ಶಿಗ್ಗಾವಿ: ಮದುವೆಗೆ ಲಕ್ಷಾಂತರ ಹಣ ವ್ಯಯಿಸಿ ದುಂದುವೆಚ್ಚ ಮಾಡಿ ಇಡೀ ಜೀವನ ಸಾಲ ತೀರಿಸಲು ಕಳೆಯುವ ಬದಲಾಗಿ ಸರಳವಾಗಿ ವಿವಾಹ ಮಾಡಿಕೊಂಡರೆ ಸಂಸಾರ ಆನಂದಮಯವಾಗಲಿದೆ ಎಂದು ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಷ.ಬ್ರ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬನ್ನೂರ ಗ್ರಾಮದಲ್ಲಿ ಭಾರತ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಇಂದಿನ ಯುವಕರು ಆದರ್ಶರಾಗಬೇಕಾದರೆ ಸರ್ವಧರ್ಮ ಸಾಮೂಹಿಕ ಮದುವೆಗಳಲ್ಲಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಬೇಕು. ಈ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯಬೇಕಿದೆ. ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.
ಶ್ರೀಕಾಂತ ದುಂಡಿಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲವಾರು ಜನರು ತಮ್ಮ ಮಕ್ಕಳ ವಿವಾಹ ಮಾಡಿಕೊಡಲು ಸಾಕಷ್ಟು ಪ್ರಮಾಣದಲ್ಲಿ ಸಾಲಮಾಡಿ, ಅದನ್ನು ತೀರಿಸಲಾಗದೆ ಜೀತ ಇರುವಂಥಹ ಸ್ಥಿತಿ ಬಂದೋದಗುವುದು. ಇದನ್ನರಿತ ಭಾರತ ಸೇವಾ ಸಂಸ್ಥೆ ಪ್ರತಿ ವರ್ಷ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮದ ಗುರು ಹಿರಿಯರ ಕೃಪಾಶೀರ್ವಾದ ಹಾಗೂ ಯುವಕರ ಸಹಕಾರದಿಂದ ಇಂಥ ಪುಣ್ಯ ಕಾರ್ಯ ಕೈಗೂಡುತ್ತಿವೆ ಎಂದರು.
ಭಾರತ ಸೇವಾ ಸಂಸ್ಥೆಯಿಂದ ತಾಲೂಕಿನ ವಿವಿಧ ಕೆರೆಗಳನ್ನು ಪುನಶ್ಚೇತನಗೊಳಿಸಿ ಅಚ್ಚುಕಟ್ಟಾಗಿ ಅಭಿವೃದ್ಧಿ ಮಾಡುವುದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.ನಾನು ಇಲ್ಲಿ ನೆಪ ಮಾತ್ರ, ಇದಕ್ಕೆ ಸಹಕರಿಸಿದ ಗ್ರಾಮದ ಹಿರಿಯರು ಯುವಕರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು. ಶಿಗ್ಗಾವಿ ಪುರಸಭೆ ಅಧ್ಯಕ್ಷ ಶಿವಪ್ರಸಾದ ಸೂರಗಿಮಠ, ಮುಖಂಡರಾದ ಡಿ.ಎಸ್,ಮಾಳಗಿ, ಎನ್.ಸಿ.ಪಾಟೀಲ, ಗಂಗಾಧರ ಸಾತಣ್ಣವರ, ಮಲ್ಲೇಶಪ್ಪ ಚೋಟೆಪ್ಪನವರ, ಶ್ರೀಕಾಂತ ಪೂಜಾರ, ರಾಜಕುಮಾರ ವೇರ್ಣೇಕರ, ಕೆ.ಎಸ್.ಭಗಾಡೆ, ಚಂದ್ರಣ್ಣ ನಡುವಿನಮನಿ, ತಿಪ್ಪಣ್ಣ ಸಾತಣ್ಣವರ, ಹನುಮರಡ್ಡಿ ನಡುವಿನಮನಿ, ವೀರೇಶ ಅಜೂರ, ರವಿ ಕುಡವಕ್ಕಲಿಗಾರ, ಫಕ್ಕೀರಜ್ಜ ಯಲಿಗಾರ, ಗುರುನಗೌಡ ಪಾಟೀಲ ಸೇರಿದಂತೆ ಗ್ರಾಮದ ಹಾಗೂ ತಾಲೂಕಿನ ವಿವಿಧ ಮುಖಂಡರು ಕಾರ್ಯಕ್ರಮದಲ್ಲಿದ್ದರು.