Advertisement

ಬಯಲು ಸೀಮೆಗೆ ನೀರು ಒದಗಿಸಲು ವಾಟಾಳ್‌ ಆಗ್ರಹ

12:17 PM Mar 15, 2017 | Team Udayavani |

ಬೆಂಗಳೂರು: ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಬಯಲುಸೀಮೆ ಪ್ರದೇಶದ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಘೋಷಿಸಬೇಕು. ಇಲ್ಲದಿದ್ದರೆ ಮಾ.18ರಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಎಚ್ಚರಿಕೆ ನೀಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ 40 ವರ್ಷಗಳ ನಂತರ ಭೀಕರ ಬರಗಾಲ ಕಾಣಿಸಿಕೊಂಡಿದೆ. ಬಯಲುಸೀಮೆ ಪ್ರದೇಶಗಳ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಅಲ್ಲದೇ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನ ಬೆಟ್ಟ ಮತ್ತು ಕಪ್ಪತಗುಡ್ಡ ಸೇರಿದಂತೆ ಇತರೆಡೆ ಅರಣ್ಯ ಬೆಂಕಿ ಕಾಣಿಸಿಕೊಂಡು ಸಾಕಷ್ಟು ಅರಣ್ಯ ಪ್ರದೇಶ ನಾಶವಾದರೂ ಸರ್ಕಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದೆ,” ಎಂದು ದೂರಿದರು.

“ರಾಜ್ಯದ ಬಹುತೇಕ ಕೆರೆಗಳು ನೀರಿಲ್ಲದೇ ಭಣಗುಡುತ್ತಿದ್ದು, ಹೂಳು ಪ್ರಮಾಣ ಹೆಚ್ಚುತ್ತಿದೆ. ನದಿ ಪಾತ್ರದ ಕೆರೆಗಳ ಹೂಳೆತ್ತಲು ಅವಕಾಶವಿದೆ. ಅರಣ್ಯಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಹೆಲಿಕಾಪ್ಟರ್‌ನಿಂದ ನೀರು ಹಾಯಿಸುವ ವಿಧಾನ ಸೇರಿದಂತೆ ಸುಧಾರಿತ ತಂತ್ರಜ್ಞಾನ ಬಳಕೆಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ವನ್ಯ ಮತ್ತು ಜೀವ ವೈವಿಧ್ಯವನ್ನು ಸಂರಕ್ಷಿಸಬೇಕು,” ಎಂದು ಸಲಹೆ ನೀಡಿದರು.

“ಮಹದಾಯಿ, ಕಳಸಾ -ಬಂಡೂರಿ ಯೋಜನೆ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯ ಪ್ರವೇಶ ಅಗತ್ಯ. ಸರ್ಕಾರ ಬಜೆಟ್‌ನಲ್ಲಿ ಬಯಲುಸೀಮೆ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾನಗರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಘೋಷಿಸದಿದ್ದರೆ ಮಾ.18ರಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು,” ಎಂದು ಹೇಳಿದರು. ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನದ ಸೇನೆ ಅಧ್ಯಕ್ಷ ಕೆ.ಆರ್‌.ಕುಮಾರ್‌, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next