Advertisement

ಶಿಕ್ಷಣ ಗುಣಮಟ್ಟ  ಸುಧಾರಣೆಗೆ ಕ್ರಮ ; ನ್ಯಾಕ್‌ ಮಾನದಂಡ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಸೂಚನೆ

10:01 AM Feb 14, 2020 | Hari Prasad |

ಬೆಂಗಳೂರು: ಗುಣಮಟ್ಟ ಸುಧಾರಿಸುವ ಮೂಲಕ ನ್ಯಾಕ್‌ ಶ್ರೇಯಾಂಕದಲ್ಲಿ ಹೆಚ್ಚಿನ ಅಂಕ ಗಳಿಸುವಂತೆ ರಾಜ್ಯದ ಎಲ್ಲ ಸರಕಾರಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಇದಕ್ಕಾಗಿ ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿ, ಅನುಷ್ಠಾನಕ್ಕೆ ತರುವಂತೆ ಸೂಚಿಸಿದೆ.

Advertisement

ನ್ಯಾಕ್‌ ಶ್ರೇಯಾಂಕದ ಆಧಾರದಲ್ಲಿ ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ (ರುಸಾ) ಅನುದಾನ ಸೇರಿದಂತೆ ವಿವಿಧ ಸೌಲಭ್ಯಗಳು ಸರಕಾರಿ ಕಾಲೇಜುಗಳಿಗೆ ಲಭ್ಯವಾಗುತ್ತವೆ. ಆದರೆ ರಾಜ್ಯದ ಸರಕಾರಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ನ್ಯಾಕ್‌ ಮೌಲ್ಯಮಾಪನದಲ್ಲಿ ಉತ್ತಮ ಅಂಕ ಗಳಿಸಲು ವಿಫ‌ಲವಾಗುವುದು ಕಾಲೇಜು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದು, ಹೀಗಾಗಿ ಈ ಕ್ರಮಕ್ಕೆ ಮುಂದಾಗಿದೆ.

ನ್ಯಾಕ್‌ ಮೌಲ್ಯಮಾಪನ ಮತ್ತು ಮರು ಮೌಲ್ಯಮಾಪನದ ಸಂದರ್ಭದಲ್ಲಿ ಹೆಚ್ಚಿನ ಅಂಕ ಗಳಿಸುವುದಕ್ಕಾಗಿ ನ್ಯಾಕ್‌ ಮಾರ್ಗ ದರ್ಶನದೊಂದಿಗೆ ಕೆಲವು ಮಾನದಂಡಗಳನ್ನು ರೂಪಿಸಲಾಗಿದೆ. ರಾಜ್ಯದ 411 ಕಾಲೇಜುಗಳ ಪ್ರಾಂಶುಪಾಲರಿಗೂ ಇದನ್ನು ಅಳವಡಿಸಿಕೊಳ್ಳುವಂತೆ ಇಲಾಖೆ ನಿರ್ದೇಶಿಸಿದೆ.

ಸಂಶೋಧನೆ, ಅನ್ವೇಷಣೆ ಮತ್ತು ವಿಸ್ತರಣೆ
ಪ್ರತಿ ಕಾಲೇಜಿನಲ್ಲೂ ಸಂಶೋಧನೆ, ಅನ್ವೇಷಣೆ ಮತ್ತು ಕಾರ್ಯ ವ್ಯಾಪ್ತಿ ವಿಸ್ತರಣೆಗೆ ಆದ್ಯತೆ ನೀಡಬೇಕು.

ಸುಧಾರಣೆಯ ಕ್ರಮಗಳು
– ನ್ಯಾಕ್‌ ನಿರೀಕ್ಷೆಯಂತೆ ಪದವಿ ಕಾಲೇಜಿನ ಪಠ್ಯಕ್ರಮದಲ್ಲಿ ಶೈಕ್ಷಣಿಕವಾರು ಆದ್ಯತೆ ಹೆಚ್ಚಾಗಬೇಕು.
– ವಿದ್ಯಾರ್ಥಿ, ಉಪನ್ಯಾಸಕರ ಫೀಡ್‌ಬ್ಯಾಕ್‌ ವ್ಯವಸ್ಥೆ ಸುಧಾರಿಸಬೇಕು.
– ಪಠ್ಯಕ್ರಮ ವಿದ್ಯಾರ್ಥಿಗಳಿಗೆ ತಲುಪುವಂತಿರಬೇಕು.
– ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನದಲ್ಲಿ ಸುಧಾರಣೆ ತರಬೇಕು.
– ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬೇಕು ಮತ್ತು ಅವರ ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಬೇಕು.
– ಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಒಳಗೊಳ್ಳುವಂತೆ ಪ್ರೋತ್ಸಾಹಿಸಬೇಕು ಮತ್ತು ಕಲಿಕಾ ಗುಣಮಟ್ಟವನ್ನು ಉನ್ನತೀಕರಿಸಬೇಕು.

Advertisement

ಸರಕಾರಿ ಕಾಲೇಜುಗಳ ಶೈಕ್ಷಣಿಕ ಮತ್ತು ಸೌಲಭ್ಯದ ಗುಣಮಟ್ಟ ಸುಧಾರಣೆಗಾಗಿ ನ್ಯಾಕ್‌ನ ನಿರ್ದೇಶಕರು ಕೆಲವು ಮಾರ್ಗಸೂಚಿ ನೀಡಿದ್ದಾರೆ. ಅದನ್ನು ಕಾಲೇಜುಗಳಲ್ಲಿ  ಅನುಷ್ಠಾನ ಮಾಡಿಕೊಳ್ಳಲು ನಿರ್ದೇಶನ ನೀಡಿದ್ದೇವೆ.
– ಪ್ರೊ| ಎಸ್‌. ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next