Advertisement

ಮಲಿನವಾಗುತ್ತಿದೆ ರಾಮಸಮುದ್ರದ ಒಡಲು

11:03 PM Jan 09, 2020 | Sriram |

ನೀರಿನ ಮೂಲಗಳನ್ನು ಸಂರಕ್ಷಿಸಬೇಕೆನ್ನುವ ಘೋಷಣೆ ಬರೆಯ ಘೋಷಣೆಯಾಗಿ ಮಾತ್ರ ಉಳಿದಿದೆ. ಈ ಬಗ್ಗೆ ಆಡಳಿತಗಳು ಬದ್ಧತೆ ತೋರದೇ ಇರುವುದರಿಂದ ನಾವು ನೀರಿನ ಮೂಲಗಳನ್ನು ಕಳೆದುಕೊಳ್ಳುತ್ತಿದ್ದೇವೆ.

Advertisement

ಕಾರ್ಕಳ
: ನೀರು ಅತ್ಯಮೂಲ್ಯ. ಜೀವಜಲದ ರಕ್ಷಣೆ ಪ್ರತಿಯೋರ್ವನ ಆದ್ಯತೆ. ನಗರಕ್ಕೆ ವರದಾನವಾಗಿರುವ ರಾಮಸಮುದ್ರದ ಒಡಲು ಇತ್ತೀಚೆಗೆ ಮಲಿನವಾಗುತ್ತಿದ್ದು, ಕುಡಿಯುವುದಕ್ಕೆ ಅಸಾಧ್ಯ ಎಂಬಂತಿದೆ. ಕಡು ಬೇಸಗೆಯಲ್ಲಿ ನಗರಕ್ಕೆ ರಾಮಸಮುದ್ರ ನೀರಿನ ಮೂಲ. ಆದರೆ ಇದೇ ನೀರಿನಲ್ಲಿ ಅಮೂಲ್ಯವಾದ ನೀರಿನಲ್ಲೇ ಬಟ್ಟೆ ಒಗೆಯುವುದು, ಈಜುವುದು, ಪ್ರಾಣಿಗಳನ್ನು ಸ್ನಾನ ಮಾಡಿಸುವುದು, ತ್ಯಾಜ್ಯ ಎಸೆಯುವುದು ಕಂಡುಬರುತ್ತಿದೆ. ಈ ರೀತಿ ನೀರು ಕಲುಷಿತಗೊಳಿಸುವುದರಿಂದ ಬೇಸಗೆ ಸಂದರ್ಭ ಇದೇ ಮಾಲಿನ್ಯ ಯುಕ್ತ ನೀರನ್ನು ಬಳಸಬೇಕಾಗಿರುವುದು ವಿಪರ್ಯಾಸ.

ಅತಿ ವಿಸ್ತಾರದ ಕೆರೆ
ಸುತ್ತಲೂ ಪ್ರಕೃತಿದತ್ತ ಕಲ್ಲುಬಂಡೆಗಳಿಂದಲೇ ಆವೃತವಾಗಿರುವ ಈ ಬೃಹತ್‌ ಕೆರೆ ಸುಮಾರು 47 ಎಕ್ರೆಯಷ್ಟು ವಿಸ್ತಾರದಿಂದ ಕೂಡಿದೆ. ಸರ್ವೆ ನಂಬರ್‌ 540/1ರಲ್ಲಿ 4. 18 ಎಕ್ರೆ, 542/1ರಲ್ಲಿ 20.11 ಎಕ್ರೆ, 551/1ಎಯಲ್ಲಿ 22.56 ಎಕ್ರೆ ಹೊಂದಿದ್ದು, ಇಲ್ಲಿ ಸಮೃದ್ಧವಾಗಿ ನೀರು ತುಂಬಿದೆ. ಈ ಬಾರಿ ಬೇಸಗೆಯಲ್ಲಿ ಇಡೀ ನಗರದಲ್ಲಿ ನೀರಿನ ಅಭಾವವಿದ್ದಾಗ ಇದೇ ಕೆರೆ ನೀರು ಪೂರೈಸಿತ್ತು.

