Advertisement

ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಯಾಗಿಸಲು ಹರಸಾಹಸ

08:41 PM Oct 12, 2019 | Lakshmi GovindaRaju |

ದೇವನಹಳ್ಳಿ: ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಗಾಗಿ ಸ್ಥಳೀಯ ಸಂಸ್ಥೆಗಳಿಂದ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ, ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಮಾರಾಟ ನಿರ್ಭೀತಿಯಿಂದ ನಡೆಯುತ್ತಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧ ಬಹುತೇಕ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಆಸಕ್ತಿಯನ್ನು ಅವಲಂಬಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂ, ತಾಪಂ ಮತ್ತು ಜಿಪಂಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ನಗರದ ಸ್ಥಳೀಯ ಸಂಸ್ಥೆಗಳು ಈಗಾಗಲೇ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ.

Advertisement

ಕಾಳಜಿಯ ಕೊರತೆ: ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದರೂ ಜನರು ಕಾಳಜಿ ತೋರುತ್ತಿಲ್ಲ. ವ್ಯಾಪಾರಿಗಳಿಂದ ಸ್ಪಂದಿಸುತ್ತಿಲ್ಲ. ಎಂಬವುದು ಅಧಿಕಾರಿಗಳ ಹೇಳಿಕೆಯಾಗಿದೆ. ಆದರೆ ಪ್ಲಾಸ್ಟಿಕ್‌ಗೆ ಪರ್ಯಾಯ ಮಾನದಂಡಗಳನ್ನು ತಿಳಿಸಿ ಸಭೆ ಮಾಡಬೇಕು ಎಂಬುವುದು ವರ್ತಕರ ಅಭಿಪ್ರಾಯವಾಗಿದೆ. ಅ.2ರ ಗಾಂಧೀ ಜಯಂತಿ ದಿನದಿಂದ ಪ್ಲಾಸ್ಟಿಕ್‌ ನಿಷೇಧ ಅಭಿಯಾನ ಚುರುಕುಗೊಂಡಿದ್ದರೂ, ಹಾನಿಕಾರ ಪ್ಲಾಸ್ಟಿಕ್‌ ಬಳಕೆ ನಿಷೇಧ ಜಾರಿ ಪರಿಣಾಮಕಾರಿಯಾಗಿ ಇಂದಿಗೂ ಸಾಧ್ಯವಾಗಿಲ್ಲ.

ವಿಮಾನ ನಿಲ್ದಾಣಕ್ಕೆ ಪ್ಲಾಸ್ಟಿಕ್‌ ಹಸ್ತಾಂತರ: ಜಿಲ್ಲಾಡಳಿತದ ಮಾಹಿತಿ ಪ್ರಕಾರ ದೇವನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಂದುವರೆ ಟನ್‌, ನೆಲಮಂಗಲ ಪುರಸಭೆ ವ್ಯಾಪ್ತಿಯಲ್ಲಿ ಒಂದುವರೆ ಟನ್‌, ದೊಡ್ಡಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿ 8 ಟನ್‌, ಹೊಸಕೋಟೆ ನಗರಸಭಾ ವ್ಯಾಪ್ತಿಯಲ್ಲಿ 2 ಟನ್‌ ಸೇರಿ ಒಟ್ಟು 13 ಟನ್‌ ಪ್ಲಾಸ್ಟಿಕ್‌ ಸಂಗ್ರಹಿಸಲಾಗಿದ್ದು, ಪ್ಲಾಸ್ಟಿಕ್‌ನಿಂದ ರಸ್ತೆ ಡಾಂಬರೀಕರಣ ಮಾಡುತ್ತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಸ್ತಾಂತರಿಸಲಾಗುತ್ತದೆ. 2018ರಲ್ಲಿ 58 ಸಾವಿರ ಹಾಗೂ 2019ರಲ್ಲಿ 72 ಸಾವಿರ ದಂಡ ಸಂಗ್ರಹಿಸಲಾಗಿದೆ.

