗತಿಗಿಳಿಯಲಿದೆ ಎಂದು ಹೇಳಿದರು.
ಮತದಾರರಿಗೆ ಅವಮಾನ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನದೇವೇಗೌಡರ ಪಕ್ಷವನ್ನೇ ಬೆಂಬಲಿಸಿರುವ ನಮ್ಮ ಜಿಲ್ಲೆಯ ಜನರ ಋಣ ತೀರಿಸಲು ಹಣವಿಲ್ಲದ ಯಾವುದೇ ಸಾಮಾನ್ಯ ಕಾರ್ಯಕರ್ತನನ್ನು ಲೋಕಸಭಾ ಚುನವಾಣೆಗೆ ನಿಲ್ಲಿಸಿದ್ದರೂ, ಅದಕ್ಕೊಂದು ಬೆಲೆ ಇರುತ್ತಿತ್ತು. ಜತೆಗೆ ಜಿಲ್ಲೆಯ ಜನ ದೇವೇಗೌಡ ಮತ್ತು ಕುಮಾರಸ್ವಾಮಿಯನ್ನು ಮತ್ತಷ್ಟು ತಲೆಯ ಮೇಲೆ ಹೊತ್ತು ಮೆರೆಸುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ದೇವೇಗೌಡರು ಸ್ಪರ್ಧೆ ಮಾಡಿದ್ದರೆ ನಾನು ಪಾದಯಾತ್ರೆ ನಡೆಸುತ್ತಿರಲಿಲ್ಲ. ಆದರೆ ಯಾವುದೇ ಅನುಭವವಿಲ್ಲದ ಯುವ ನಿಖೀಲ್‌ರನ್ನು ಸ್ಪರ್ಧೆಗಿಳಿಸಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ ಅವಮಾನವೆಸಗಿದ್ದಾರೆ. ಹಾಗಾಗಿ ಜಿಲ್ಲೆಯ ಸ್ವಾಭಿಮಾನಿ ಮತದಾರರ ಸಂಪೂರ್ಣ ವಿರೋಧವಿದೆ ಎಂದರು.
ಮೈತ್ರಿ ಧರ್ಮ ಪಾಲಿಸಲ್ಲ: ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಕ್ಷದಲ್ಲಿ ಪ್ರಾಥಮಿಕ ಸದಸ್ಯತ್ವ ಹೊಂದಿದ್ದೇನೆ. ಆದರೆ ನಾನು ಮೈತ್ರಿ ಧರ್ಮ ಪಾಲಿಸುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಸಾಧ್ಯವೇ ಇಲ್ಲ. ನಾನು ಬಹಿರಂಗವಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿದ್ದೇನೆ. ಕಾಂಗ್ರೆಸ್ ವರಿಷ್ಠರು ಬೇಕಾದರೆ ತಮ್ಮ ಮೇಲೆ
ಶಿಸ್ತು ಕ್ರಮ ಜರುಗಿಸಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸವಾಲೆಸೆದರು.
ಕಾರ್ಯರೂಪಕ್ಕೆ ಬಾರದ ಅನುದಾನ: ದೇವೇಗೌಡರ ಕುಟುಂಬ ಹಾಸನ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ತೋರಿಸಿದ ಪ್ರೀತಿಯನ್ನು ಮಂಡ್ಯ ಜಿಲ್ಲೆಗೇಕೆ ತೋರಿಸಲಿಲ್ಲ. ಚುನಾವಣೆ ಸಮೀಪಿಸುತಿದ್ದಂತೆಯೇ ಮಂಡ್ಯ ಜಿಲ್ಲೆಗೆ 5 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆಯೇ ಹೊರತು ಇನ್ನೂ
ಕಾರ್ಯರೂಪಕ್ಕೆ ಬಂದಿಲ್ಲ. ಇದೂ ಯಾರೋ ನೀಡುವ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು. ಯಾವುದೇ ಸರ್ಕಾರ ತನ್ನ ಜವಬ್ದಾರಿಯನ್ನು ಹೊತ್ತು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಈ ಐದು ಸಾವಿರ ಕೋಟಿ ಪ್ಯಾಕೇಜ್‌ನಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೂ ಸಲ್ಲಬೇಕಾಗುತ್ತದೆ ಎಂದು ಹೇಳಿದರು.