Advertisement

ಗೊಂದಲ ರಹಿತವಾಗಿ ಅಧಿಕಾರಕ್ಕೇರಲು ಪಣ

11:36 AM Mar 28, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಆಡಳಿತ ಪಕ್ಷ ಕಾಂಗ್ರೆಸ್‌ ಯಾವುದೇ ಗೊಂದಲಗಳಿಲ್ಲದೇ ಒಂದೇ ಹಂತದಲ್ಲಿ ಚುನಾವಣೆ ಎದುರಿಸಲು ಸನ್ನದ್ಧವಾದಂತಿದೆ. ರಾಜ್ಯದಲ್ಲಿ ಐದು ವರ್ಷ ಯಶಸ್ವಿಯಾಗಿ ಅಧಿಕಾರ ನಡೆಸಿ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸಿನಲ್ಲಿದ್ದಾರೆ.  

Advertisement

ಕಳೆದ ಆರು ತಿಂಗಳಿನಿಂದಲೇ ಕಾಂಗ್ರೆಸ್‌ ಪಕ್ಷ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವತಿಯಿಂದಲೇ ತಮ್ಮ 5ವರ್ಷದ ಸಾಧನೆಗಳನ್ನು ಜನರಿಗೆ ತಲುಪಿಸಲು ಸಾಧನಾ ಸಮಾವೇಶ ನಡೆಸಿ ಒಂದು ಹಂತದ ಚುನಾವಣಾ ಪ್ರಚಾರ ನಡೆಸಿದ್ದು  ಕೆಪಿಸಿಸಿ ವತಿಯಿಂದ ಪರಮೇಶ್ವರ್‌ ಪಕ್ಷ 2013 ರ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಿ ಸೋತ ಕ್ಷೇತ್ರಗಳಲ್ಲಿಯೂ ಸಂಚರಿಸಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರತಿ ಬೂತ್‌ನಲ್ಲಿಯೂ ಬೂತ್‌ ಸಮಿತಿ ರಚನೆ ಮಾಡಿ ತಳ ಮಟ್ಟದಲ್ಲಿ ಕಾರ್ಯಕರ್ತರನ್ನು ಪಕ್ಷದ ಚುನಾವಣೆಗೆ ಸಿದ್ಧಪಡಿಸಲಾಗಿದೆ. ಕಾರ್ಯಕರ್ತರಿಂದ ಮನೆಮನೆಗೆ ಕಾಂಗ್ರೆಸ್‌ ನಡೆಸಲಾಗಿದೆ.

ಯಶಸ್ವಿ ಜನಾಶೀರ್ವಾದ ಯಾತ್ರೆ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣೆಗೂ ಮುನ್ನವೇ ರಾಜ್ಯದ ಮುಕ್ಕಾಲು ಭಾಗ ಪ್ರವಾಸ ಮಾಡಿ ಜನಾಶೀರ್ವಾದ ಯಾತ್ರೆ ಕೈಗೊಂಡಿದ್ದು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ಬೆಂಗಳೂರು ವಿಭಾಗದ ಯಾತ್ರೆಯನ್ನೂ ಮಾಡುವ ಮೂಲಕ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ರಾಹುಲ್‌ ಮಾಡಲಿದ್ದಾರೆ.

ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನಾಯಕರ ನಡುವಿನ ಹೊಂದಾಣಿಕೆ ಚೆನ್ನಾಗಿದೆ. ಪಕ್ಷದ ಅಧ್ಯಕ್ಷ ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಆಂತರಿಕ ಭಿನ್ನಾಭಿಪ್ರಾಯ ಇದ್ದರೂ ಸರ್ಕಾರ ಮತ್ತು ಪಕ್ಷದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ನಡೆದುಕೊಳ್ಳುತ್ತಿರುವುದು ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌.  

Advertisement

ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಪ್ರಕರಣ, ಅಶೋಕ್‌ ಖೇಣಿ ಸೇರ್ಪಡೆ, ವೀರಪ್ಪ ಮೊಯಿಲಿ ಟ್ವೀಟ್‌ನಿಂದ ಸ್ವಲ್ಪ ಮಟ್ಟಿನ ಮುಜುಗರ ಎದುರಿಸುತ್ತಿದೆ. ಈ ಪ್ರಕರಣಗಳಿಂದ ಇಡೀ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವುಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡದಿರಲು ಕಾಂಗ್ರೆಸ್‌ ನಾಯಕರು ಯೋಚಿಸಿದ್ದಾರೆ. 

ಟಿಕೆಟ್‌ ಆಯ್ಕೆಯಲ್ಲಿ ಜಾಣತನ: ಟಿಕೆಟ್‌ ವಿಷಯದಲ್ಲಿ ಗೊಂದಲಗಳಿದ್ದರೂ, ಕಾಂಗ್ರೆಸ್‌ ನಾಯಕರು ಹಾಲಿ ಶಾಸಕರ ಕ್ಷೇತ್ರಗಳಲ್ಲಿಯೂ ಅರ್ಜಿ ಹಾಕಿರುವ ಆಕಾಂಕ್ಷಿಗಳ ಹೆಸರನ್ನು ಪಟ್ಟಿಯಲ್ಲಿ ಜೀವಂತ ಇರುವಂತೆ ನೋಡಿಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಯ ಸಮಯದವರೆಗೂ ಟಿಕೆಟ್‌ ಸಿಗುವ ಭರವಸೆ ಇಟ್ಟುಕೊಳ್ಳುವಂತೆ ಮಾಡಲಾಗಿದ್ದು, ಯಾವುದೇ ಟಿಕೆಟ್‌ ಆಕಾಂಕ್ಷಿ ಪಕ್ಷ ತೊರೆಯುವ ಆಲೋಚನೆ ಮಾಡದಂತೆ ನೋಡಿಕೊಳ್ಳಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ. ಬಂಡಾಯ ಏಳಲು ಅವಕಾಶ ನೀಡದೆ ಗೆಲುವು ಪಡೆಯುವ ತಂತ್ರ ರೂಪಿಸಿದೆ. 

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next