Advertisement

ಈ ಅಮಾನವೀಯ ಪದ್ಧತಿಗೆ ಕೊನೆ ಎಂದು?

01:04 AM Feb 01, 2024 | Team Udayavani |

ರಾಜ್ಯ ವೈಜ್ಞಾನಿಕವಾಗಿ, ಆರ್ಥಿಕವಾಗಿ ಪ್ರಗತಿಯ ಪಥದಲ್ಲಿದ್ದರೂ ಸಾಮಾಜಿಕ ವಾಗಿ ಕೆಲವೊಂದು ಕ್ಷೇತ್ರಗಳಲ್ಲಿ ಇನ್ನೂ ಅಮಾನವೀಯ ಯುಗದಲ್ಲಿರುವುದು ದುರಂತ. ರಾಜ್ಯದಲ್ಲಿ ಮಲಹೊರುವ ಪದ್ಧತಿ, ಮಲಗುಂಡಿಯನ್ನು ಮಾನವ ಸ್ವತ್ಛಗೊಳಿಸುವ ಪದ್ಧತಿ ನಿಷೇಧದಲ್ಲಿದ್ದರೂ ಅದಿನ್ನೂ ಎಗ್ಗಿಲ್ಲದೆ ನಡೆಯುತ್ತಿರುವುದು ಸ್ಪಷ್ಟ. ಮಂಗಳವಾರವಷ್ಟೇ ರಾಜ್ಯ ಸರಕಾರ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

Advertisement

ಕಳೆದ ಮೂವತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಮಲಗುಂಡಿಗೆ ಬಿದ್ದು 92 ಜನ ಸಾವನ್ನಪ್ಪಿದ್ದು, 47 ಪ್ರಕರಣಗಳು ದಾಖಲಾಗಿವೆ. ದುರಂತವೆಂದರೆ, ಈವರೆಗೆ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆಯಾಗಿದೆ. ಅದೇ ರೀತಿ “ಮನುಷ್ಯರಿಂದ ಮಲಗುಂಡಿಗಳನ್ನು ಸ್ವತ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ಉಲ್ಲಂಘನೆಯಡಿ 87 ಪ್ರಕರಣ ದಾಖಲಾಗಿದ್ದು, 6 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದ್ದಾಗಿ ರಾಜ್ಯ ಸರಕಾರ ಹೈಕೋರ್ಟ್‌ಗೆ ಹೇಳಿದೆ.

2013ರಿಂದ ಈವರೆಗೆ “ಮನುಷ್ಯರಿಂದ ಶೌಚಗುಂಡಿಗಳನ್ನು ಸ್ವತ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರಡಿ’ 87 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 11 ಪ್ರಕರಣಗಳನ್ನು ಎಸ್ಸಿ- ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಯಡಿ ದಾಖಲಿಸಿಕ ೊಳ್ಳ ಲಾಗಿದೆ. 28 ಪ್ರಕರ ಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು, 6 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. 21 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ ಗೊಂಡಿದ್ದಾರೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಜತೆಗೆ, ರಾಜ್ಯ ಸರಕಾರ ನಡೆಸಿದ ಸಮೀಕ್ಷೆಯಲ್ಲಿ 7,483 ಶೌಚಗುಂಡಿ ಸ್ವತ್ಛಗೊಳಿಸುವ ಕಾರ್ಮಿಕರನ್ನು ಗುರುತಿಸಲಾಗಿದ್ದು, ಕೇಂದ್ರ ಸರಕಾರ 1,833 ಕಾರ್ಮಿಕರಿಗೆ ತಲಾ 40 ಸಾವಿರ ರೂ. ಪರಿಹಾರ ಧನ ನೀಡಿದೆ. ಉಳಿದ ಕಾರ್ಮಿಕರಿಗೆ ರಾಜ್ಯ ಸರಕಾರ ತಲಾ 40 ಸಾವಿರ ರೂ. ಪಾವತಿಸಿದೆ.

ಈ ಅಮಾನವೀಯ ವ್ಯವಸ್ಥೆಯಿಂದ ನೊಂದವರಿಗೆ ಪರಿಹಾರ ನೀಡಲು ರಾಜ್ಯ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಶೌಚ ಗುಂಡಿ ಸ್ವತ್ಛತೆ ವೇಳೆ ಮೃತಪಟ್ಟವರ ಅವಲಂಬಿತರಿಗೆ ನೀಡುವ ಪರಿಹಾರ ರೂ. 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಪರಿಹಾರ ನೀಡುವುದರಿಂದಷ್ಟೇ ಸಮಸ್ಯೆ ಬಗೆಹರಿಯುವುದಿಲ್ಲ. ಈ ಕೆಟ್ಟ ವ್ಯವಸ್ಥೆಯನ್ನೇ ನಿರ್ಮೂಲನೆ ಮಾಡಬೇಕಾಗಿದೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನುಷ್ಯರಿಂದ ಶೌಚಗುಂಡಿಗಳನ್ನು ಸ್ವತ್ಛಗೊಳಿಸುವ ಪದ್ಧತಿಯನ್ನು ನಿಲ್ಲಿಸಲೇಬೇಕು. ಯಾರಾದರೂ ಮ್ಯಾನ್ಯುವಲ್‌ ಕೆಲಸ ಮಾಡಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಕಾಳಜಿ ಶ್ಲಾಘನೀಯ. ಇದರ ಜತೆಗೆ ಮಲಹೊರುವ ಅಥವಾ ಮಲಗುಂಡಿ ಸ್ವತ್ಛಗೊಳಿಸುವ ಪದ್ಧತಿ ಎಲ್ಲಿಯೂ ಆಗದ ಹಾಗೆ ನೋಡಿಕೊಳ್ಳಬೇಕಿರುವುದು ಅಧಿಕಾರಿಗಳ ಕರ್ತವ್ಯ ಕೂಡ. ಒಂದು ಲೆಕ್ಕಾಚಾರದ ಪ್ರಕಾರ ದೇಶದಲ್ಲಿ 50,000ಕ್ಕೂ ಹೆಚ್ಚು ಮಂದಿ ಶೌಚಗುಂಡಿಗಳನ್ನು ಸ್ವತ್ಛಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಜತೆಗೂಡಿ ಈ ಪದ್ಧತಿಯ ನಿರ್ಮೂಲನೆಗೆ ಪ್ರಯತ್ನಿಸಬೇಕು. ಅತ್ಯಾಧುನಿಕ ಯಂತ್ರಗಳ ಸಹಿತ ಹಲವು ಮೂಲಸೌಕರ್ಯಗಳನ್ನು ಈ ನಿಟ್ಟಿನಲ್ಲಿ ಒದಗಿಸುವುದು ಸರಕಾರದ ಕರ್ತವ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next