ಹೂಳೆತ್ತುವ ಕಾರ್ಯವಾಗಲಿ
ಈ ಕೆರೆಯಲ್ಲಿ ಸಂಪೂರ್ಣ ಹೂಳು ತುಂಬಿ ಹೋಗಿದೆ. ಅದನ್ನು ತೆಗೆದಲ್ಲಿ ಕಾರ್ಕಳಕ್ಕೆ ನೀರಿನ ಬರ ಬಂದೊದಗದು. ಬೇಸಗೆ ಕಾಲದಲ್ಲಿ ತಾತ್ಕಾಲಿಕವಾಗಿ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಕೋಟಿಗಟ್ಟೆಲೆ ರೂ. ಖರ್ಚು ಮಾಡುವ ಸರಕಾರ ಇಂತಹ ಕೆರೆಗಳ ಅಭಿವೃದ್ಧಿಪಡಿಸಿ, ಶಾಶ್ವತವಾಗಿ ನೀರಿನ ಕೊರತೆಯನ್ನು ಬಹುತೇಕ ಕಡಿಮೆ ಮಾಡಬಹುದಾಗಿದೆ. ಸಾರ್ವಜನಿಕರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬಾವಿ, ಬೋರ್‌ವೆಲ್‌ ಕೊರೆಸಲು ಮುಂದಾಗುತ್ತದೆಯೇ ವಿನಾ ರಾಮಸಮುದ್ರ ಅಭಿವೃದ್ಧಿ ಪಡಿಸುವತ್ತ ಗಮನ ಹರಿಸುತ್ತಿಲ್ಲ.

ನೀರಿನ ಸಂರಕ್ಷಣೆ
ಜೀವಜಲದ ಸಂರಕ್ಷಣೆ ನಮ್ಮೆಲ್ಲ ಹೊಣೆಯಾಗಬೇಕು. ಹನಿನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾದಾಗ ಅದರ ಬವಣೆ ಅರಿವಿಗೆ ಬರುವುದು. ನೀರಿನ ಮೂಲವನ್ನು ಕಲುಷಿತಗೊಳಿಸದೇ ಸಂರಕ್ಷಣೆ ಮಾಡುವುದು ಅತಿ ಅಗತ್ಯ. ಮಲಿನಗೊಂಡ ನೀರನ್ನು ಬಳಕೆ ಮಾಡುವುದರಿಂದ ಆರೋಗ್ಯ ಮೇಲೆ ಪರಿಣಾಮ ಬೀರುವುದು. ಜಾಂಡಿಸ್‌ (ಹೆಪಟೈಟಿಸ್‌ ಎ) ಟೈಫಾçಡ್‌, ಜ್ವರ, ವಾಂತಿ ಭೇದಿ, ಚರ್ಮರೋಗ ಸಂಬಂಧಿ ಕಾಯಿಲೆಗಳು ಸಂಭವಿಸುವ ಸಾಧ್ಯತೆ ಅಧಿಕ.

Advertisement

ಪಾರ್ಕ್‌ ನಿರ್ಮಾಣವಾಗಿತ್ತು
1996ರಲ್ಲಿ ರಾಮಸಮುದ್ರ ಮೇಲ್ಭಾಗದಲ್ಲಿ ಕಲ್ಲಿನ ಬೆಂಚು ಅಳವಡಿಸಿ, ಮಕ್ಕಳಿಗೆ ಉಯ್ನಾಲೆಯಂತ ಪರಿಕರ ಜೋಡಿಸಿ ಸುಂದರವಾದ ಪಾರ್ಕ್‌ ನಿರ್ಮಾಣ ಮಾಡಲಾಗಿತ್ತು.

