ಮುಂಬಯಿ, ಆ. 24: ಬಾಲ್ಯದಿಂ ದಲೂ ದುಷ್ಟ ಶಕ್ತಿಯನ್ನು ನಿಗ್ರಹಿಸಿದ ಭಗವಾನ್ ಶ್ರೀಕೃಷ್ಣನ ಹುಟ್ಟು ನಿಗೂಢವಾದ ವಿಶೇಷತೆಯಿಂದ ಕೂಡಿದೆ. ಸಂದರ್ಭೋಚಿತವಾಗಿ ಅಗತ್ಯಕ್ಕೆ ತಕ್ಕಂತೆ ತಂತ್ರಗಾರಿಕೆಯನ್ನು ಹೆಣೆದು ಗುರಿ ಮುಟ್ಟುವುದು ಆತನ ವಿಶಿಷ್ಟತೆಯಾಗಿದೆ. ಶ್ರೀಕೃಷ್ಣ ಮಾಡುವ ಕೆಲಸ ಕಾರ್ಯದ ಹಿಂದೆ ಧರ್ಮ ಸಂಸ್ಥಾಪನೆಯ ಉದ್ದೇಶ ಇತ್ತು ಎಂದು ಪಲಿಮಾರು ಮಠದ ಮುಖ್ಯ ಪ್ರಬಂಧಕ, ಟ್ರಸ್ಟಿ ವಿದ್ವಾನ್ ರಾಧಾಕೃಷ್ಣ ಭಟ್ ಅವರು ತಿಳಿಸಿದರು.
ಆ. 23ರಂದು ಅಪರಾಹ್ನ ಮೀರಾ ರೋಡು ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಜರಗಿದ ಶ್ರೀಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀ ರ್ವಚನ ನೀಡಿದ ಅವರು, ವ್ಯಕ್ತಿ ತನ್ನ ಜೀವನದಲ್ಲಿ ದಾನ, ಧರ್ಮ, ಸತ್ಯ ಸತ್ಕರ್ಮದೊಂದಿಗೆ ಬದುಕಬೇಕು. ಬದುಕಿನಲ್ಲಿ ಸದ್ಗತಿ ಹಾಗೂ ಯಶಸ್ಸು ಲಭಿಸಲು ಧರ್ಮ ನೀತಿಯ ಮಾರ್ಗ ಅನಿವಾರ್ಯವಾಗಿದೆ. ಅಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯ ಗಳೊಂದಿಗೆ ಹಬ್ಬಗಳನ್ನು ಆಚರಿಸಿದಾಗ ಅದು ಅರ್ಥ ಪೂರ್ಣವಾಗುವುದು ಎಂದು ಹೇಳಿದ ಅವರು ಮಧ್ಯ ರಾತ್ರಿ ಶ್ರೀ ಕೃಷ್ಣದೇವರಿಗೆ ಅಘ್ಯರ್ ಪ್ರದಾನ ಮಾಡಿಸಿದರು.
ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಇಚ್ಛೆ ಮತ್ತು ಸಂಕಲ್ಪದಂತೆ ಬೆಳಗ್ಗೆ ಸಹಸ್ರ ವಿಷ್ಣು ಪಾರಾಯಣ, ಲಕ್ಷ ತುಳಸಿ ಅರ್ಚನೆ, ಬಾಲಾಜಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು. ಅಪರಾಹ್ನ ಚಿತ್ರಕಲಾ, ಭಕ್ತಿ ಸಂಗೀತ, ರಂಗೋಲಿ ಸ್ಪರ್ಧೆಗಳು ಜರಗಿತು. ಶ್ರೀ ಬಾಲಾಜಿ ಮಂಡಳಿ ಮತ್ತು ವಿಜಯ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಕ್ತಿ ರಸ ಮಂಜರಿಯನ್ನು ಆಯೋಜಿಸಲಾಗಿತ್ತು. ಮರುದಿನ ಪಾಡ್ಯದಂದು ವಿವಿಧ ವಯೋಮಿತಿಯಲ್ಲಿ ಮುದ್ದು ಕೃಷ್ಣ ಮತ್ತು ಮುದ್ದು ರಾಧೆ ಸ್ಪರ್ಧೆಗಳು, ಆನಂತರ ಮೊಸರು ಕುಡಿಕೆ ಪರಿಸರದ ಭಕ್ತರಿಂದ ಜರಗಿತು.
ವಿದ್ವಾನ್ ಯತಿರಾಜ ಉಪಾ ಧ್ಯಾಯ, ನಂದಕುಮಾರ್ ಶೆಟ್ಟಿ, ಭಾರತಿ ಉಡುಪ, ವಸಂತಿ ಶೆಟ್ಟಿ ತೀರ್ಪುಗಾರರಾಗಿ ಉಪಸ್ಥಿತರಿದ್ದರು. ಗೋಪಾಲ್ ಭಟ್, ಯತಿರಾಜ ಉಪಾಧ್ಯಾಯ, ವಿಷ್ಣು ಪ್ರಸಾದ್ ಭಟ್, ಗಣೇಶ್ ಭಟ್, ಕಾರ್ತಿಕ್ ಉಪಾದ್ಯಾಯ, ವೆಂಕಟರಮಣ ಭಟ್ ಸಹಕರಿಸಿದರು. ಕರಮಚಂದ್ರ ಗೌಡ, ಶ್ರೀ ಬಾಲಾಜಿ ಭಜನ ಮಂಡಳಿ, ಮಹಿಳಾ ಸದಸ್ಯೆಯರು, ಭಕ್ತಾಧಿಗಳ ವ್ಯವಸ್ಥೆಗಳಿಗೆ ಸ್ಪಂದಿಸಿದರು. ತುಳು ಕನ್ನಡಿಗರು, ಪರಿಸರದ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ರಮೇಶ ಅಮೀನ್