ಸಮಯ ಸಾಲುತ್ತಿಲ್ಲ, ಯಾವುದನ್ನು ಮಾಡುವುದಕ್ಕೂ ಸಮಯವಿಲ್ಲ, ದಿನಕ್ಕೆ ಇನ್ನೊಂದಷ್ಟು ತಾಸು ಹೆಚ್ಚು ಇರುತ್ತಿದ್ದರೆ ಏನಾದರೂ ಮಾಡಬಹುದಿತ್ತು ಎಂಬ ದೂರು ಬಹುತೇಕ ಎಲ್ಲರದು. ಈಗಿನ ಕಾಲ ಘಟ್ಟವೇ ಹಾಗೆ. ಎಲ್ಲರೂ ಹತ್ತು ಹಲವನ್ನು ರಾಶಿ ಹಾಕಿಕೊಂಡು ಮಾಡಿ ಮುಗಿಸುವ ಧಾವಂತದಲ್ಲಿರುತ್ತಾರೆ. ಇನ್ನಷ್ಟು ಹೆಚ್ಚು ಹಣ ಮಾಡಬೇಕು, ಮಕ್ಕಳು – ಮೊಮ್ಮಕ್ಕಳು ಕೂಡ ಕೂತು ಉಣ್ಣುವಷ್ಟು ಪೇರಿಸಿ ಇಡಬೇಕು ಎಂಬ ಆಶೆ.
ಸದ್ಗುರು ಜಗ್ಗಿ ವಾಸುದೇವ್ ತಾನು ಅಮೆರಿಕದಲ್ಲಿ ಕಂಡ ಒಂದು ಸಂಗತಿಯನ್ನು ವಿವರಿಸುತ್ತಾರೆ. ಅಲ್ಲೊಬ್ಬರ ಮನೆಗೆ ಸದ್ಗುರು ಅತಿಥಿಯಾಗಿ ಹೋಗಿದ್ದರು. ಅಲ್ಲಿ ಸದ್ಗುರು ವಿಶ್ರಾಂತಿಯ ಕೊಠಡಿ ಎಂದುಕೊಂಡು ಒಂದು ಕೊಠಡಿಯ ಬಾಗಿಲು ತೆರೆದರಂತೆ. ಅದೊಂದು ಉಗ್ರಾಣವಾಗಿತ್ತು. ಅಲ್ಲಿ ಗೋಡೆಯ ಮೇಲೆ ರ್ಯಾಕ್‌ನಲ್ಲಿ ಸಾಲು ಸಾಲಾಗಿ ಐದು ನೂರಕ್ಕೂ ಹೆಚ್ಚು ಜೋಡಿ ಪಾದರಕ್ಷೆಗಳನ್ನು ಜೋಡಿಸಿಡಲಾಗಿತ್ತು.
ಸದ್ಗುರು ತನ್ನ ಆತಿಥ್ಯ ವಹಿಸಿಕೊಂಡ ಮಹಾಶಯ ನಿಗೆ ಹೇಳಿದರಂತೆ: “ನೀವು ಮನೆಯೊಳಗೆ ನಡೆದಾ ಡಲು, ಗಾಲ್ಫ್ ಆಡಲು, ಕಚೇರಿಗೆ ಹೋಗಲು, ಪಾರ್ಟಿಗೆ ತೆರಳಲು – ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಇಪ್ಪತ್ತು ಪಾದರಕ್ಷೆಗಳನ್ನು ಶೇಖರಿಸಿಟ್ಟುಕೊಂಡಿದ್ದರೆ ಅದರಲ್ಲೇನೂ ತಪ್ಪಿಲ್ಲ. ಐವತ್ತು ಬಗೆಯ ಉಡುಗೆಗಳು ಬೇಕಾಗಬಹುದು. ಆದರೆ ಐದುನೂರಕ್ಕೂ ಮಿಕ್ಕಿ ಪಾದರಕ್ಷೆಗಳು! ನಿಮಗೆ ಕಾಲುಗಳಾ ದರೂ ನಾಲ್ಕಿವೆಯೇ? ಇಲ್ಲ, ಅವೂ ಎರಡೇ! ನೀವು ಇನ್ನೆರಡು ಜನ್ಮ ಎತ್ತಿ ಬಂದರೂ ಅಷ್ಟು ಪಾದರಕ್ಷೆಗಳನ್ನು ಧರಿಸಿ ಮುಗಿಯದು!