ಕೆಲ ಈಜುಪಟುಗಳು ರಾಮಸಮುದ್ರವನ್ನು ಈಜಾಡಲು ಬಳಸುತ್ತಾರೆ. ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಸರಕಾರದ ವತಿಯಿಂದಲೇ ನಿರ್ಮಾಣವಾಗಿರುವ ಈಜುಕೊಳವಿರುವಾಗ ರಾಮಸಮುದ್ರದಲ್ಲಿ ಈಜುವುದಾದರೂ ಏತಕ್ಕೆ ? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರದ್ದು.

ನೀರಾವರಿ
ರಾಮಸಮುದ್ರ ಕೆರೆ ಸುಸ್ಥಿತಿಯಲ್ಲಿಡುವುದು ಕಾರ್ಕಳ ಪುರಸಭೆಯ ಮುಖ್ಯ ಆದ್ಯತೆಯಾಗಲಿ ಎಂಬುದು ಆಶಯ.

ಭಕ್ತರಲ್ಲೂ ಆತಂಕ
ಕೆಲವೊಂದು ವಾರ್ಷಿಕ ಧಾರ್ಮಿಕ ವಿಧಿ ವಿಧಾನಗಳು ಇದೇ ರಾಮಸಮುದ್ರದಲ್ಲಿ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ರಾಮಸಮುದ್ರ ಇದೇ ರೀತಿ ಮಲಿನಗೊಳ್ಳುತ್ತಾ ಹೋದರೆ ಮುಂದೆ ಇಲ್ಲಿ ಹೇಗೆ ಧಾರ್ಮಿಕ ವಿಧಿ ವಿಧಾನಗಳನ್ನು ಮುಂದುವರೆಸಿಕೊಂಡು ಹೋಗುವುದು ಎಂಬುದು ಭಕ್ತರ ಆತಂಕ. ನೀರು ಮಲಿನಗೊಳಿಸುವುದನ್ನು ತಡೆಯಬೇಕು ಎಂಬುದು ಭಕ್ತರ ಆಗ್ರಹವಾಗಿದೆ.

ಚರ್ಚಿಸಿ ಸೂಕ್ತ ಕ್ರಮ
ಕುಡಿಯುವ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಈ ಕುರಿತು ಕಾರ್ಕಳ ಪುರಸಭೆ ಮುಖ್ಯಧಿಕಾರಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಜಿ.ಜಗದೀಶ್‌,
ಜಿಲ್ಲಾಧಿಕಾರಿಗಳು

ಕ್ರಿಯಾಯೋಜನೆ
ಬಟ್ಟೆ ಒಗೆಯಲು ಅಲ್ಲಿಗಾಗಮಿಸುವ ಜನರಿಗೆ ಪತ್ಯೇಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ರಾಮಸಮುದ್ರದ ಸುತ್ತು ತಡೆಬೇಲಿ ನಿರ್ಮಾಣ ಮಾಡುವ ಕುರಿತು ಕ್ರಿಯಾಯೋಜನೆ ರೂಪಿಸಲಾಗುವುದು.
-ರೇಖಾ ಜೆ. ಶೆಟ್ಟಿ,
ಪುರಸಭೆ ಮುಖ್ಯಾಧಿಕಾರಿ ಕಾರ್ಕಳ

ರೋಗ ಸಂಭವ
ಕಲುಷಿತ ನೀರು ಕುಡಿಯುವುದರಿಂದ ಅಥವಾ ಅಡುಗೆ ಕಾರ್ಯಕ್ಕೆ ಬಳಸುವುದರಿಂದ ಜಾಂಡಿಸ್‌ (ಹೆಪಟೈಟಿಸ್‌ ಎ) ಟೈಫಾçಡ್‌, ಜ್ವರ, ವಾಂತಿ ಭೇದಿ ಇತ್ಯಾದಿ ರೋಗಗಳು ಬರುವ ಸಂಭವ ಹೆಚ್ಚು.
-ಡಾ| ಕೃಷ್ಣಾನಂದ ಶೆಟ್ಟಿ,
ತಾಲೂಕು ಆರೋಗ್ಯಾಧಿಕಾರಿ

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next