ಬೆಂಗಳೂರು: ನೆಲಮಂಗಲ ಬಳಿಯ ಸೋಂಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಉದ್ದೇಶಕ್ಕೆ ಭೂಮಿ ನೀಡಿದ ರೈತರಿಗೆ ಕೊಡುವ ಪರಿಹಾರ ಮೊತ್ತದಲ್ಲಿ ಶೇ.10ರಷ್ಟು ಹಣವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಲಂಚವಾಗಿ ಪಡೆಯುತ್ತಿದ್ದ ಅಕ್ರಮನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಯಲಿಗೆ ಎಳೆದಿದೆ.
ರೇಸ್‌ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು, ಮಂಗಳವಾರ ರಾತ್ರಿ ಇಡೀ ಶೋಧ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 12.96 ಲಕ್ಷ ರೂ. ನಗದು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೆ ರೈತರಿಂದ ಪಡೆದಿದ್ದ 13 ಬ್ಯಾಂಕ್ ಚೆಕ್‌ಗಳು, ಭೂ ದಾಖಲೆಗಳು ಸಿಕ್ಕಿವೆ. ಲಂಚದ ಹಣ ಸ್ವೀಕರಿಸಿ ಅಕ್ರಮ ಎಸಗುತ್ತಿದ್ದ ಒಬ್ಬ ಕೆಐಎಡಿಬಿ ಅಧಿಕಾರಿ, ಆರು ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ.
ಕೆಐಎಡಿಬಿ ಹಿರಿಯ ಸಹಾಯಕ ಎಸ್.ಎಲ್.ಎ ಓ-2 ಆಗಿರುವ ಶ್ರೀನಿವಾಸ್, ಮಧ್ಯವರ್ತಿಗಳಾದ ದೇವರಾಜ್, ನಾರಾಯಣ ಸ್ವಾಮಿ, ಜಗದೀಶ್, ನವೀನ್ ಕುಮಾರ್, ಸಮೀರ್ ಪಾಷ ಹಾಗೂ ಕೇಶವ ಬಂಧಿತ ಆರೋಪಿಗಳು. ಇನ್ನೂ ಹಲವು ಮಂದಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಸೋಂಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ 800 ಎಕರೆ ಭೂಮಿ ಸ್ವಾಧೀನ ಪಡೆಸಿಕೊಂಡಿದೆ.ಭೂಮಿ ನೀಡಿದ ರೈತರಿಗೆ ಪರಿಹಾರ ಮೊತ್ತವಾಗಿ ಇತ್ತೀಚೆಗೆ 50 ಕೋಟಿ ರೂ.ಗಳನ್ನು ಸೆ. 20ರಂದು ಮಂಜೂರು ಮಾಡಿದೆ. ಪರಿಹಾರ ಮೊತ್ತ ಪಡೆಯಲಿದ್ದ ರೈತರನ್ನು ಸಂಪರ್ಕಿಸಿದ್ದ ಮಧ್ಯವರ್ತಿಗಳು ಬೇಗನೇ ಪರಿಹಾರ ಮೊತ್ತ ಸಿಗಲು ಸರ್ಕಾರದಿಂದ ಸಿಗುವ ಪರಿಹಾರ ಹಣದಲ್ಲಿ ಶೇ 10ರಷ್ಟು ಹಣವನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಒಪ್ಪಿಕೊಂಡ ರೈತರ ಬಳಿ ಭದ್ರತೆಗಾಗಿ ಖಾಲಿ ಚೆಕ್‌ಗಳನ್ನು ಪಡೆದುಕೊಂಡಿದ್ದರು. ಕಮಿಷನ್ ನೀಡಲು ಒಪ್ಪದ ರೈತರ ಪರಿಹಾರದ ಕಡತಗಳನ್ನು ಮುಟುತ್ತಲೇ ಇರಲಿಲ್ಲ. ವಿನಾಕಾರಣ ಅವರನ್ನು ಅಲೆದಾಡಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.
ರೈತರಿಗೆ ನೀಡುವ ಪರಿಹಾರ ಹಣದಲ್ಲಿ ಕಮಿಷನ್ ಪಡೆಯುವ ದಂಧೆಯ ಕಿಂಗ್ ಪಿನ್ ಅಧಿಕಾರಿ ಶ್ರೀನಿವಾಸ್ ಎಂಬುದು ಗೊತ್ತಾಗಿದೆ. ಮಧ್ಯವರ್ತಿ ಸಮೀರ್ ಪಾಷಾ ಆಧಿಕಾರಿಗಳಿಗೆ ಲಂಚ ತಲುಪಿಸುತ್ತಿದ್ದ. ಇವರ ಜತೆ ಇನ್ನೂ ಅನೇಕ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆಯಿದೆ. ತನಿಖೆ ಬಳಿಕ ಉಳಿದವರ ಪಾತ್ರದ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಖನಿಜ ಭವನದ ನೆಲಮಹಡಿಯಲ್ಲಿ ಎಸಿಬಿ ಕಚೇರಿಯಿದ್ದು 4 ಮತ್ತು 5ನೇ ಮಹಡಿಯಲ್ಲಿ ಕೆಐಎಡಿಬಿಯ ವಿವಿಧ ವಿಭಾಗಗಳ ಕಚೇರಿಗಳಿವೆ. ಕೆಐಎಡಿಬಿ ಕಮಿಷನ್ ದಂಧೆಯ ದೂರು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಎಸಿಬಿ ಎಸ್ಪಿ ಡಾ. ಜಿನೇಂದ್ರ ಕಣಗಾವಿ, ಮೂರು ಮಂದಿ ಡಿವೈಎಸ್ಪಿಗಳು, ಇನ್ಸ್‌ಪೆಕ್ಟರ್‌ಗಳು ಸೇರಿ 50 ಸಿಬ್ಬಂದಿಗಳ ತಂಡ ಬುಧವಾರ ಮುಂಜಾನೆಯವರೆಗೂ ಶೋಧ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ ದಾಖಲೆಗಳನ್ನು ಜಪ್ತಿ ಮಾಡಿದೆ.