ಉಪ್ಪಿನಂಗಡಿ: ತಣ್ಣೀರುಪಂತ ಶಾಲಾ ಕೊಠಡಿ ಕೆಡವಲು ಎಂಜಿನಿಯರ್ ವಿಭಾಗದ ವರದಿಯನ್ನು ಆಧಾರಿಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಅವರು ಸಭೆ ಕರೆದು ಸಂಪೂರ್ಣ ಹೊಣೆ ಪಂಚಾಯತ್‌ಗೆ ವಹಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಲಾಯಿತು.
ಶನಿವಾರ ಬೆಳಗ್ಗೆ ಸರಕಾರಿ ಹಿರಿಯ ಉನ್ನತೀಕರಿಸಿದ ಶಾಲೆಯಲ್ಲಿ ಪಂಚಾಯತ್‌ನ ಪರವಾಗಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ಸದಾನಂದ ಮಡಪಾಡಿ ಅವರನ್ನು ಕಳುಹಿಸಿ ಕೊಟ್ಟಿದ್ದು, ಸಮಸ್ಯೆ ಬಗೆಹರಿಸಲು ಯಶಸ್ವಿಯಾದರು.
ಸಭೆ ಆರಂಭವಾಗುತ್ತಿದ್ದಂತೆ ಶಿಥಿಲಗೊಂಡ ಕಟ್ಟಡದ ಅಜೆಂಡಾವೇ ಬಹುಮುಖ್ಯವಾಗಿದೆ. ಜಿ.ಪಂ. ಎಂಜಿನಿ ಯರ್ ಕಟ್ಟಡವನ್ನು ಕೆಡವಲು 38 ಸಾವಿರ ಹಣ ತೆತ್ತು ಕಾಮಗಾರಿ ವಹಿಸಲು ಈ ಕಟ್ಟಡದಿಂದ ಗುತ್ತಿಗೆ ವಹಿಸಿ ಕೊಂಡಾತನಿಗೆ ಯಾವುದೇ ಲಾಭ ಬಾರದೇ ನಷ್ಟ ಹೆಚ್ಚು ಇರುವುದರಿಂದ ಎಂಜಿನಿಯರ್ ವರದಿಯನ್ನು ತಳ್ಳಿ ಹಾಕುವಂತಾಯಿತು. ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಕಟ್ಟಡ ಕೆಡವಲು ಹೊರಿಸಿದ ವೆಚ್ಚವನ್ನು ಇಲಾಖೆಯೇ ಭರಿಸಲಿ ಮತ್ತು ಅದರ ಸಾಮಗ್ರಿಗಳನ್ನು ಅವರೇ ಕೊಂಡೊಯ್ಯಲಿ ಎಂದು ಹೇಳಿದರು.
ಪರಸ್ಪರ ವಿಮರ್ಶೆ ಬಳಿಕ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ ಅವರ ಪರವಾಗಿ ಆಗಮಿಸಿದ್ದ ಸದಸ್ಯ ಸದಾನಂದ ಶೆಟ್ಟಿ ಮಾತನಾಡಿ, ಪಂಚಾಯತ್ ತನ್ನ ಸ್ವಂತ ಅನುದಾನದಲ್ಲಿ ಕಟ್ಟಡ ಕೆಡವಿ ಅದರಲ್ಲಿ ದೊರೆತ ಸಾಮಗ್ರಿಗಳನ್ನು ಶಾಲಾ ವಠಾರದಲ್ಲಿ ಸಂಗ್ರಹಿಸಿಟ್ಟು, ಬಹಿರಂಗ ಹರಾಜು ಮಾಡಿ ಬಂದ ಹಣವನ್ನು ಇಲಾಖೆಗೆ ಕಳುಹಿಸಿ ಕೊಡುವ ನಿರ್ಣಯಕ್ಕೆ ಅಂತಿಮವಾಗಿ ಬಂದು ಎಲ್ಲ ಗೊಂದಲಗಳಿಗೆ ತೆರೆ ಎಳೆದರು.