ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಕಾಣುತ್ತಿರುವಂತೆಯೇ, ಆಸ್ಪತ್ರೆಗಳಲ್ಲಿ ಭಾರೀ ಪ್ರಮಾಣದ ನೂಕು ನುಗ್ಗಲು ಕಂಡು ಬಂದಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ದಾದಿಯರು ಹೆಣಗಾಡುತ್ತಿದ್ದು ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೇಶದ ವೈದ್ಯಕೀಯ ವ್ಯವಸ್ಥೆ ಹಳಿ ತಪ್ಪುವ ಭೀತಿ ಎದುರಾಗಿದೆ. ದಿನವೂ ದೊಡ್ಡ ಸಂಖ್ಯೆಯಲ್ಲಿ ಜನರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಎಲ್ಲರೂ ಕೋವಿಡ್ ರೋಗಿಗಳೇ ಆಗಿರುವುದರಿಂದ ಅವರನ್ನು ನಿಭಾಯಿಸಲು ಕಷ್ಟವಾಗುತ್ತಿದೆ. ಈ ವಿಚಾರದಲ್ಲಿ ನಾವೀಗ ಅಸ ಹಾಯಕರಾಗಿದ್ದೇವೆ ಎಂದು ದಾದಿಯೊಬ್ಬರು ಹೇಳುತ್ತಾರೆ.
ದ. ಆಫ್ರಿಕಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಏರಿಕೆಯಾಗಿದ್ದು ಜೂನ್‌ನಲ್ಲಿ ಅತ್ಯಧಿಕ ಪ್ರಕರಣಗಳು ಏರಿಕೆಯಾಗಿವೆ. ಪರೀಕ್ಷೆ ಪ್ರಮಾಣವನ್ನು ಸರಕಾರ ಏರಿಕೆ ಮಾಡುತ್ತಿರುವಂತೆ, ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಆಸ್ಪತ್ರೆ ಗಳಲ್ಲಿ ರೋಗಿಗಳು ತುಂಬತೊಡಗಿದ್ದು, ತಾತ್ಕಾಲಿಕ ವಾರ್ಡ್‌ಗಳನ್ನು ಆಸ್ಪತ್ರೆಯ ಹೊರಗೆ ಮಾಡಬೇಕಾಗಿ ಬಂದಿದೆ. ದೇಶದ ಆರೋಗ್ಯ ವ್ಯವಸ್ಥೆಯಲ್ಲಿರುವ ಸೌಕರ್ಯಗಳು ಸಾಕಾಗುತ್ತಿಲ್ಲ. ಎರಡು ತಿಂಗಳ ಲಾಕ್‌ಡೌನ್ ಬಳಿಕ ದೇಶದಲ್ಲಿ ಲಾಕ್‌ಡೌನ್ ಸಡಿಲಿಸಲಾಗಿದೆ. ಆ ಬಳಿಕವೇ ಸೋಂಕಿತರ ಸಂಖ್ಯೆ ಏರತೊಡಗಿದೆ. ಇದರೊಂದಿಗೆ ಜೂನ್‌ನಲ್ಲಿ ನಿರುದ್ಯೋಗ ಪ್ರಮಾಣವೂ ಶೇ.30ರಷ್ಟಕ್ಕೆ ಏರಿಕೆಯಾಗಿದೆ. ಹಸಿವಿನ ಪ್ರಮಾಣವೂ ಏರಿಕೆಯಾಗಿದೆ.
ಜೊಹಾನ್ಸ್ ಬರ್ಗ್‌ನ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದರಿಂದ ನಗರದ ಹಲವು ಕಡೆಗಳಲ್ಲಿ ಲಾಕ್‌ಡೌನ್ ಅನ್ನು ಮರು ಹೇರಬೇಕು ಎಂಬ ಚಿಂತನೆಯನ್ನು ಆಡಳಿತ ಮಾಡುತ್ತಿದೆ. ನಿತ್ಯವೂ ಜೊಹಾರ್ನ್ಸ್ ಬರ್ಗ್‌ನಲ್ಲಿ ವರದಿಯಾಗುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆಯನ್ನು ನೋಡುತ್ತಿದ್ದರೆ ಚಿಂತೆಯಾಗುತ್ತಿದೆ ಎಂದು ವಿಟ್‌ವಾಟರ್‌ಸ್ಟಾಂಡ್ ವಿವಿಯ ಪ್ರಾಧ್ಯಾಪಕ ಪ್ರೊ| ಸಬೀರ್ ಮಧಿ ಹೇಳುತ್ತಾರೆ. ಈ ವಿಶ್ವವಿದ್ಯಾಲಯ, ಬ್ರಿಟನ್ ಆಕ್ಸ್‌ಫಡ್ ವಿ.ವಿ.ಯೊಂದಿಗೆ ಕೋವಿಡ್ ಔಷಧ ಕುರಿತು ಸಂಶೋಧನೆಗಳನ್ನು ನಡೆಸುತ್ತಿದೆ. ಕಳೆದ ವಾರ ಲಸಿಕೆಯ ಮಾನವ ಪ್ರಯೋಗ ಆರಂಭವಾಗಿದ್ದು, ಸಂಶೋಧನೆಗೆ ಆಯ್ದುಕೊಂಡ ವ್ಯಕ್ತಿಗಳ ಪಟ್ಟಿಯನ್ನು ರದ್ದುಗೊಳಿಸಲಾಗಿದೆ. ಕಾರಣ ಅವರೆಲ್ಲರಲ್ಲೂ ಕೋವಿಡ್ ಸೋಂಕು ಕಂಡುಬಂದಿದ್ದು, ಆರೋಗ್ಯವಂತ ವ್ಯಕ್ತಿಯ ಮೇಲೆ ಔಷಧದ ಪರಿಣಾಮ ತಿಳಿಯಲು ಉದ್ದೇಶಿಸಲಾಗಿತ್ತು.
ಈಗ ಎಲ್ಲೆಡೆ ರೋಗಿಗಳು ತುಂಬಿರುವುದರಿಂದ ಸಂಶೋಧನೆಯೇ ಯಶಸ್ವಿಯಾಗಿ ನಡೆಯುತ್ತದೆ ಎಂದು ಹೇಳಲೂ ಸಾಧ್ಯವಾಗದ ಸ್ಥಿತಿಗೆ ಬಂದಿದ್ದೇವೆ ಎಂದು ಅವರು ಹೇಳುತ್ತಾರೆ. ಆಫ್ರಿಕಾ ದೇಶಗಳಲ್ಲೇ ಶೇ.40ರಷ್ಟುಪ್ರಕರಣಗಳು ದಕ್ಷಿಣ ಆಫ್ರಿಕಾ ದೇಶವೊಂದರಲ್ಲೇ ಕಂಡುಬಂದಿದೆ. ಜೂನ್ ಆರಂಭದ ವೇಳೆ 34 ಸಾವಿರಷ್ಟಿದ್ದ ಪ್ರಕರಣಗಳು ಏಕಾಏಕಿ ಏರಿಕೆ ಕಂಡಿದ್ದು, ಈಗ ಇದರ ಪ್ರಮಾಣ 1.68 ಲಕ್ಷದ ಗಡಿಯನ್ನು ದಾಟಿದೆ.