ಜಾಗೃತಿ ಕಾರ್ಯಕ್ರಮ: ಜಿಲ್ಲಾಡಳಿತದಿಂದ ಶಾಲಾ ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಗ್ರಾಪಂ ವ್ಯಾಪ್ತಿಗಳಲ್ಲಿ ವಾರದಲ್ಲಿ ಒಂದು ದಿನ ಮನೆಮನೆಗೆ ತೆರಳಿ ಪ್ಲಾಸ್ಟಿಕ್‌ ಸಂಗ್ರಹಿಸುವ ಕೆಲಸ ಮಾಡಿ ತಿಳುವಳಿಕೆ ನೀಡಲಾಗುತ್ತಿದೆ. ಪ್ಲಾಸ್ಟಿಕ್‌ ವಿರುದ್ಧ ಹೋರಾಟ ನಡೆಸುವಲ್ಲಿ ಸ್ಥಳೀಯ ಸಂಸ್ಥೆಗಳು ದಿಟ್ಟ ಹೆಜ್ಜೆ ಇಟ್ಟಿವೆ. ಗ್ರಾಮೀಣ ಪ್ರದೇಶದಲ್ಲೂ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಹಳ್ಳಿ ಹಳ್ಳಿಗಳಲ್ಲೂ ಕಡ್ಡಾಯವಾಗಿ ಪ್ಲಾಸ್ಟಿಕ್‌ ನಿಷೇಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ.

ಬೀದಿ ನಾಟಕ: ಪ್ಲಾಸ್ಟಿಕ್‌ ನಿಷೇಧವೆಂದರೆ ಕೇವಲ ಪ್ಲಾಸ್ಟಿಕ್‌ನಂತಹ ಚೀಲ ಎಂದು ಜನರು ತಿಳಿದುಕೊಂಡಿದ್ದು, ಪ್ಲಾಸ್ಟಿಕ್‌ ಬಾಟೆಲ್‌ಗ‌ಳು, ವಿವಿಧ ಬ್ರಾಂಡ್‌ಗಳ ಸಿದ್ಧ ತಿನುಸುಗಳ ಪಟ್ಟಣಗಳು ಬಳಕೆಯಾಗುತ್ತಿವೆ. ಗಾಂಧೀ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರ ಸ್ವತ್ಛತಾ ಸೇವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಲಾ ಕಾಲೇಜು, ಸಂತೆಗಳಲ್ಲಿ, ಜನಸಂದಣಿ ಇರುವ ಜಾಗಗಳಲ್ಲಿ ಬೀದಿ ನಾಟಕ ಹಾಗೂ ಪ್ಲಾಸ್ಟಿಕ್‌ ದುಷ್ಪರಿಣಾಗಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬೆರಳೆಣಿಕೆಯಷ್ಟು ವ್ಯಾಪಾರಿಗಳು ಮಾತ್ರ ಪ್ಲಾಸ್ಟಿಕ್‌ ರಹಿತ ವಹಿವಾಟು ಮಾಡುತ್ತಿರೆ, ಕೆಲವು ವ್ಯಾಪಾರಿಗಳು ಗ್ರಾಹಕರು ಚೀಲ ತರುವಂತೆ ಪ್ರೋತ್ಸಾಹಿಸಿದ್ದಾರೆ.

Advertisement

ಪ್ಲಾಸ್ಟಿಕ್‌ ನಿಷೇಧದ ಕುರಿತು ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ಬೀದಿ ನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಮನೆಯಲ್ಲಿ ಪ್ಲಾಸ್ಟಿಕ್‌ ಬಳಸಬಾರದು ಎಂಬುವ ದೃಢ ಸಂಕಲ್ಪವನ್ನು ಜನರು ಮಾಡಬೇಕು. ಪ್ಲಾಸ್ಟಿಕ್‌ ಬಳಕೆ ಮಾಡದೇ ಇದ್ದರೇ ಮಾತ್ರ ಪ್ಲಾಸ್ಟಿಕ್‌ ನಿರ್ಮೂಲನೆ ಮಾಡಲು ಸಾಧ್ಯ.
-ದೇವನಹಳ್ಳಿ ದೇವರಾಜ್‌, ಪರಿವರ್ತನಾ ಕಲಾ ಸಂಸ್ಥೆ ಮುಖ್ಯಸ್ಥ

