ಬೆಂಗಳೂರು: ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ “ಖನಿಜ ರಕ್ಷಣಾ ಪಡೆ’ ರಚನೆಗೆ ಮುಂದಾಗಿದೆ. ಅಕ್ರಮ ಮರಳು, ಖನಿಜ ಮತ್ತು ಕಲ್ಲು ಗಣಿಗಾರಿಕೆ
ಮಾಡುವವರು ಪ್ರಭಾವಿಗಳಾಗಿದ್ದು ಅವರ ವಿರುದ್ಧ ದಾಳಿ ಮಾಡುವ ಸಂದರ್ಭದಲ್ಲಿ ಪೊಲೀಸರು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆಂಬ ಆರೋಪ ಇದೆ. ಹೀಗಾಗಿ ಗೃಹ ಇಲಾಖೆ ವ್ಯಾಪ್ತಿಯಲ್ಲಿರುವ ಪೊಲೀಸರನ್ನು ನೆಚ್ಚಿಕೊಂಡು ದಾಳಿ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ “ಖನಿಜ ರಕ್ಷಣಾ ಪಡೆ’ ರಚಿಸಲು ಗಣಿ ಇಲಾಖೆ ನಿರ್ಧರಿಸಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ವಿಶೇಷ ಪೊಲೀಸ್ ಪಡೆಯನ್ನು ಹೊಂದಲಿದ್ದು, ಆ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸಲು ಮುಂದಾಗಿದೆ. ಈ ಕುರಿತು ಈಗಾಗಲೇ ಗೃಹ ಇಲಾಖೆ ಜತೆ ಮಾತುಕತೆ ನಡೆದಿದ್ದು, ಗೃಹ ಸಚಿವ ಡಾ. ಪರಮೇಶ್ವರ್ ಸಹ ಖನಿಜ ರಕ್ಷಣಾ ಪಡೆಗಾಗಿ ವಿಶೇಷ ಪೊಲೀಸ್ ನೇಮಕಕ್ಕೆ ತಾತ್ವಿಕ ಒಪ್ಪಿಗೆಯನ್ನೂ
ನೀಡಿದ್ದಾರೆ. ರಾಜ್ಯದ 22 ಜಿಲ್ಲೆಗಳು ಮರಳು ದೊರೆಯುವ ಜಿಲ್ಲೆಗಳೆಂದು ಗುರುತಿಸಲಾಗಿದ್ದು, ಓರ್ವ ಎಸ್ಪಿ ಕೇಡರ್
ಅಧಿಕಾರಿ ಸೇರಿ ಒಟ್ಟು 445 ಪೊಲೀಸ್ ಸಿಬ್ಬಂದಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಲಿರುವ ಖನಿಜ ರಕ್ಷಣಾ ಪಡೆ, ಒಬ್ಬ ಎಸ್ಪಿ ನೇತೃತ್ವದಲ್ಲಿ ಓರ್ವ ಡಿವೈಎಸ್ಪಿ, ಓರ್ವ ಇನ್ಸ್‌ಪೆಕ್ಟರ್, 4 ಜನ ಸಬ್ ಇನ್ Õಪೆಕ್ಟರ್ ಸೇರಿ 20 ಸಿಬ್ಬಂದಿಯನ್ನು ಹೊಂದಲಿದೆ. ನಂತರ ವಿಭಾಗ ಮಟ್ಟದಲ್ಲಿಯೂ ಡಿಎಸ್‌ಪಿ ನೇತೃತ್ವದಲ್ಲಿ ಪ್ರತಿ ವಿಭಾಗದಲ್ಲಿಯೂ ಖನಿಜ ರಕ್ಷಣಾ ಪಡೆ ರಚನೆಯಾಗಲಿದೆ. ಜಿಲ್ಲಾ ಮಟ್ಟದಲ್ಲಿ ಸಿಪಿಐ ನೇತೃತ್ವದಲ್ಲಿ ತಂಡ ರಚನೆಯಾಗಲಿದೆ.
ಪೊಲೀಸರನ್ನು ಗಣಿ ಇಲಾಖೆ ನೇರವಾಗಿ ನೇಮಕ ಮಾಡಿಕೊಳ್ಳಲು ಬಾರದಿರುವುದರಿಂದ ಗೃಹ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ಗೃಹ ಇಲಾಖೆ ತಮ್ಮಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಎರವಲು ಸೇವೆಯ ಮೇಲೆಯಾದರೂ ಕೊಡಲಿ ಅಥವಾ ವಿಶೇಷ ನೇಮಕ ಮಾಡಿಯಾದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾಯಿಸಿದರೆ, ಅವರ ಸಂಬಳ, ಸಾರಿಗೆ, ಭತ್ಯೆ ಎಲ್ಲವನ್ನೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ನೋಡಿಕೊಳ್ಳಲು ತೀರ್ಮಾನಿಸಿದೆ.
ಗಣಿ ಇಲಾಖೆಯ ಈ ಪ್ರಸ್ತಾಪಕ್ಕೆ ಗೃಹ ಸಚಿವರು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಈ ಪ್ರಸ್ತಾಪವನ್ನು ಹಣಕಾಸು ಇಲಾಖೆಗೆ ಕಳುಹಿಸಿ ಕೊಡಲಾಗಿದೆ. ಹಣಕಾಸು ಇಲಾಖೆ ಮೂಲಗಳ ಪ್ರಕಾರ 445 ಅಧಿಕಾರಿಗಳಿಗೆ ಹೊಸ ನೇಮಕ ಮಾಡಿಕೊಳ್ಳಬೇಕಾದರೆ, ವಾರ್ಷಿಕ ಕನಿಷ್ಠ 5 ರಿಂದ 6 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಹೇಳಿದೆ.
ಅಲ್ಲದೇ, ಗಣಿ ಇಲಾಖೆಯ ಈ ಪ್ರಸ್ತಾಪಕ್ಕೆ ಪೊಲೀಸ್ ಇಲಾಖೆಯ ಅಭಿಪ್ರಾಯ ತಿಳಿಯಲು ಹಣಕಾಸು ಇಲಾಖೆ ಡಿಜಿ ಮತ್ತು ಐಜಿ ರೂಪಕ್ ಕುಮಾರ್ ದತ್ತಾ ಅವರಿಗೆ ಸ್ಪಷ್ಟನೆ ಕೋರಿದೆ ಎಂದು ತಿಳಿದು ಬಂದಿದೆ.