ನಮ್ಮ ಕೊಳ್ಳುಬಾಕತನ, ಶೇಖರಿಸಿಟ್ಟು ಕೊಳ್ಳುವ ಚಟ ಕೆಲವೊಮ್ಮೆ ಹೀಗಿರುತ್ತದೆ. ಅದಕ್ಕೇ ನಮಗೆ ಸಮಯ ಸಾಕಾಗುವುದಿಲ್ಲ. ಈ ಶೇಖರಿಸುವ ಭರದಲ್ಲಿ ನಾವು ನಿಜವಾಗಿ ನಮಗೆ ಏನು ಆಪ್ತವೋ, ಯಾವುದು ಬದುಕಿ ನಲ್ಲಿ ಖುಷಿ-ಉಲ್ಲಾಸ, ಸಂತಸಗಳನ್ನು ಕೊಡು ತ್ತದೆಯೋ ಅದ್ಯಾವುದನ್ನೂ ಮಾಡುವುದಿಲ್ಲ. ಹಾಗಾಗಿ ಬದುಕು ಯಾಂತ್ರಿಕವಾಗಿರುತ್ತದೆ. ಸಂಜೆ ಕಚೇರಿಯಿಂದ, ಕೆಲಸದಿಂದ ಹ್ಯಾಪು ಮೋರೆ ಹಾಕಿಕೊಂಡು ಮನೆಗೆ ಬರುವುದನ್ನು ಕಲ್ಪಿಸಿಕೊಳ್ಳಿ. ಮೂರು ಪೀಳಿಗೆಗೂ ಮುಗಿಯ ಬಾರದು ಎಂಬಷ್ಟನ್ನು ಗುಡ್ಡೆ ಹಾಕಿಕೊಳ್ಳುವ ಉದ್ದೇಶವೇ ನಮ್ಮನ್ನು ಹಾಗೆ ಮಾಡುವುದು.
ಬದುಕುವುದಕ್ಕಾಗಿ ಸಾಯುವುದು ಎಂದರೆ ಇದು ಎನ್ನುತ್ತಾರೆ ಸದ್ಗುರು. ನಮಗೆ ಇಷ್ಟವಲ್ಲದ್ದನ್ನು, ಸಂತೃಪ್ತಿ ಕೊಡದ್ದನ್ನು ಕೈಗೊಳ್ಳುವುದು. ಭದ್ರ ಬದುಕಿಗಾಗುವಷ್ಟು, ಹಸಿವಾದಾಗ ಉಣ್ಣುವಷ್ಟು, ಒಳ್ಳೆಯ ಬಟ್ಟೆ ಗಳನ್ನು ತೊಟ್ಟುಕೊಳ್ಳುವಷ್ಟು, ನಾವು ಮತ್ತು ಮಕ್ಕಳು ಹಾಯಾಗಿ ಇರುವಂತಹ ಮನೆ ಕಟ್ಟಿಕೊಳ್ಳುವಷ್ಟು ಸಂಪಾದನೆ ಮಾಡುವುದು ತಪ್ಪಲ್ಲ. ಅದಾದ ಬಳಿಕದ ಸಮಯ ನಾವು ಯಾವುದನ್ನು ಪ್ರೀತಿಸು ತ್ತೇವೆಯೋ ಅದಕ್ಕಾಗಿ ಮೀಸಲು ಇರಿಸಿಕೊಳ್ಳೋಣ. ನಮ್ಮೊಳಗನ್ನು ನಾವು ಮಾತನಾಡಿಸಿಕೊಳ್ಳುವುದಕ್ಕೆ, ನಮ್ಮ ಇಷ್ಟಗಳಿಗೆ ತುಡಿಯು ವುದಕ್ಕೆ ಈ ಸಮಯ ಮೀಸಲಾಗಿರಲಿ. ನಾವು ಯಾವುದನ್ನು ಇಷ್ಟಪಡು ತ್ತೇವೆಯೋ ಅದರಲ್ಲಿ ತೊಡಗುವುದು ದೈಹಿಕವಾಗಿ ಶ್ರಮ ನೀಡಿದರೂ ಮಾನಸಿಕವಾಗಿ ಅತೀವ ಸಂತೃಪ್ತಿಯನ್ನು ಕೊಡುತ್ತದೆ. ಇವತ್ತಿನ ಬದುಕನ್ನು ತೀವ್ರವಾಗಿ ಪ್ರೀತಿಸಿ, ಸಂಪೂರ್ಣವಾಗಿ ಬದುಕೋಣ. ನಮ್ಮವರನ್ನು, ನಮ್ಮ ಪ್ರೀತಿಪಾತ್ರರನ್ನು ಪ್ರೀತಿಸುತ್ತ ಜೀವಿಸೋಣ.
ಇವತ್ತಿನ ಬದುಕು ನಮ್ಮ ಕೈಯಲ್ಲಿದೆ. ನಾಳೆ ಧರಿಸಬೇಕಿರುವ ನೂರೈವತ್ತು ಜತೆ ಪಾದರಕ್ಷೆ ಖರೀದಿಗಾಗಿ ಈ ದಿನದ ಬದುಕನ್ನಿಡೀ ತೇಯುವುದಲ್ಲ. ಆಹಾರ, ಸೂರು, ಘನತೆಯ ಬಾಳುವೆ – ಇವಕ್ಕೆಷ್ಟು ಬೇಕೋ ಅಷ್ಟರ ಗಳಿಕೆಗಾಗಿ ದುಡಿದು ಉಳಿದ ಸಮಯ ನಮಗಾಗಿ, ನಮ್ಮವರಿಗಾಗಿ ಮೀಸಲಾಗಲಿ.
( ಸಾರ ಸಂಗ್ರಹ)
ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು edit@udayavani.comಗೆ ಕಳುಹಿಸಬಹುದು.
ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.