ಸರ್ಕಾರ ಎಷ್ಟೇ ಅರಿವು ಮೂಡಿಸಿದರೂ ಪ್ಲಾಸ್ಟಿಕ್‌ ಬಳಕೆ ನಡೆಯುತ್ತಲೇ ಇದೆ. ಪ್ಲಾಸ್ಟಿಕ್‌ ಮುಕ್ತ ಪರಿಸರ ಮಾಡಲು ಮೊದಲು ಪ್ಲಾಸ್ಟಿಕ್‌ ಸರಬರಾಜು ನಿಲ್ಲಿಸಬೇಕು. ಪ್ಲಾಸ್ಟಿಕ್‌ ಫ್ಯಾಕ್ಟರಿಗಳ ಮೇಲೆ ನಿರ್ಬಂಧ ಹೇರಬೇಕು. ಜನರಿಗೆ ಅರಿವು ಮೂಡಿಸುವುದು ತಪ್ಪಲ್ಲ ಅದೇ ರೀತಿ ಪ್ಲಾಸ್ಟಿಕ್‌ ಸಿಗದಂತೆ ಅಧಿಕಾರಗಳು ಎಚ್ಚರ ವಹಿಸಬೇಕು.
-ನರಸಪ್ಪ, ಅತ್ತಿಬೆಲೆ

ಪ್ಲಾಸ್ಟಿಕ್‌ ಮುಕ್ತ ಜಿಲ್ಲೆ ಮಾಡಲು ಎಲ್ಲಾ ರೀತಿಯ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯ 65 ಗ್ರಾಪಂಗಳಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಜಾಗ ಗುರ್ತಿಸಲಾಗಿದೆ. 4 ತಾಲೂಕಿನ ಸ್ಥಳೀಯ ಸಂಸ್ಥೆಗಳಲ್ಲಿ ಸಂಗ್ರಹಿಸಿರುವ ಪ್ಲಾಸ್ಟಿಕ್‌ಅನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀಡಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಲೋಟ, ತಟ್ಟೆ, ಇತರೆ ವಸ್ತುಗಳನ್ನು ನಿಷೇಧಿಸಲು ಆದೇಶ ನೀಡಲಾಗಿದೆ. ಉತ್ತಮ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಲು ಪ್ರತಿಯೊಬ್ಬರು ಕೈಜೋಡಿಸಬೇಕು.
-ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ

ಜಿಲ್ಲೆಯ ಶಾಲಾ ಕಾಲೇಜು, ಗ್ರಾಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧದ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ಜಿಲ್ಲೆಯಾಗಿಸಲು ಜಿಲ್ಲಾ ಪಂಚಾಯಿತಿಯಿಂದ ಪಣ ತೊಟ್ಟಿದೆ. ಪ್ಲಾಸ್ಟಿಕ್‌ ತ್ಯಜಿಸಿ ಪರಿಸರ ಉಳಿಸಿ ಎಂಬ ಘೋಷ ವಾಕ್ಯದಲ್ಲಿ ಜಿಲ್ಲೆಯ ಗ್ರಾಪಂಗಳಲ್ಲಿ ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರುವ ಯೋಜನೆಗೆ ಚಾಲನೆ ನೀಡಲಾಗಿದೆ. ಮನೆ ಮನೆಗೆ ತೆರಳಿ ಪ್ಲಾಸ್ಟಿಕ್‌ ಸಂಗ್ರಹಿಸುವಂತೆ ಗ್ರಾಪಂ ಸಿಬ್ಬಂದಿಗೆ ಸೂಚನೆ ನೀಡಲಾಗುತ್ತಿದೆ.
-ನಾಗರಾಜ್‌, ಜಿಪಂ ಸಿಇಒ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next